ಬೆಂಗಳೂರು : ಐಎಎಸ್ ಅಧಿಕಾರಿ ದಿವಂಗತ ಡಿ.ಕೆ. ರವಿ ಅವರ ಪತ್ನಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕಿ ಕುಸುಮಾ ಹನುಮಂತರಾಯಪ್ಪ ಅವರ ರಾಜರಾಜೇಶ್ವರಿ ನಗರದಲ್ಲಿರುವ ಮನೆಯಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಇಂದು ಬೆಳಗ್ಗೆಯಿಂದಲೇ ದಾಳಿ ನಡೆಸಿದ್ದಾರೆ.
ಇದೇ ವೇಳೆ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಆಸ್ತಿಪಾಸ್ತಿ ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ, ಕೆಲ ಹಣಕಾಸು ವ್ಯವಹಾರಗಳು ಹಾಗೂ ಅಕ್ರಮ ಆಸ್ತಿ ಪ್ರಕರಣಗಳ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ಮನೆಯಲ್ಲಿ ಲಭ್ಯವಿರುವ ದಾಖಲೆಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನೂ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ದಾಳಿಯಿಂದ ಕಾಂಗ್ರೆಸ್ ಪಕ್ಷದಲ್ಲಿ ಆತಂಕ ಉಂಟಾಗಿದ್ದು, ಅಧಿಕಾರದ ದುರುಪಯೋಗ ಮಾಡಿ ರಾಜಕೀಯ ನಾಯಕರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪಗಳು ಎದುರಾಗಿದೆ. ಇತ್ತ ಇಡಿ ಮೂಲಗಳು ಮಾತ್ರ, ಇದು ಸಂಪೂರ್ಣವಾಗಿ ಕಾನೂನು ಪ್ರಕ್ರಿಯೆಯ ಭಾಗವಾಗಿದ್ದು, ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿವೆ.ಇದನ್ನು ಓದಿ –ಮದ್ದೂರು : ಧರ್ಮಸ್ಥಳ ವಿರುದ್ಧದ ಅಪಪ್ರಚಾರ ಖಂಡಿಸಿ ಬಂದ್
ಇದೇ ವೇಳೆ, ಕುಸುಮಾ ಮತ್ತು ಶಾಸಕ ವೀರೇಂದ್ರ ಪಪ್ಪಿ ಪರವಾಗಿ ಕಾನೂನು ಸಲಹೆಗಾರರು ಮುಂದಿನ ಹಂತದ ಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.