ವಿಧಿಬರಹ ಎಲ್ಲಿದೆಯೋ ಹೇಗಿದೆಯೋ ನನಗಂತೂ ಗೊತ್ತಿಲ್ಲಾ, ಅಸಲಿಗೆ ಅದನ್ನು ನೋಡಿಯೂ ಇಲ್ಲ. ಆದರೆ ಈ ನಮ್ಮ ನಾಲಿಗೆ ಇದೆಯಲ್ಲಾ…..ಅದು ನಾವು ನೋಡದೇ ಇರುವ ವಿಧಿಬರಹಕ್ಕಿಂತಲೂ ಸಿಕ್ಕಾಪಟ್ಟೆ ಪವರ್ ಫ಼ುಲ್ ಅಷ್ಟೇ ಅಲ್ಲ…ಡೇಂಜರಸ್ ಕೂಡಾ.! ಅದನ್ನು ನಾವು ಹೇಗೆ ಉಪಯೋಗಿಸಿ ಕೊಳ್ಳುತ್ತೇವೆಂಬುದರ ಮೇಲೆ ನಮ್ಮ ವ್ಯಕ್ತಿತ್ವ, ವರ್ತನೆ, ಇಮೇಜು ಹಾಗೂ ಒಟ್ಟಾರೆ ಬದುಕಿನ ಹಣೆಬರಹ ಎಲ್ಲವೂ ನಿರ್ಧಾರ ಆಗುತ್ತೆ.
ಮೊದಲೇ ಮನುಷ್ಯನ ನಾಲಿಗೆಗೆ ಮೂಳೆ ಇಲ್ಲ. ಹೀಗಾಗಿಯೇ ಹೇಗೆಂದರೆ ಹಾಗೆ ಸಲೀಸಾಗಿ ಹೊರಳಿ ಏನನ್ನು ಬೇಕಾದರೂ ಮಾತನಾಡಿಸಿಬಿಡುತ್ತೆ. ಅಂತಹ ನಾಲಿಗೆಯ ಜೊತೆ ಒಂದಷ್ಟು ನಮ್ಮ ಮನಸಿನ ನಕಾರಾತ್ಮಕ ಯೋಚನೆಗಳು, ಅಹಂ ಬ್ರಹ್ಮಾಸ್ಮಿತನದ ಅಹಂಕಾರ ಮತ್ತದರ ಜೊತೆಗೆ ಅರೆಪಾವಿನಷ್ಟು Ego ಸಾಥ್ ಕೊಟ್ಟಾರೆ ಅಲ್ಲಿಗೆ ಮುಗೀತು ನೋಡಿ. ತನ್ನ ಮಾತುಗಳಿಂದ ತಾನೇ ಗೋರಿ ತೋಡಿಕೊಳ್ಳುವಂತೆ ಮಾಡಿಬಿಡುವ ಖತರ್ನಾಕ್ ಶಾರ್ಪ್ ನೆಸ್ಸು ನಾಲಿಗೆಯೆಂಬ ಆಯುಧಕ್ಕಿದೆ.
ಈ ನಾಲಿಗೆಯನ್ನು ಸಮಯ-ಸಂಧರ್ಭಕ್ಕನುಸಾರವಾಗಿ ನಿಯಂತ್ರಣದಲ್ಲಿಟ್ಟು ಕೊಳ್ಳುವ ಜಾಣರು ಜೀವನದಲ್ಲಿ ಗೆದ್ದರೆ, ತಮ್ಮ ನಾಲಿಗೆಯನ್ನು ಅತಿಯಾಗಿ ಪ್ರೀತಿಸುವ, ಹಾಗೆ ಪ್ರೀತಿಸಿ, ಹೇಗೆಂದರೆ ಹಾಗೆ ಸಡಿಲ ಬಿಡುವ ಹಲವರು, ಸಮಯ ಸಂಧರ್ಭ ನೋಡದೇ ಏನಂದರೆ ಅದು, ಹೇಗೆಂದರೆ ಹಾಗೆ ಮಾತನಾಡುವಂತೆ ಲೂಸ್ ಬಿಟ್ಟು ತಮ್ಮ ಭವಿಷ್ಯದ ಮೇಲೆ ತಾವೇ ಚಪ್ಪಡಿಕಲ್ಲನ್ನು ಎತ್ತಿ ಹಾಕಿಕೊಳ್ಳುತ್ತಾರೆ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವೂ ಇದೆ …Of course, ವರ್ತಮಾನವೂ ಇದೆ.
ಈಗೇಕೆ ಈ ನಾಲಿಗೆಯ ಬಗೆಗಿನ ಇಂಟ್ರಡಕ್ಷನ್ನು ಅಂದ್ರೆ , ಹೀಗೆ ಕೇವಲ ತನ್ನ ನಾಲಿಗೆಯಿಂದಲೇ ಸಚಿವ ಸಂಪುಟದಿಂದಲೇ ವಜಾಗೊಂಡ ಮಂತ್ರಿಯೊಬ್ಬರ ಲೇಟೆಸ್ಟ್ ಉದಾಹರಣೆ ಹೆಚ್ಚುಕಡಿಮೆ ಇದೇ ಸಾಲಿಗೆ ಸೇರುತ್ತೆ.
ಇದರ ಸಿಂಪಲ್ ಬ್ಯಾಗ್ರೌಂಡು ಹೀಗಿದೆ ನೋಡಿ.
ಕಳೆದ ಕೆಲ ದಿನಗಳಿಂದ ಮತಕಳ್ಳತನದ ವಿರುದ್ಧ, ಚುನಾವಣಾ ಅಕ್ರಮಗಳ ಕುರಿತಂತೆ ಚುನಾವಣಾ ಆಯೋಗದ ವಿರುದ್ಧ ದೇಶಾದ್ಯಂತ ಅಭಿಯಾನ ಆರಂಭಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಳೆದವಾರ ಬೆಂಗಳೂರಿನಲ್ಲೂ ಬೃಹತ್ ರ್‍ಯಾಲಿ ಆಯೋಜಿಸಿ ಮಾತನಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ದೊಡ್ಡಮಟ್ಟದ ಮತಕಳ್ಳತನ ಮತ್ತು ಚುನಾವಣಾ ಅಕ್ರಮ ಆಗಿರುವುದನ್ನು ಮಹದೇವಪುರ ಕ್ಷೇತ್ರದ ಅಕ್ರಮಗಳ ಸಾಕ್ಷಿ ಸಮೇತ ಬಹಿರಂಗಪಡಿಸಿ ಚುನಾವಣಾ ಆಯೋಗಕ್ಕೆ ಸವಾಲು ಹಾಕಿದ್ದರು. ಅಲ್ಲದೇ ಬಿಜೆಪಿ, ಚುನಾವಣಾ ಆಯೋಗವನ್ನು ಬಳಸಿಕೊಂಡು ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ ಎಂಬ ಗಂಭೀರ ಆರೋಪದೊಂದಿಗೆ ನಖಶಿಖಾಂತ ಅಬ್ಬರಿಸಿದ್ದರು. ಆ ಮೂಲಕ ಕಾಂಗ್ರೆಸ್ ನೇರವಾಗಿ ಭಾಜಪ ಮತ್ತು ಚುನಾವಣಾ ಆಯೋಗದ ವಿರುದ್ಧ ಸಮರ ಸಾರಿದಂತಿತ್ತು.
ಇಂತಹ ಗಂಭೀರ ಹಿನ್ನೆಲೆಯ ಸಂಧರ್ಭದಲ್ಲಿ ರಾಜ್ಯ ಸರ್ಕಾರದ ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣನವರನ್ನು ಪತ್ರಕರ್ತರು ಪ್ರಶ್ನೆ ಮಾಡಿದಾಗ, ಅವರು ಸುಮ್ಮನಿರಲಾರದೇ ಎಂದಿನಂತೆ ತಮ್ಮ ಉಡಾಫ಼ೆ ದಾಟಿಯಲ್ಲಿ ” ಮತಕಳ್ಳತನ, ಚುನಾವಣಾ ಅಕ್ರಮಗಳ ಬಗ್ಗೆ ನಾವು ಮಾತನಾಡುತ್ತೇವೆ . ಆದರೆ ಹೀಗೆ ಹೇಳುವ ಮತದಾರರ ಪಟ್ಟಿ ಸಿದ್ಧವಾಗಿದ್ದು ನಮ್ಮ ಸರ್ಕಾರದ ಅವಧಿಯಲ್ಲೇ. ಆಗ ಎಲ್ಲರೂ ಕಣ್ಣು ಮುಚ್ಚಿ ಕುಳಿತಿದ್ದರೇ ? ಆ ಬಗ್ಗೆ ಮಾತನಾಡಲು ಹೋದರೆ ವಿಷಯ ಎಲ್ಲೆಲ್ಲೋ ಹೋಗುತ್ತದೆ”…. ಎಂಬುದನ್ನು ಹೇಳುವ ಮೂಲಕ ಕಾಂಗ್ರೆಸ್ ವಿರೋಧಿಗಳ ಕೈಗೆ ಪ್ರಬಲ ಅಸ್ತ್ರವನ್ನು ಕೊಟ್ಟು ತಮ್ಮ ಪಕ್ಷ, ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡನ್ನು ತೀರ ಇಕ್ಕಟ್ಟಿಗೆ ಸಿಲುಕಿಸಿದ್ದರು.
ಇದು ಬಿಜೆಪಿ ಮತ್ತು ಚುನಾವಣಾ ಆಯೋಗದ ನಡುವೆ ಇರಬಹುದಾದ ಸಂಬಂಧವನ್ನು ಬಟಾಬಯಲು ಮಾಡಬೇಕೆಂದಿದ್ದ ರಾಹುಲ್ ಗಾಂಧಿಯ ಮಾಸ್ಟರ್ ಪ್ಲಾನ್ ಗೆ ದೊಡ್ಡ ಹೊಡೆತ ಕೊಟ್ಟಂತಾಯಿತು. ಇದರಿಂದ ಸಹಜವಾಗಿಯೇ ಕಾಂಗ್ರೆಸ್ ಹೈಕಮಾಂಡು ಕೆ.ಎನ್.ರಾಜಣ್ಣನವರ ಮೇಲೆ ಕೆಂಡಾಮಂಡಲವಾಗಿತ್ತು.
ಇಲ್ಲಿ ಎರಡು ಅಂಶಗಳಿವೆ. ರಾಜಣ್ಣ ಹೇಳಿದ್ದರಲ್ಲಿ ಸತ್ಯಾಂಶವಿದೆಯೋ ಇಲ್ಲವೋ ಅಥವಾ ಅದು ಸರಿಯೋ ತಪ್ಪೋ ಎಂಬುದು ಒಂದು ಭಾಗವಾದರೆ, ಅವರು ಸರ್ಕಾರದ ಮತ್ತು ಪಕ್ಷದ ಪ್ರಮುಖ ಭಾಗವಾಗಿದ್ದು ಅವರ ಪಕ್ಷದ ಅಧಿನಾಯಕನೇ ಆಯೋಜಿಸಿರುವ ಚುನಾವಣಾ ಅಕ್ರಮಗಳ ವಿರುದ್ಧದ ಬೃಹತ್ ಆಂಧೋಲನದ ಉದ್ದೇಶಕ್ಕೇ ಮುಜುಗರವಾಗುವಂತೆ ತಮ್ಮದೇ ಸರ್ಕಾರದ ವಿರುದ್ಧ ಅನುಮಾನ ಬರುವಂತೆ ಮಾಧ್ಯಮಗಳ ಮುಂದೆ ಹಾಗೆ ತೀರ ಲಘುವಾಗಿ ಮಾತನಾಡಿದ್ದು ಕಾಂಗ್ರೆಸ್ ಹೈಕಮಾಂಡಿಗೆ ಡೈರೆಕ್ಟ್ ಡಿಚ್ಚಿ ಹೊಡೆದಂತಾಗಿತ್ತು.
ಅದರಲ್ಲೂ ಪ್ರಧಾನಿ ಮೋದಿ ವಿರುದ್ಧ ದೇಶಾದ್ಯಂತ ದೊಡ್ಡ ಹೋರಾಟವನ್ನೇ ರೂಪಿಸಿ ಮಿರಮಿರ ಮಿಂಚುವ ರಾಹುಲ್ ರ ಪ್ರಬಲ ಆಕಾಂಕ್ಷೆಗೆ ತಮ್ಮದೇ ಪಕ್ಷದ ಸರ್ಕಾರದ ಕ್ಯಾಬಿನೆಟ್ ಮಂತ್ರಿಯಿಂದಲೇ ಎದುರಾದ ಇಂತಹ ಅನಪೇಕ್ಷಿತ ಅಪಸ್ವರ ಸಹಜವಾಗಿ ಕೈಕಮಾಂಡನ್ನು ದುರ್ಬಲವನ್ನಾಗಿಸಿತ್ತು.
ಹೀಗಾಗಿ ರಾಜಣ್ಣನವರಿಗೆ , ಸಿ.ಎಂ.ಸಿದ್ದರಾಮಯ್ಯನವರ ಪರಮಾಪ್ತ ಎಂಬ ಸ್ಟ್ರಾಂಗ್ ಟ್ಯಾಗ್ ಇದ್ದರೂ ಅದಾವ ಮುಲಾಜನ್ನೂ ನೋಡದೇ ಅವರನ್ನು ಸಂಪುಟದಿಂದ ವಜಾ ಮಾಡುವ ನಿರ್ಧಾರ ಕೈಗೊಂಡು ಸಧ್ಯದ ಅಧಿವೇಶನ ನಡೆಯುವ ಸಂಧರ್ಭದಲ್ಲೇ ಮುಲಾಜಿಲ್ಲದೇ, ಸಿದ್ದು ಮಾತಿಗೂ ಕ್ಯಾರೇ ಎನ್ನದೇ ವಜಾ ಮಾಡಿದ್ದಾರೆ.
ಈ ಎಲ್ಲಾ ರಾಜಕೀಯ ಬೆಳವಣಿಗೆಗಳನ್ನು ನೋಡಿದಾಗ ಇದು ಇದ್ದದ್ದು ಇದ್ದಂಗೆ ನೇರವಾಗಿ ಹೇಳಿದ್ದಕ್ಕೆ ರಾಜಣ್ಣನವರಿಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟ ಬಹುಮಾನ ಎಂಬ ಕಹಿ ಸತ್ಯಕ್ಕಿಂತಲೂ ಸಂಧರ್ಭಕ್ಕೆ ತಕ್ಕ ಹಾಗೆ ನಾಲಿಗೆಯನ್ನು ಹದ್ದು ಬಸ್ತಿನಲ್ಲಿಟ್ಟು ಕೊಳ್ಳಲಾಗದುದ್ದಕ್ಕೆ ರಾಜಣ್ಣ ತೆತ್ತ ದೊಡ್ಡ ಬೆಲೆ ಎಂದೇ ವ್ಯಾಖ್ಯಾನಿಸುವುದು ಸೂಕ್ತ. ಯಾಕೆಂದರೆ ಇಂದಿನ ರಾಜಕೀಯ ವಾತಾವರಣದಲ್ಲಿ ವಿಶ್ವಾಸ, ನಿಷ್ಠೆ , ಸತ್ಯ, ನೇರವಂತಿಕೆ, ಭಾವುಕತೆ, ಸಾಚಾತನ, ಇತ್ಯಾದಿ ಅತೀ ಮೌಲಿಕ ಪದಗಳನ್ನು ಗಂಟು ಕಟ್ಟಿ ಮೂಲೆಯಲ್ಲಿಟ್ಟಿರ ಬೇಕಾದ ಅನಿವಾರ್ಯತೆ ಇದ್ದಾಗಲಷ್ಟೇ ರಾಜಕೀಯದಲ್ಲಿ ಉದ್ಧಾರ ಆಗಲು ಸಾಧ್ಯವೆನ್ನುವಷ್ಟರಮಟ್ಟಿಗೆ ರಾಜಕಾರಣ ಗಬ್ಬೆದ್ದಿದೆ.
ಯಾರೇ ಆಗಲೀ ಯಾವ ಅಧಿಕಾರದಲ್ಲೂ ಇರದೇ ಸಾರ್ವಜನಿಕವಾಗಿದ್ದುಕೊಂಡು ಏನೇ ಮಾತನಾಡಿದರೂ ಅದಕ್ಕೆ ಅಂತಹ ಮಾನ್ಯತೆಯಾಗಲೀ ಗಂಭೀರತೆಯಾಗಲೀ ಇರೋಲ್ಲ. ಆದರೆ ಒಂದು ಪಕ್ಷದ ಚೌಕಟ್ಟಿನಲ್ಲಿದ್ದು, ಸರ್ಕಾರದ ಪ್ರಮುಖ ಭಾಗವಾಗಿದ್ದುಕೊಂಡು ಅದರ ವಿರುದ್ಧವೇ ಹೀಗೆ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ ಎಂಬ ಕನಿಷ್ಠ ಎಚ್ಚರ ಹೀಗೆ ಮಾತನಾಡುವ ಮಂದಿಗೆ ಇರಬೇಕಿತ್ತಲ್ಲವೇ.? ಅದರಲ್ಲೂ ಅದೇ ತಪ್ಪನ್ನು ಮತ್ತೆ ಮತ್ತೇ ಎಸಗಿದಾಗ ಅದು ಮತ್ತಷ್ಟು ಗಂಭೀರ ಸ್ವರೂಪ ಪಡೆಯುವುದು ನಿಶ್ಚಿತ.
ಒಂದೊಮ್ಮೆ ಸರ್ಕಾರ ಮತ್ತು ಪಕ್ಷದ ನಿರ್ಣಯಗಳ ವಿರುದ್ಧ ಅಥವಾ ಯಾವುದೇ ಅಭಿಯಾನಗಳ ಔಚಿತ್ಯದ ವಿರುದ್ಧ ನೇರವಾಗಿ ಮಾತನಾಡುವ ಹಾಗಿದ್ದಲ್ಲಿ, ಒಂದೋ ಸರ್ಕಾರ ಮತ್ತು ಪಕ್ಷ ತಮಗೆ ಕೊಟ್ಟಿರುವ ಸ್ಥಾನಮಾನ ಮತ್ತು ಅಧಿಕಾರದ ವ್ಯಾಪ್ತಿಯಿಂದ ಹೊರಗೆ ನಿಂತು ಮಾತನಾಡಬೇಕು ಅಥವಾ ಅವುಗಳನ್ನು ಪಕ್ಷದ ಆಂತರಿಕ ಸಭೆಗಳಲ್ಲಿ ಚರ್ಚಿಸಬೇಕು. ಅದರ ಬಿಟ್ಟು ಮಾಧ್ಯಮಗಳ ಮುಂದೆ ಬೀಸು ಹೇಳಿಕೆಗಳನ್ನು ನೀಡುವುದು ಸಮಂಜಸವಾಗದು. ಈ ಸರಳ ಅಂಶವನ್ನು ಅರಿತೋ ಅರಿಯದೆಯೋ ಸಲೀಸಾಗಿ ನಾಲಿಗೆ ಜಾರಿಸಿದ್ದು ರಾಜಣ್ಣನವರ ರಾಜಕೀಯ ಭವಿಷ್ಯದ ಪಾಲಿಗೆ ತುಂಬಾ ಕಾಸ್ಟ್ಲೀಯಾಗಿ ಪರಿಣಮಿಸಿತ್ತು.
ಇದು ರಾಜಕೀಯವಾದ್ದರಿಂದ ಇಲ್ಲಿ ಸರಿ-ತಪ್ಪುಗಳ ವಿಮರ್ಶೆಗಿಂತಲೂ ಮನುಷ್ಯನಿಗೆ ನಾಲಿಗೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಬಹುಶಃ ರಾಜಣ್ಣನವರು ಮತಪಟ್ಟಿ ತಯಾರಾಗಿದ್ದ ವಿಚಾರವನ್ನು ಪಕ್ಷದ ಚೌಕಟ್ಟಿನಲ್ಲಿ ಆಂತರಿಕವಾಗಿ ಚರ್ಚಿಸಿದ್ದಲ್ಲಿ ಅದನ್ನು ಆಂತರಿಕ ಪ್ರಜಾಪ್ರಭುತ್ವವೆಂದು ಹೇಳಲಾಗುತ್ತಿತ್ತೇ ಹೊರತು ತಲೆದಂಡವಾಗುತ್ತಿರಲಿಲ್ಲ. ಆದರೆ ಮಾಧ್ಯಮಗಳ ಮುಂದೆ ನಾಲಿಗೆಯನ್ನು ಸಡಿಲ ಬಿಟ್ಟು ಶಿಸ್ತು ಉಲ್ಲಂಘನೆ ಮಾಡಿದ್ದೂ ಅಲ್ಲದೇ ತಮ್ಮ ವಿರೋಧಿಗಳಿಗೆ ಸರ್ಕಾರವನ್ನು, ಹಾಗೂ ಪಕ್ಷದ ಅಧಿನಾಯಕನನ್ನು ಟೀಕಿಸುವ ಅವಕಾಶ ಮಾಡಿಕೊಟ್ಟಿರುವ ಅವರ ನಡೆ ಹೈಕಮಾಂಡಿಗೆ ದೊಡ್ಡ ತಪ್ಪಾಗಿ ಕಂಡಿದ್ದೂ ಅಲ್ಲದೇ ಅದರ ಡ್ಯಾಮೇಜನ್ನು ಸಹಿಸುವ ಹಂತದಲ್ಲಿ ಅದಿರಲಿಲ್ಲ.
ಇದರ ಒಟ್ಟಾರೆ ಪರಿಣಾಮವೇ, ಇಂತಹ ಮುಜುಗರದ ಸನ್ನಿವೇಶಗಳುಂಟಾದಾಗಲೆಲ್ಲಾ ಸಂಬಂಧಿಸಿದವರ ರಾಜಿನಾಮೆ ಪಡೆಯುವ ಪಕ್ಷಾತೀತ ಸಂಪ್ರದಾಯಕ್ಕೆ ವ್ಯತಿರಿಕ್ತವಾಗಿ ಮೊದಲ ಬಾರಿಗೆ ಕ್ಯಾಬಿನೆಟ್ ಸಚಿವರೊಬ್ಬರನ್ನು ಅನಾಮತ್ತು ವಜಾಗೊಳಿಸುವ ಅನಿವಾರ್ಯತೆಗೆ ವಿಧಾನಸಭಾ ಅಧಿವೇಶನ ಸಾಕ್ಷಿಯಾಯಿತು.
ಇದಕ್ಕೆಲ್ಲಾ ಮುಖ್ಯ ಕಾರಣ……ನಾಲಿಗೆ !!
ಮರೆಯುವ ಮುನ್ನ
ಯಾವನೇ ಒಬ್ಬ ವ್ಯಕ್ತಿ ಯಾವಾಗ ತಾನು ” ತನಗೆ ಉದ್ಯೋಗ, ಆಶ್ರಯ, ಸ್ಥಾನಮಾನ, ಅಧಿಕಾರ ಅಥವಾ ಸಮಾಜದಲ್ಲಿ ಒಂದು ಐಡೆಂಟಿಟಿ ಕೊಟ್ಟಿರುವ ಸಂಘ, ಸಂಸ್ಥೆ, ಸರ್ಕಾರ, ಉದ್ಯಮ ಅಥವಾ ವ್ಯವಸ್ಥೆಗಿಂತಲೂ ದೊಡ್ಡವನು” ಎಂಬ ಭಾವನೆಯನ್ನು ತನ್ನೊಳಗೆ ಬಲಿಯಲು ಬಿಟ್ಟು ತಾನು ಅವುಗಳ ಸಾಂಸ್ಥಿಕ ಚೌಕಟ್ಟಿನ ನಿಯಮಗಳೆಲ್ಲವನ್ನೂ ಮೀರಿ ನಿಂತವನೆಂಬ ಉಡಾಫ಼ೆ ಅಮಲನ್ನು ನೆತ್ತಿಗೇರಿಸಿಕೊಂಡು ಅದರಂತೆಯೇ ವರ್ತಿಸುವನೋ ಆಗ ಅವನ ಅವನತಿಯ ಆರಂಭದ ಹೆಜ್ಜೆಗಳು ನಿಧಾನಕ್ಕೆ ಗುರುತು ಮೂಡಿಸಲಾರಂಭಿಸುತ್ತವೆ.
ಆಗ ಸ್ವಪ್ರತಿಷ್ಠೆ, ಸ್ವಪ್ರಶಂಸೆ, ಆತ್ಮರತಿ, ಅಹಂಕಾರ ಹಾಗೂ ನಾನೇ ಎಲ್ಲ ಎಂಬ ಮನದೊಳಗೆ ಬೇರುಬಿಟ್ಟ ಮದ್ದುಗುಂಡುಗಳು ನಾಲಿಗೆಯ ರೂಪದಲ್ಲಿ ಹೊರಬಂದು ತನ್ನನ್ನೇ ಆಪೋಷನ ತೆಗೆದುಕೊಳ್ಳುತ್ತವೆ. ಈ ಸಿಂಪಲ್ ಲಾಜಿಕ್ ಅರಿತವನ ನಾಲಿಗೆ ನಿಯಂತ್ರಣದಲ್ಲಿದ್ದರೆ, ಇದು ಗೊತ್ತಿದ್ದೂ ಸಡಿಲ ಮಾತುಗಳ ಸುಖದಲ್ಲಿ ಮೈಮರೆಯುವ ಮನುಷ್ಯ ತನ್ನ ನಾಲಿಗೆಯಿಂದ ತಾನೇ ಖೆಡ್ಡಾ ತೋಡಿಕೊಳ್ಳುತ್ತಾನೆ.
ಮಾತು ಆಡುವ ಮುನ್ನ ಅದನ್ನು ನಾವು ಆಳುತ್ತೇವೆ. ಒಮ್ಮೆ ಮಾತು ಆಡಿದ ನಂತರ ಅದು ನಮ್ಮನ್ನಾಳುತ್ತದೆ.

ಹಿರಿಯೂರು ಪ್ರಕಾಶ್ .