ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದು ಸುಳ್ಳು ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದ ಚಿನ್ನಯ್ಯನನ್ನು (ಅನಾಮಿಕ ) ವಿಶೇಷ ತನಿಖಾ ತಂಡ (SIT) ಬಂಧಿಸಿದೆ.
ಅನಾಮಿಕ ನೀಡಿದ್ದ 17 ಪಾಯಿಂಟ್‌ಗಳಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇದರಿಂದಾಗಿ ಎಸ್‌ಐಟಿ ಸಮಾಧಿ ಶೋಧ ಕಾರ್ಯವನ್ನು ನಿಲ್ಲಿಸಿ, ಬದಲಿಗೆ ಸುಳ್ಳು ದೂರು ನೀಡಿದ ಮುಸುಕುಧಾರಿ ಚಿನ್ನಯ್ಯ ವಿರುದ್ಧವೇ ರಿವರ್ಸ್ ತನಿಖೆ ಪ್ರಾರಂಭಿಸಿತ್ತು.
ತನಿಖಾ ಅಧಿಕಾರಿ ಜಿತೇಂದ್ರ ದಯಾಮ ನೇತೃತ್ವದ 25 ಸದಸ್ಯರ ತಂಡವು ಚಿನ್ನಯ್ಯನನ್ನು ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸಿತು. ವೀಡಿಯೋ ಪ್ರದರ್ಶನ ಸೇರಿದಂತೆ ಸಾಕ್ಷಿಗಳ ಆಧಾರದ ಮೇಲೆ ನಡೆಸಿದ ವಿಚಾರಣೆಯಲ್ಲಿ ಚಿನ್ನಯ್ಯ ನೀಡಿದ್ದ ಮಾಹಿತಿಗಳು ಸಂಪೂರ್ಣ ಸುಳ್ಳು ಎಂಬುದು ಬಹಿರಂಗವಾಯಿತು.
ಎಸ್‌ಐಟಿ ಕೇಳಿದ ಪ್ರಶ್ನೆಗಳು:
- ಕೋರ್ಟ್‌ಗೆ ತಂದುಹಾಜರು ಮಾಡಿದ ತಲೆಬುರುಡೆ ಯಾವ ಸ್ಥಳದಿಂದ ತಂದದ್ದು?
- ಬುರುಡೆ ತಂದುಕೊಡಲು ಸ್ಥಳದಲ್ಲಿ ಇದ್ದವರು ಯಾರು?
- ಕತ್ತಿಯಿಂದ ಬುರುಡೆ ಎತ್ತಿದವರು ಯಾರು?
- ಸಮಾಧಿಯಿಂದ ಅಥವಾ ಕಾಡಿನೊಳಗಿಂದ ಬುರುಡೆ ಅಗೆದು ತಂದದ್ದು ನಿಜವೇ?
- ಬುರುಡೆ ಸಿಕ್ಕಿದರೆ ಅದು ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟದ್ದೇ?
- ನಿನ್ನೊಂದಿಗೆ ಕೈಜೋಡಿಸಿದವರು ಯಾರು?
ಈ ಎಲ್ಲ ಪ್ರಶ್ನೆಗಳಿಗೆ ಚಿನ್ನಯ್ಯ ಸಮರ್ಪಕ ಉತ್ತರ ನೀಡಲು ವಿಫಲವಾಗಿದ್ದು, ಕೇವಲ ಬಂಗ್ಲೆ ಗುಡ್ಡೆ, ಕಲ್ಲೇರಿ, ರತ್ನಗಿರಿ, ಬೋಳಿಯಾರು ಎಂಬ ಅಸ್ಪಷ್ಟ ಉತ್ತರಗಳನ್ನು ಮಾತ್ರ ನೀಡಿದ್ದ.
ಕೊನೆಗೂ ಕಠಿಣ ವಿಚಾರಣೆಯ ಬಳಿಕ ಚಿನ್ನಯ್ಯ ಹೆಣೆದ ಕಥೆ ಸುಳ್ಳಿನ ಸರಮಾಲೆಯೇ ಎಂದು ಸಾಬೀತಾಗಿದ್ದು, ಎಸ್‌ಐಟಿ ಅವನನ್ನು ಬಂಧಿಸಿದೆ. ಇಂದು ಆತನನ್ನು ಕೋರ್ಟ್‌ಗೆ ಹಾಜರುಪಡಿಸಿ, ಬಳಿಕ ಕಸ್ಟಡಿ ವಿಚಾರಣೆಗೆ ಪಡೆಯುವ ಸಾಧ್ಯತೆಯಿದೆ.