ಚಿಕ್ಕಮಗಳೂರು: ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸಂಪರ್ಕ ಮಾರ್ಗವಾದ ರಾಷ್ಟ್ರೀಯ ಹೆದ್ದಾರಿ 173ರ ಚಾರ್ಮಡಿ ಘಾಟ್‌ನಲ್ಲಿ ಹೊಸ ವಾಹನ ಸಂಚಾರ ನಿಯಮ ಜಾರಿಯಾಗಿದೆ.
ಕೊಟ್ಟಿಗೆಹಾರ ಬಳಿ ಇರುವ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಯುತ್ತಿದ್ದರೂ ಅಕ್ರಮ ಮರಳು ಸಾಗಾಟ, ಗೋ ಸಾಗಾಟ ಹಾಗೂ ವಾಹನಗಳನ್ನು ತಡೆದು ದರೋಡೆ ಮಾಡುವಂತಹ ಅಪರಾಧ ಪ್ರಕರಣಗಳು ಆಗುತ್ತಿವೆ. ಈ ಹಿನ್ನೆಲೆ, ಇಂತಹ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಚಿಕ್ಕಮಗಳೂರು ಪೊಲೀಸ್ ಇಲಾಖೆ ಹೊಸ ನಿಯಮ ಜಾರಿಗೆ ತಂದಿದೆ.
ಹೊಸ ನಿಯಮ ಪ್ರಕಾರ, ರಾತ್ರಿ ವೇಳೆಯಲ್ಲಿ ಚಾರ್ಮಡಿ ಘಾಟ್ ಮೂಲಕ ಸಾಗುವ ವಾಹನಗಳನ್ನು ಒಟ್ಟಿಗೆ ಐದು ವಾಹನಗಳ ಗುಂಪಿನಂತೆ ಕಳುಹಿಸಲಾಗುತ್ತದೆ. ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ, ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ವಾಹನಗಳನ್ನು ನಿಲ್ಲಿಸಿ, ಐದು ವಾಹನಗಳನ್ನು ಸೇರಿಸಿ ಒಟ್ಟಿಗೆ ಬಿಡಲಾಗುತ್ತದೆ. ಇದರ ಮೂಲಕ ರಾತ್ರಿ ವೇಳೆ ಸಿಂಗಲ್ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಒಬ್ಬ ಸಬ್‌ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಸಿಬ್ಬಂದಿ ನಿಯೋಜಿಸಲ್ಪಟ್ಟಿದ್ದಾರೆ. ಜೊತೆಗೆ, 24 ಗಂಟೆಗಳಿಗೂ ಚಾರ್ಮಡಿ ಘಾಟ್‌ನಲ್ಲಿ ಪೊಲೀಸ್ ಗಸ್ತು ವಾಹನ ಸಂಚರಿಸಲಿದೆ.