ಹುಟ್ಟು… ದೇವರ ಸೃಷ್ಟಿಯ ಅದ್ಭುತದಲ್ಲೊಂದು. ಯಾರು ಎಲ್ಲಿ? ಯಾರ ಮಡಿಲಲ್ಲಿ ಜೊತೆಯಾಗಿ ಹುಟ್ಟಬೇಕೆಂಬುದು ಭಗವಂತನ ನಿರ್ಣಯ.
ಋಣಾನುಬಂಧ ರೂಪೇಣ ಪಶುಪತಿಸುತಾಲಯ…. ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಯಾವುದೇ ಒಂದು ವ್ಯಕ್ತಿಗಳೊಂದಿಗೆ ಸಂಬಂಧದ ಬೆಸುಗೆ ಆಗಬೇಕಾದರೆ ನಮಗರಿವಿಲ್ಲದ ಕಾರಣವೊಂದನ್ನು ಖಂಡಿತ ಆ ದೇವರು ಸೃಷ್ಟಿಸಿರುತ್ತಾನೆ.
ನನ್ನ ಅನಿಸಿಕೆಯನ್ವಯ ‘ಸಹೋದರ’ ನೆಂದರೆ, ಸದಾಕಾಲ ಹೊಣೆಹೊತ್ತು ಧೈರ್ಯ ತುಂಬುತ ರಂಜಿಸುವವ…. ಎನ್ನಬಹುದೇನೋ. ಏನೇ ಕಷ್ಟ ಬಂದರೂ.. ಸದಾಕಾಲ ಸಹೋದರಿಯರ ರಕ್ಷಣೆ ಮಾಡುವ ಹೊಣೆ ಹೊತ್ತು ಅವರ ಖುಷಿಗಾಗಿ ಶ್ರಮಿಸುತ್ತಾ, ಜೊತೆಯಾಗಿದ್ದುಕೊಂಡು ಧೈರ್ಯ ತುಂಬುತ್ತಾ ಸೋದರಿಯರರನ್ನು ಖುಷಿಯಾಗಿಡುವಲ್ಲಿ ರಂಜಿಸುತ್ತ ಬದುಕು ನಡೆಸುವ ಜೀವವೇ ಸಹೋದರ.
ಹೌದು… ಸಹೋದರರೆಂದರೆ ಒಂತರ ವಿಶೇಷ ಗೌರವ. ಹೆಣ್ಣು ಮಕ್ಕಳಿಗೆ ಅಣ್ಣ ಅಥವಾ ತಮ್ಮನೆಂದರೆ ಪ್ರೀತಿ ಅಕ್ಕರೆ. ಸಹೋದರರು ಕೂಡ ತನ್ನ ಒಡಹುಟ್ಟಿದವರನ್ನು ವಿಶೇಷ ಕಾಳಜಿ ಪ್ರೀತಿಯಿಂದ ಕಾಪಾಡುತ್ತಾರೆ.
ಒಡಹುಟ್ಟಿದವರ ಬಾಂಧವ್ಯ ತಾಯಿಯಿಂದಾದರೆ, ದೇವರ ಬೆಸುಗೆಯ ಸಹೋದರತ್ವ ಸಂಬಂಧ ಬಹಳ ಮಹತ್ವವೆನಿಸಿಕೊಳ್ಳುತ್ತದೆ.
ಎಲ್ಲೋ ಹುಟ್ಟಿ ಎಲ್ಲೂ ಬೆಳೆದು ಕಾರಣಗಳಿಲ್ಲದೆ ಪರಿಚಯವಾಗಿ ಒಡಹುಟ್ಟಿದವರಂತೆ ಪ್ರೀತಿ ಕಾಳಜಿ ತೋರುತ್ತ ಜೀವನದ ಏರುಪೇರುಗಳಿಗೆ ಸ್ಪಂದಿಸುತ್ತಾ, ದೂರವಿದ್ದರೂ ಮನಸ್ಸಿಗೆ ಹತ್ತಿರವಾಗಿ ಆತ್ಮೀಯರಾಗಿ ಸೋದರಾಗುವುದು ಅದ್ಭುತವೇ ಸರಿ.ಯಾವುದೋ ಜನ್ಮದ ಋಣಾನುಬಂಧದಿಂದ ಈ ಭ್ರಾತೃತ್ವ ಬೆಳೆಯುತ್ತದೆ
ಸಹೋದರ ಕೇವಲ ಸಹೋದರನಾಗಿರದೆ ಒಬ್ಬ ಒಳ್ಳೆಯ ಸ್ನೇಹಿತ ಕೂಡ ಹೌದು. ತನ್ನೆಲ್ಲ ಕಷ್ಟ ಸುಖಗಳನ್ನು ನಿರ್ಭಯವಾಗಿ ಹಂಚಿಕೊಳ್ಳಬಹುದು. ಭಿನ್ನವಾದ ಸಲುಗೆ ನಂಬಿಕೆ ಸಹೋದರನ ಮೇಲೆ ಮೂಡಿರುತ್ತದೆ. ಯಾವುದೇ ಸಮಸ್ಯೆಗಳಿದ್ದರೂ ತಕ್ಕಂತೆ ಪರಿಹಾರಗಳನ್ನು ನೀಡಿ ಸಂತೈಸುವ ಕೈಗಳೆಂದರೆ ಅದು ಸಹೋದರ.
ತಂದೆ ತಾಯಂದಿರು ದೀರ್ಘಕಾಲ ಜೊತೆ ಇರಲಾಗದು ಎಂಬ ಕಾರಣಕ್ಕೆ ಸೃಷ್ಟಿಯಾದ ಸಂಬಂಧವೇ ಈ ಸಹೋದರ ಇರಬಹುದು .
ಹೆತ್ತವರಷ್ಟೇ ಪ್ರೀತಿ ಕಾಳಜಿ ತೋರುತ್ತ ಸದಾ ಕಾವಲಾಗಿರುವವನು ಸಹೋದರ

ದರ್ಶಿನಿಪ್ರಸಾದ್ ವನಗೂರ