ಬಳ್ಳಾರಿ, ಜುಲೈ 23 : ಬುಧವಾರದಂದು ಬೆಂಗಳೂರಿನ ಲೋಕಾಯುಕ್ತ ತನಿಖಾ ತಂಡ ಬಳ್ಳಾರಿಯಲ್ಲಿ ಭರ್ಜರಿ ದಾಳಿ ನಡೆಸಿದ್ದು, ಹಲವು ಆಸ್ತಿಗಳ ಕುರಿತಾಗಿ ಪರಿಶೀಲನೆ ನಡೆಸಿದೆ.
ಬೆಂಗಳೂರು ನಗರ ಹಾಗೂ ಗ್ರಾಮೀಣ ಯೋಜನಾ ಇಲಾಖೆಯ ಅಧಿಕಾರಿ ಮಾರುತಿ ಬಗಲಿ ವಿರುದ್ಧ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಮಾರುತಿ ಬಗಲಿ ಬೆಂಗಳೂರು ನಿವಾಸಿಯಾಗಿದ್ದರೂ, ಬಳ್ಳಾರಿಯಲ್ಲಿ ಮೂರು ಕಡೆಗಳಲ್ಲಿ ಆಸ್ತಿಗಳನ್ನು ಹೊಂದಿರುವ ಬಗ್ಗೆ ಮಾಹಿತಿಯ ಮೇರೆಗೆ ಅವರ ನಿವಾಸ ಹಾಗೂ ಆಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ.
ಬಳ್ಳಾರಿಯಲ್ಲಿನ ಆಸ್ತಿಗಳ ಜತೆಗೆ ರಾಜ್ಯದ ಇತರೆ ಕಡೆಗಳಲ್ಲಿ ಸಹ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಲೋಕಾಯುಕ್ತ ತನಿಖಾ ತಂಡ ಸಕ್ರಿಯ ತನಿಖೆ ಮುಂದುವರಿಸಿದೆ.
ಶಂಕಿತ ಆಸ್ತಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಮುಂದೆ ಅಧಿಕೃತ ಮಾಹಿತಿ ಹೊರಬರುವ ನಿರೀಕ್ಷೆಯಿದೆ.