- ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆಯ ಅರ್ಭಟ ಮುಂದುವರಿದಿದ್ದು, ಕಡಬ ತಾಲೂಕಿನ ಮಣ್ಣಗುಂಡಿಯಲ್ಲಿ ಭೂಕುಸಿತ ಸಂಭವಿಸಿದೆ. ಈ ಪರಿಣಾಮ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ (ರಾ.ಹೆ.75) ಬಂದ್ ಆಗಿದೆ.
ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮಣ್ಣಗುಂಡಿ ಬಳಿ ಗುಡ್ಡದ ಎರಡು ಬದಿಗಳ ಮಣ್ಣು ರಸ್ತೆ ಮೇಲೆ ಕುಸಿದಿದ್ದು, ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಬೆಂಗಳೂರಿನ ನಡುವಿನ ಲಾರಿ, ಬಸ್, ಟ್ರಕ್‌ಗಳ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಆದರೆ ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ಹೋಗಲು ಯಾವುದೇ ಅಡಚಣೆ ಇಲ್ಲ. ಧರ್ಮಸ್ಥಳ ಕ್ರಾಸ್‌ನಿಂದ ಸ್ವಲ್ಪ ಮುಂದೇ ಭೂಕುಸಿತ ಸಂಭವಿಸಿದ್ದು, ವಾಹನಗಳು ನೆಲ್ಯಾಡಿ ಬಳಿ ಎಡಕ್ಕೆ ತಿರುಗಿ ಕೊಕ್ಕಡ ಮಾರ್ಗವಾಗಿ ರೈ75ಕ್ಕೆ ಸೇರಬಹುದೆಂದು ಎಸ್‌ಪಿ ಡಾ. ಅರುಣ್ ಮನವಿ ಮಾಡಿದ್ದಾರೆ.
ಇದಕ್ಕೂ ಹೆಚ್ಚುವರಿಯಾಗಿ, ಮಂಗಳೂರಿನ ಕದ್ರಿ ಹಿಲ್ಸ್ ಪ್ರದೇಶದಲ್ಲಿರುವ ಸರ್ಕ್ಯೂಟ್ ಹೌಸ್ ಬಳಿ ಭಾರೀ ಗುಡ್ಡ ಕುಸಿತ ಸಂಭವಿಸಿದ್ದು, ಅಪಾರ ಪ್ರಮಾಣದ ಕಲ್ಲು ಹಾಗೂ ಮಣ್ಣು ರಸ್ತೆ ಮೇಲೆ ಬಿದ್ದಿದೆ. ಇದು ರಾತ್ರಿ ಸಂಭವಿಸಿದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ. ಇದೀಗ ಪಾಲಿಕೆ ಸಿಬ್ಬಂದಿಗಳು ತಕ್ಷಣ ತಪಾಸಣೆ ನಡೆಸಿ ರಸ್ತೆ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮೇರಿಹಿಲ್‌ನ ಕೆನರಾ ವಿಕಾಸ ಕಾಲೇಜು ಪ್ರದೇಶದಲ್ಲಿಯ ಕಾಂಪೌಂಡ್ ಗೋಡೆ ಬುಧವಾರ ತಡರಾತ್ರಿ ಕುಸಿದು ಬಿದ್ದು, ಪಕ್ಕದಲ್ಲಿ ನಿಲ್ಲಿಸಿದ್ದ 16 ಬೈಕ್ ಹಾಗೂ ಒಂದು ಇನೋವಾ ಕಾರು ಸಂಪೂರ್ಣ ಹಾನಿಗೀಡಾಗಿದೆ. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಇದನ್ನು ಓದಿ –ಮಂಡ್ಯ: ಟ್ರ್ಯಾಕ್ಟರ್ ಹರಿದು ಪಾದಚಾರಿ ಸಾವು
ಈ ಘಟನೆಗಳೆಲ್ಲವೂ ಜಿಲ್ಲೆಯ ಭದ್ರತೆಗೆ ಸವಾಲಾಗಿ ಪರಿಣಮಿಸಿದ್ದು, ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.