ಬೆಂಗಳೂರು: ರಾಜ್ಯದ ಅಭಿವೃದ್ಧಿ ಕಾರ್ಯಗಳ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಂಗಳವಾರ)ರಿಂದ ನಾಲ್ಕು ದಿನಗಳ ಕಾಲ ಸಚಿವರು ಮತ್ತು ಶಾಸಕರೊಂದಿಗೆ ಜಿಲ್ಲಾವಾರು ಸಭೆ ನಡೆಸಲಿದ್ದಾರೆ. ಈ ಸಭೆಗಳ ಪ್ರಾರಂಭವನ್ನು ಅವರು ತಮ್ಮ ತವರು ಜಿಲ್ಲೆ ಮೈಸೂರಿನಿಂದಲೇ ಇಂದು ಸಂಜೆ ಆರಂಭಿಸಲಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸಚಿವರೊಂದಿಗೆ ಸಭೆ ನಡೆಸಿದ ಬಳಿಕ, ಈಗ ಸಿಎಂ ಮುನ್ನಡೆಯಲ್ಲಿ ಈ ಮಹತ್ವದ ಸಮಾಲೋಚನೆ ನಡೆಯಲಿದೆ. ಮುಖ್ಯಮಂತ್ರಿಗಳು ಈಗಾಗಲೇ ಪ್ರತಿ ಶಾಸಕರಿಗೆ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಆದೇಶಿಸಿದ್ದರು. ಈ ಅನುದಾನದ ಬಳಕೆ, ಯೋಜನೆಗಳ ಅನುಷ್ಠಾನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಪ್ರತಿ ಶಾಸಕರೊಂದಿಗೆ ಸುಮಾರು 10 ನಿಮಿಷಗಳ ಕಾಲ ಸಿಎಂ ವೈಯಕ್ತಿಕವಾಗಿ ಚರ್ಚೆ ನಡೆಸಲಿದ್ದು, ಕ್ಷೇತ್ರದ ಪ್ರಗತಿಯ ವಿಚಾರವಾಗಿ ಮಾಹಿತಿ ಪಡೆದುಕೊಳ್ಳಲಿದ್ದಾರೆ.ಇದನ್ನು ಓದಿ –ಮೈಸೂರು: ಕುಟುಂಬ ಕಲಹಕ್ಕೆ ಬೇಸತ್ತ ಪೊಲೀಸ್ ಪೇದೆ ಆತ್ಮಹತ್ಯೆ
ಈ ಕುರಿತಂತೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ನೀಡಿದ ಮಾಹಿತಿಯಲ್ಲಿ, 2025-26ನೇ ಸಾಲಿನಲ್ಲಿ 8,000 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನವನ್ನು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಹಂಚಲಾಗುವುದಾಗಿ ತಿಳಿಸಿದ್ದಾರೆ. ಆಡಳಿತ ಪಕ್ಷದ ಶಾಸಕರಿಗೆ ತಲಾ 50 ಕೋಟಿ ರೂಪಾಯಿಗಳೂ, ವಿರೋಧ ಪಕ್ಷದ ಶಾಸಕರಿಗೆ ತಲಾ 25 ಕೋಟಿ ರೂಪಾಯಿಗಳೂ ಮೀಸಲಾಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.