- ಸರ್ಕಾರದಿಂದ ಹೊಸ ಆದೇಶ
ಬೆಂಗಳೂರು: ರಾಜ್ಯದ ಎಲ್ಲಾ ಡಿಗ್ರಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಇನ್ನುಮುಂದೆ ಸಿಸಿಟಿವಿ ಕಣ್ಗಾವಲು ಕಡ್ಡಾಯವಾಗಲಿದೆ. ರ‍್ಯಾಗಿಂಗ್, ಡ್ರಗ್ಸ್ ಚಟುವಟಿಕೆಗಳು ಮತ್ತು ಲೈಂಗಿಕ ಕಿರುಕುಳದಂತಹ ಅಕ್ರಮ ಹಾಗೂ ಅಸಾಧುವ್ಯವಹಾರಗಳನ್ನು ನಿಯಂತ್ರಣಕ್ಕೆ ತರಲು ಉನ್ನತ ಶಿಕ್ಷಣ ಇಲಾಖೆ ಈ ಮಹತ್ವದ ಕ್ರಮ ಕೈಗೊಂಡಿದೆ.
ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳು ಸೇರಿದಂತೆ ವಿಶ್ವವಿದ್ಯಾಲಯಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕೆಂದು ಸರಕಾರ ಆದೇಶ ಹೊರಡಿಸಿದೆ. ಈ ಆದೇಶದ ಅನ್ವಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೂ ಕೂಡ ಕಾಲೇಜು ಶಿಕ್ಷಣ ಇಲಾಖೆ ಕಡ್ಡಾಯವಾಗಿ ಸಿಸಿಟಿವಿ ಅಳವಡಿಕೆ ಮಾಡುವಂತೆ ಸೂಚನೆ ನೀಡಿದೆ.
ಸಿಸಿಟಿವಿ ಅಳವಡಿಕೆಗಾಗಿ ಪ್ರಸ್ತುತ ಕಾಲೇಜುಗಳಿಗೆ ಲಭ್ಯವಿರುವ ಅನುದಾನ ಬಳಸುವಂತೆ ಸೂಚಿಸಲಾಗಿದ್ದು, ಜುಲೈ 21ರೊಳಗೆ ಈ ಕುರಿತು ಪ್ರಗತಿ ವರದಿ ನೀಡಬೇಕೆಂದು ನಿಬಂಧನೆ ಮಾಡಲಾಗಿದೆ.
ಸಿಸಿಟಿವಿ ಅಳವಡಿಕೆಗೆ ಕಾರಣಗಳು:
- ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ರ‍್ಯಾಗಿಂಗ್ ಪ್ರಕರಣಗಳ ಸಂಖ್ಯೆಯಲ್ಲಿ ಇತ್ತೀಚೆಗೆ ಹೆಚ್ಚಳವಾಗಿದೆ. ಈ ಪರಿಸ್ಥಿತಿಗೆ ಕಡಿವಾಣ ಹಾಕಲು ಸಿಸಿಟಿವಿ ಕಣ್ಗಾವಲು ಅವಶ್ಯಕವಾಗಿದೆ.
- ಡ್ರಗ್ಸ್ ಮಾರಾಟ ಮತ್ತು ಬಳಕೆ ಪ್ರಕರಣಗಳು ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇವುಗಳ ಮೇಲೆ ನಿಗಾ ಇಡುವ ಅಗತ್ಯವಿದೆ.
- ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಸಿಸಿಟಿವಿ ಅನಿವಾರ್ಯವಾಗಿದೆ.
- ವಿವಿ ಮತ್ತು ಕಾಲೇಜು ಕ್ಯಾಂಪಸ್‌ಗಳಲ್ಲಿ ನಡೆಯುವ ಇತರೆ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.