ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯು ಮಂತ್ರಾಲಯದಲ್ಲಿ ಮತ್ತು ದೇಶದಾದ್ಯಂತ ಇರುವ ರಾಘವೇಂದ್ರ ಮಠಗಳಲ್ಲಿ ಆಚರಿಸಲಾಗುವ ಒಂದು ಪ್ರಮುಖ ಉತ್ಸವವಾಗಿದೆ. ಇದು ರಾಘವೇಂದ್ರ ಸ್ವಾಮಿಗಳು ಜೀವ ಸಮಾಧಿಯಾದ ದಿನದ ಸ್ಮರಣೆಯಲ್ಲಿ ಆಚರಿಸಲಾಗುತ್ತದೆ. ಈ ವರ್ಷ ೩೫೪ ನೇ ಆರಾಧನಾ ಮಹೋತ್ಸವವನ್ನು ಆಗಸ್ಟ್ ೮ ರಿಂದ ೧೪ ರವರೆಗೆ ಆಚರಿಸಲಾಗುತ್ತಿದೆ.
ಶ್ರೀ ಗುರು ರಾಘವೇಂದ್ರ ಸ್ವಾಮಿಗಳು (೧೫೯೫-೧೬೭೧), ೨೫-೦೨-೧೫೯೫ ರಂದು ಭುವನಗಿರಿಯಲ್ಲಿ,(ತಮಿಳುನಾಡು)ಜನಿಸಿದರು.ಅವರು ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂತರಲ್ಲಿ ಪ್ರಮುಖರು. ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ.
೧೬ ನೇ ಶತಮಾನದ ಪೂಜ್ಯ ಸಂತ ಮತ್ತು ಆಧ್ಯಾತ್ಮಿಕ ಗುರು ಶ್ರೀ ರಾಘವೇಂದ್ರ ಸ್ವಾಮಿಗಳು ವೈಷ್ಣವ ಸಂಪ್ರದಾಯವನ್ನು ಸಕ್ರಿಯವಾಗಿ ಪ್ರಚಾರ ಮಾಡಿದರು ಮತ್ತು ಮಧ್ವಾಚಾರ್ಯರ ದ್ವೈತ ತತ್ವಶಾಸ್ತ್ರವನ್ನು ಹರಡುವಲ್ಲಿ ಮಹತ್ವದ ಪಾತ್ರ ವಹಿಸಿದರು
ಶ್ರೀ ಪ್ರಹ್ಲಾದ ರಾಯರ ನಾಲ್ಕನೇ ಅವತಾರ ಶ್ರೀ ಗುರು ರಾಘವೇಂದ್ರರು. ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ.
ಶ್ರದ್ಧೆ, ಭಕ್ತಿಯಿಂದ ನೆನೆದು ಸ್ಮರಿಸುವವರ ಎಂದಿಗೂ ಕೈ ಬಿಡರು ಈ ಕಲಿಯುಗದ ಕಾಮಧೇನು.ಬೇಡಿದ ವರಗಳ ನೀಡುವ ಕಲ್ಪವೃಕ್ಷ ಈ ಗುರುಸಾರ್ವಭೌಮರು
ರಾಘವೇಂದ್ರ ಸ್ವಾಮಿ (ಮೂಲತಃ ವೆಂಕಟನಾಥ) ತಮಿಳುನಾಡಿನ ಭುವನಗಿರಿ ಪಟ್ಟಣದಲ್ಲಿ ಸಂಗೀತ ಮತ್ತು ಪಾಂಡಿತ್ಯದಲ್ಲಿ ಪರಿಣತಿ ಹೊಂದಿರುವ ದೇಶಸ್ಥ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ಮುತ್ತಜ್ಜ ಕೃಷ್ಣಭಟ್ಟರು ವಿಜಯನಗರದ ದೊರೆ ಕೃಷ್ಣದೇವರಾಯರಿಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಅವರ ಅಜ್ಜ ಕನಕಾಚಲ ಭಟ್ಟ ಮತ್ತು ಅವರ ತಂದೆ ತಿಮ್ಮಣ್ಣಾಚಾರ್ಯರು ಇಬ್ಬರೂ ಬಹಳ ನುರಿತ ವಿದ್ವಾಂಸರು ಮತ್ತು ಸಂಗೀತಗಾರರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಪತನದ ನಂತರ, ತಿಮ್ಮಣ್ಣಾಚಾರ್ಯರು ತಮ್ಮ ಪತ್ನಿ ಗೋಪಿಕಾಂಬ ಅವರೊಂದಿಗೆ ಕoಚಿಗೆ ಸ್ಥಳಾಂತರಗೊಂಡರು. ವೆಂಕಟನಾಥರಿಗೆ ಗುರುರಾಜ ಮತ್ತು ವೆಂಕಟಾಂಬ ಎಂಬ ಇಬ್ಬರು ಒಡಹುಟ್ಟಿದವರು ಇದ್ದರು. ಅವರ ತಂದೆಯ ಅಕಾಲಿಕ ಮರಣದ ನಂತರ, ವೆಂಕಟನಾಥ ಅವರ ಶಾಲಾ ಶಿಕ್ಷಣವು ಮಧುರೈನಲ್ಲಿದ್ದ ಅವರ ಸೋದರ ಮಾವ ಲಕ್ಷ್ಮಿ ನರಸಿಂಹಾಚಾರ್ಯರ ಆಧ್ವರ್ಯದಲ್ಲಿ ನಡೆಯಿತು. ಇಲ್ಲಿ ಅವರು ಸಂಗೀತದಲ್ಲಿಯೂ ತರಬೇತಿ ಪಡೆದರು. ನಂತರ ಅವರು ವಿವಾಹವಾದರು.
ವಿವಾಹದ ನಂತರ ಕುಂಭಕೋಣಕ್ಕೆ ಬಂದು ಶ್ರೀಸುಧೀಂದ್ರ ತೀರ್ಥರಲ್ಲಿ ದ್ವೈತ ಸಿದ್ಧಾಂತದಲ್ಲಿ ಉನ್ನತ ವ್ಯಾಸಂಗ ಮಾಡತೊಡಗಿದರು. ಇಲ್ಲಿ ಮಕ್ಕಳಿಗೆ ಸಂಸ್ಕೃತ ಮತ್ತು ವೇದಗಳನ್ನು ಕಲಿಸಲು ಮುಂದಾಗುತ್ತಾರೆ. ಯಾರಿಂದಲೂ ಏನೂ ಫಲವನ್ನು ಬಯಸದೆ ಎಲ್ಲರಿಗೂ ವಿದ್ಯಾದಾನ ಮಾಡುತ್ತಾರೆ.
ಶ್ರೀ ಸುಧೀಂದ್ರ ತೀರ್ಥರು ವೇದಾಂತ ಸಾಮ್ರಾಜ್ಯಕ್ಕೆ ತಕ್ಕಂತಹ ಉತ್ತರಾಧಿಕಾರಿಯನ್ನು ಹುಡುಕುತ್ತಿರುವಾಗ, ಅವರ ಕನಸಿನಲ್ಲಿ ಶ್ರೀಮೂಲರಾಮದೇವರೇ ಬಂದು ವೆಂಕಟನಾಥರನ್ನು ಶಿಷ್ಯರಾಗಿ ಸ್ವೀಕರಿಸುವಂತೆ ಸೂಚಿಸಿದರು. ಈ ವಿಷಯವನ್ನು ಸುಧೀಂದ್ರ ತೀರ್ಥರು ವೆಂಕಟನಾಥರಿಗೆ ತಿಳಿಸಿದಾಗ, ವೆಂಕಟನಾಥರು ಪತ್ನಿ ಮತ್ತು ಮಗನನ್ನು ನೆನಸಿ ಆಗುವುದಿಲ್ಲ ಎಂಬ ಉತ್ತರವನ್ನು ಕೊಡುತ್ತಾರೆ. ಆದರೆ ಇವರ ಕನಸಲ್ಲಿ ಸಾಕ್ಷಾತ್ ಸರಸ್ವತಿ ದೇವಿಯೇ ಬಂದು ಸನ್ಯಾಶ್ರವನ್ನು ಸ್ವೀಕರಿಸುವಂತೆ ಆಜ್ಞೆ ನೀಡುತ್ತಾಳೆ. ಆ ನಂತರ ಮನಸ್ಸು ಬದಲಿಸಿಕೊಂಡು ಫಾಲ್ಗುಣ ಶುದ್ಧ ಬಿದಿಗೆಯಂದು ತಂಜಾವೂರಿನಲ್ಲಿ ವಿಧ್ವಾಂಸರ ಸಮ್ಮುಖದಲ್ಲಿ ಸನ್ಯಾಸತ್ವವನ್ನು ಸ್ವೀಕರಿಸುತ್ತಾರೆ. ಅಂದೇ ಶ್ರೀ ರಾಘವೇಂದ್ರ ತೀರ್ಥ ರೆಂಬ ಹೆಸರನ್ನು ನಾಮಕರಣ ಮಾಡಲಾಯಿತು. ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕವನ್ನು ನೆರವೇರಿಸಲಾಯಿತು. ಆ ಬಳಿಕ ಭಕ್ತರು ಇವರನ್ನು ರಾಯರನ್ನಾಗಿ ಸ್ವೀಕರಿಸಿದರು ಎಂದು ಇತಿಹಾಸದ ಪುಟಗಳು ವಿವರಿಸುತ್ತವೆ ೧೬೨೪ ರಲ್ಲಿ, ರಾಘವೇಂದ್ರ ಸ್ವಾಮಿಗಳು ಕುಂಭಕೋಣಂ ಮಠದ ಪೀಠಾಧಿಪತಿ ಸ್ಥಾನವನ್ನು ವಹಿಸಿಕೊಂಡರು, ಇದನ್ನು ಹಿಂದೆ ವಿಜಯೀಂದ್ರ ಮಠ ಅಥವಾ ದಕ್ಷಿಣಾದಿ ಮಠ ಎಂದು ಕರೆಯಲಾಗುತ್ತಿತ್ತು ಮತ್ತು ಪ್ರಸ್ತುತ ಇದನ್ನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠ ಎಂದು ಗುರುತಿಸಲಾಗಿದೆ. ವ್ಯಾಸರಾಜ ಮಠ ಮತ್ತು ರಾಘವೇಂದ್ರ ಮಠಗಳ ಜೊತೆಗೆ ಉತ್ತರಾದಿ ಮಠವನ್ನು ದ್ವೈತ ವೇದಾಂತದ ಮೂರು ಪ್ರಮುಖ ಸಂಸ್ಥೆಗಳೆಂದು ಪರಿಗಣಿಸಲಾಗಿದೆ ಮತ್ತು ಒಟ್ಟಾರೆಯಾಗಿ ಮಠತ್ರಯ ಎಂದು ಕರೆಯಲಾಗುತ್ತದೆ.
ಇವರ ಮೂಲ ಬೃಂದಾವನವು (ಸಶರೀರ) ಈಗಿನ ಆಂಧ್ರ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಕರ್ನಾಟಕದ ರಾಯಚೂರಿನಿಂದ ಸುಮಾರು ೧ ಘಂಟೆ ಪ್ರಯಾಣ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಿಗೆಯವರೆಗೆ ಭವ್ಯ ಆರಾಧನೆ ನಡೆಯುತ್ತದೆ.
ಆರಾಧನೆಯ ಅಂಗವಾಗಿ ಏಳು ದಿನಗಳ ಕಾಲ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಮೊದಲ ದಿನವನ್ನು ಪೂರ್ವಾರಾಧನೆ , ಎರಡನೇ ದಿನವನ್ನು ಮಧ್ಯಾರಾಧನೆ ಮತ್ತು ಮೂರನೇ ದಿನವನ್ನು ಉತ್ತರಾರಾಧನೆ ಎಂದು ಕರೆಯಲಾಗುವುದು.ಇದನ್ನು ಓದಿ –“ತುಂಗಾ ತೀರದಲಿ ನಿಂತ ಯತಿವರ್ಯ “
ಭಕ್ತರು ಪೂಜೆ, ಗಾನ ಸೇವೆ, ಪರಿಮಳ ಪ್ರಸಾದ ವಿತರಣೆ ಮುಂತಾದ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಭಕ್ತರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಒತ್ತು ನೀಡಲಾಗುತ್ತದೆ. ಉಚಿತ ವೈದ್ಯಕೀಯ ಸೇವೆ, ಆ್ಯಂಬುಲೆನ್ಸ್ ಸೇವೆ ಮತ್ತು ಹೆಚ್ಚುವರಿ ಬಸ್ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.
ಜೈ ಶ್ರೀ ಗುರು ರಾಘವೇಂದ್ರ
~ಸಂಪಿಗೆ ವಾಸು, ಬಳ್ಳಾರಿ