ನವದೆಹಲಿ: ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಧ್ಯಪ್ರದೇಶದ ಇಂದೋರ್ ಮುನ್ನಡೆ ಸಾಧಿಸಿ ಮೊದಲ ಸ್ಥಾನ ಪಡೆಯಿತು. ಕರ್ನಾಟಕದ ಮೈಸೂರು 3ನೇ ಸ್ಥಾನಕ್ಕೇರಿದೆ. ಇಂದೋರ್ ಸತತ ಏಳನೇ ಬಾರಿಗೆ ನಂ.1 ಸ್ಥಾನ ಕಾಯ್ದುಕೊಂಡಿರುವುದು ವಿಶೇಷವಾಗಿದೆ.
ಗುರುವಾರ ನಡೆದ ಕಾರ್ಯಕ್ರಮದಲ್ಲಿ ‘ಸ್ವಚ್ಛ ಸರ್ವೇಕ್ಷಣ್ 2024-25’ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಘೋಷಿಸಿದರು. ‘ಸೂಪರ್ ಸ್ವಚ್ಛ ಲೀಗ್’ ಎಂಬ ಹೊಸ ವಿಭಾಗದಲ್ಲಿ ಇಂದೋರ್ ಅತ್ಯಂತ ಸ್ವಚ್ಛ ನಗರ ಎಂದು ಘೋಷಣೆಯಾಯಿತು. ಇಂದೋರ್ ನಂತರ ಛತ್ತೀಸಗಢದ ಅಂಬಿಕಾಪುರ 2ನೇ ಸ್ಥಾನ ಮತ್ತು ಮೈಸೂರು 3ನೇ ಸ್ಥಾನದಲ್ಲಿವೆ.
ಹತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ ಗುಜರಾತ್‌ನ ಅಹಮದಾಬಾದ್ ಅತ್ಯುತ್ತಮ ಸ್ವಚ್ಛತೆಯ ನಗರವಾಗಿ ಗುರುತಿಸಲ್ಪಟ್ಟಿದೆ. ಇದನ್ನು ಛತ್ತೀಸಗಢದ ರಾಯ್ಪುರ, ಮಹಾರಾಷ್ಟ್ರದ ನವಿ ಮುಂಬೈ, ಮಧ್ಯಪ್ರದೇಶದ ಜಬಲ್ಪುರ ಮತ್ತು ಗುಜರಾತ್‌ನ ಸೂರತ್ ಅನುಸರಿಸಿವೆ.
ಈ ಬಾರಿ ‘ಸೂಪರ್ ಲೀಗ್’ ಎಂಬ ಹೊಸ ವಿಭಾಗವನ್ನು ಪರಿಚಯಿಸಿದ್ದು, ಇದರ ಮೂಲಕ ಹೆಚ್ಚಿನ ನಗರಗಳ ನೈರ್ಮಲ್ಯ ಮಟ್ಟವನ್ನು ಗುರುತಿಸಲಾಗಿದೆ. ಸೂರತ್ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಪ್ರಥಮ ಸ್ಥಾನಕ್ಕಾಗಿ ಇಂದೋರ್ ಜೊತೆ ಪೈಪೋಟಿ ನೀಡಿರುವುದು ಗಮನಾರ್ಹವಾಗಿದೆ. ಹಿಂದೆ ಪ್ಲೇಗ್ ಪೀಡಿತ ನಗರ ಎಂಬ ಕಲಂಕ ಹೊಂದಿದ್ದ ಸೂರತ್ ಈಗ ಸ್ವಚ್ಛತೆಯಲ್ಲಿ ಮಾದರಿಯಾಗಿ ತಿರುಗಿದೆ.
ಈ ಸಮೀಕ್ಷೆಯು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ವತಿಯಿಂದ ‘ಸ್ವಚ್ಛ ಭಾರತ ಮಿಷನ್–ನಗರ’ ಯೋಜನೆಯಡಿ ನಡೆಸಲಾಗಿದೆ. ವಿಶ್ವದ ಅತಿದೊಡ್ಡ ನಗರ ಸ್ವಚ್ಛತಾ ಸಮೀಕ್ಷೆಯೆಂದು ಸರ್ಕಾರ ಇದನ್ನು ಪ್ರಚಾರ ಮಾಡಿದೆ.ಇದನ್ನು ಓದಿ –ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯ ಅರ್ಭಟ: ಮಣ್ಣಗುಂಡಿ ಬಳಿ ಭೂಕುಸಿತ
ಇಂದು ನಡೆದ ಸಮಾರಂಭದಲ್ಲಿ ಒಟ್ಟು 78 ಪ್ರಶಸ್ತಿಗಳನ್ನು ಘೋಷಿಸಲಾಯಿತು. ಈ ಸಂದರ್ಭದಲ್ಲಿ ಸಚಿವ ಖಟ್ಟರ್, ರಾಜ್ಯ ಸಚಿವ ತೋಖನ್ ಸಾಹು ಹಾಗೂ MoHUA ಕಾರ್ಯದರ್ಶಿ ಶ್ರೀನಿವಾಸ್ ಕೆ. ಉಪಸ್ಥಿತರಿದ್ದರು.