ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಭವಿಸಿದ ಐದು ಹುಲಿಗಳ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಡಿಸಿಎಫ್ ವೈ. ಚಕ್ರಪಾಣಿ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ.
ಈ ಸಂಬಂಧ ಉನ್ನತ ಮಟ್ಟದ ತನಿಖಾ ಸಮಿತಿಯ ಪ್ರಾಥಮಿಕ ವರದಿಯ ಆಧಾರದ ಮೇಲೆ, ಕರ್ತವ್ಯ ನಿರ್ಲಕ್ಷ್ಯವು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ, ಸರ್ಕಾರದ ಅಧೀನ ಕಾರ್ಯದರ್ಶಿ ವಿ. ಪ್ರಸನ್ನಕುಮಾರ್ ಅಮಾನತು ಆದೇಶ ಹೊರಡಿಸಿದ್ದಾರೆ.
ಏಪ್ರಿಲ್ ತಿಂಗಳಲ್ಲೇ ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿ ಮಾಡಲು ಹಣ ಬಿಡುಗಡೆ ಮಾಡಲಾಗಿದ್ದರೂ, ಜೂನ್ ತಿಂಗಳವರೆಗೆ ವೇತನ ಪಾವತಿಸದಿರುವುದು ಡಿಸಿಎಫ್ ಚಕ್ರಪಾಣಿ ಅವರ ಗಂಭೀರ ಕರ್ತವ್ಯ ಲೋಪವಾಗಿದ್ದು, ಗಸ್ತು ಕಾರ್ಯದಲ್ಲಿ ಅಡಚಣೆ ಉಂಟಾಗಿದೆ. ಈ ಕಾರಣದಿಂದ ಮುಂಚೂಣಿಯ ಸಿಬ್ಬಂದಿ ಕರ್ತವ್ಯ ನಿರ್ವಹಣೆಯಿಂದ ಹಿಂದೆ ಸರಿದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಜೂನ್ 23ರಂದು ಹೊರಗುತ್ತಿಗೆ ಸಿಬ್ಬಂದಿ ಮೂರು ತಿಂಗಳ ವೇತನ ಪಾವತಿಯಾಗಿಲ್ಲ ಎಂಬುದಾಗಿ ಪ್ರತಿಭಟನೆ ನಡೆಸಿದ್ದರು. ಈ ನಿರ್ಲಕ್ಷ್ಯದ ಫಲವಾಗಿ ಗಸ್ತು ಕಾರ್ಯದಲ್ಲಿ ದುರ್ಬಲತೆ ಕಂಡುಬಂದಿದೆ.
ಹುಲಿಗಳ ಮರಣೋತ್ತರ ಪರೀಕ್ಷೆಯಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿಗಳು ಅತ್ಯಂತ ವಿಷಕಾರಿ ರಾಸಾಯನಿಕ ಕ್ರಿಮಿನಾಶಕ ಸೇವಿಸಿರುವುದೇ ಮರಣಕ್ಕೆ ಕಾರಣವಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಗಸ್ತು ಸಿಬ್ಬಂದಿಗೆ ಗುತ್ತಿಗೆದಾರನ ಮೂಲಕ ವೇತನ ಪಾವತಿ ಮಾಡಿಸಲು ವಿಫಲರಾದ ಚಕ್ರಪಾಣಿ ವಿರುದ್ಧ ವರದಿಯಲ್ಲಿ ಸ್ಕಂದಿಸಿದ ಅಂಶಗಳನ್ನೂ ಪರಿಗಣಿಸಿ, ಮಲೆ ಮಹದೇಶ್ವರ ವನ್ಯಜೀವಿ ಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿಯನ್ನು ಅಮಾನತು ಮಾಡಲಾಗಿದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.