ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಲಾಗಿದೆ ಎಂಬ ಅನಾಮಿಕ ದೂರು ಆಧರಿಸಿ 20 ದಿನಗಳಿಂದ ನಡೆದ ಸೊಶೋಧನೆ ಕಾರ್ಯ ಇದೀಗ ಅಂತ್ಯದ ಹಂತಕ್ಕೆ ಬಂದಿದೆ. ದೂರುದಾರನ ಹೇಳಿಕೆಯನ್ನು ನಂಬಿ ಎಸ್‌ಐಟಿ (SIT) ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ 25ಕ್ಕೂ ಹೆಚ್ಚು ಗುಂಡಿ ತೋಡಿದರೂ, ಒಂದೇ ಒಂದು ಸಾಕ್ಷಿಯೂ ಸಿಕ್ಕಿಲ್ಲ.
ಆರಂಭದಲ್ಲಿ ದೂರುದಾರ ತಂದುಕೊಟ್ಟ ಬುರುಡೆ ಆಧಾರವಾಗಿ ತನಿಖೆ ನಡೆಸಲಾಗಿದ್ದರೂ, ಅದೇ ಬುರುಡೆ ಇದೀಗ ಅವನಿಗೆ ಕಂಟಕವಾಗುವ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ, ಮಣ್ಣು ಅಗೆದರು ಯಾವುದೂ ಪತ್ತೆಯಾಗದ ಕಾರಣ ಎಸ್‌ಐಟಿ ಅಧಿಕಾರಿಗಳು ಮೋಸಹೋದಂತಾಗಿದೆ.
ಜಿಪಿಆರ್ ಉಪಕರಣ ಬಳಸಿ ನೆಲ ಪರಿಶೀಲನೆ ನಡೆಸಿದರೂ ಕೂಡ ಯಾವುದೇ ಕಳೇಬರದ ತುಂಡು ಸಿಕ್ಕಿಲ್ಲ. ಹೀಗಾಗಿ, ಮತ್ತಷ್ಟು ನೆಲ ಅಗೆದರೂ ಪ್ರಯೋಜನವಿಲ್ಲವೆಂದು ನಿರ್ಧರಿಸಿರುವ ಎಸ್‌ಐಟಿ, ಇನ್ನು ಉತ್ಖನನ ಮುಂದುವರಿಸದೇ ತನಿಖೆಯ ಹಾದಿ ಬದಲಿಸಲು ತೀರ್ಮಾನಿಸಿದೆ.
ಇನ್ನಷ್ಟು ಮಹಜರು ಪ್ರಕ್ರಿಯೆ ಕೈಗೊಂಡಿರುವ ಅಧಿಕಾರಿಗಳು, 20 ವರ್ಷಗಳ ಹಿಂದೆ ದೂರುದಾರ ವಾಸವಿದ್ದ ಸ್ಥಳಗಳ ತನಿಖೆ ನಡೆಸುತ್ತಿದ್ದಾರೆ. ಆದರೆ ಸಾಕ್ಷಿ ಸಿಗದ ಹಿನ್ನೆಲೆ ಸರ್ಕಾರದ ಮೇಲೆಯೂ ಒತ್ತಡ ಹೆಚ್ಚಾಗಿದೆ. ಧರ್ಮಸ್ಥಳದ ಭಕ್ತರು ಹಾಗೂ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಈ ಪ್ರಕರಣವನ್ನು “ಖಾಲಿ ಡಬ್ಬ, ಷಡ್ಯಂತ್ರ” ಎಂದಿದ್ದಾರೆ. ಗೃಹ ಸಚಿವ ಜಿ. ಪರಮೇಶ್ವರ್ ಅವರು ಶೀಘ್ರದಲ್ಲೇ ಈ ಬಗ್ಗೆ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ.ಇದನ್ನು ಓದಿ –ಮುಂದಿನ ಮೂರು ದಿನ ರಾಜ್ಯದ ಹಲವೆಡೆ ಭಾರೀ ಮಳೆಯ ಮುನ್ಸೂಚನೆ
ಇದೇ ವೇಳೆ, ದೂರುದಾರ ತಂದುಕೊಟ್ಟ ತಲೆಬುರುಡೆಯ ನಿಗೂಢತೆಯನ್ನು ಬೇಧಿಸಲು ಎಸ್‌ಐಟಿ ಸಜ್ಜಾಗಿದೆ. ಆತನನ್ನು ಬಂಧಿಸಿ ವಿಚಾರಣೆ ನಡೆಸುವ ಸಾಧ್ಯತೆಗಳು ಗಟ್ಟಿಯಾಗಿವೆ.