- ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ
ಬೆಂಗಳೂರು: ಕೆ.ಆರ್.ಮಾರ್ಕೆಟ್ ಸಮೀಪದ ನಗರ್ತಪೇಟೆಯ ವಾಣಿಜ್ಯ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಈ ಅವಘಡದಲ್ಲಿ ರಾಜಸ್ಥಾನ ಮೂಲದ ಮದನ್‌ಸಿಂಗ್ ಸುಟ್ಟು ಕರಕಲಾಗಿದ್ದು, ಮೃತಪಟ್ಟಿರುವುದು ದೃಢಪಟ್ಟಿದೆ.
ಮೂರನೇ ಮಹಡಿಯಲ್ಲಿ ಇರುವ ಮನೆಯಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಆ ಸಂದರ್ಭದಲ್ಲಿ ಮಳಿಗೆಯೊಳಗೇ ಇದ್ದ ಮದನ್‌ಸಿಂಗ್ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ, ಅದೇ ಮನೆಯಲ್ಲಿ ವಾಸಿಸುತ್ತಿದ್ದ ಪತಿ, ಪತ್ನಿ ಹಾಗೂ 8 ಮತ್ತು 5 ವರ್ಷದ ಇಬ್ಬರು ಮಕ್ಕಳ ಪ್ರಾಣಾಪಾಯದ ಶಂಕೆ ವ್ಯಕ್ತವಾಗಿದೆ. ಇನ್ನೂ ಮೂವರು ಮೃತಪಟ್ಟಿರಬಹುದೆಂಬ ಆತಂಕ ಹೆಚ್ಚಾಗಿದೆ.
ಅಗ್ನಿ ಅವಘಡದ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ದಟ್ಟ ಹೊಗೆ ಆವರಿಸಿರುವುದರಿಂದ ಸಿಬ್ಬಂದಿ ಆಕ್ಸಿಜನ್ ಸಿಲಿಂಡರ್ ಧರಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ಮೂರು ಅಂಬುಲೆನ್ಸ್‌ಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ.
ಇನ್ನೂ ಕಟ್ಟಡದೊಳಗೆ ತಾಯಿ ಮತ್ತು ಮಗು ಸಿಲುಕಿರುವ ಸಾಧ್ಯತೆ ವ್ಯಕ್ತವಾಗಿದ್ದು, ಅವರನ್ನು ಪಾರುಮಾಡಲು ಹರಸಾಹಸ ನಡೆಯುತ್ತಿದೆ. ಅವಘಡಕ್ಕೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ.