ನವದೆಹಲಿ: ಇನ್ನು ಮುಂದೆ ಎಲ್ಲ ಯುದ್ಧ ನೌಕೆಗಳನ್ನು ಭಾರತದಲ್ಲೇ ತಯಾರಿಸಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ.
ದೆಹಲಿಯಲ್ಲಿ ನಡೆದ ರಕ್ಷಣಾ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಜಾಗತಿಕ ಆರ್ಥಿಕ ಹಾಗೂ ಭೌಗೋಳಿಕ ಸವಾಲುಗಳ ನಡುವೆ ಭಾರತ ತನ್ನ ಸೈನಿಕ ಸಾಮರ್ಥ್ಯವನ್ನು ಬಲಪಡಿಸಬೇಕಾಗಿದೆ ಎಂದು ಹೇಳಿದರು. ಇದಕ್ಕಾಗಿ ‘ಆತ್ಮನಿರ್ಭರ ಭಾರತ’ ನೀತಿಯಡಿಯಲ್ಲಿ ಸ್ವದೇಶಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜನಾಥ್ ಸಿಂಗ್ ಅವರು, ಮುಂದಿನ 10 ವರ್ಷಗಳಲ್ಲಿ ಪ್ರಸ್ತಾವಿತ ಸುದರ್ಶನ ಚಕ್ರ ವಾಯು ರಕ್ಷಣಾ ವ್ಯವಸ್ಥೆಯಡಿಯಲ್ಲಿ ದೇಶದ ಎಲ್ಲಾ ಪ್ರಮುಖ ಸ್ಥಾಪನೆಗಳಿಗೆ ಸಂಪೂರ್ಣ ವೈಮಾನಿಕ ಭದ್ರತೆ ಒದಗಿಸಲಾಗುವುದು ಎಂದರು. ಈಗಾಗಲೇ ಹೊಸ ಯುದ್ಧನೌಕೆಗಳಲ್ಲಿ 75% ಭಾಗವನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
“ನಮ್ಮ ಸೇನೆಗಳು ಸ್ವದೇಶಿ ಉಪಕರಣಗಳೊಂದಿಗೆ ನಿಖರ ದಾಳಿಗಳನ್ನು ನಡೆಸುತ್ತಿರುವುದು ಕಾರ್ಯಾಚರಣೆಗಳಿಗೆ ದೀರ್ಘಾವಧಿಯ ಸಿದ್ಧತೆ ಮತ್ತು ಸಮನ್ವಯ ಅಗತ್ಯವಿದೆ ಎಂಬುದನ್ನು ತೋರಿಸಿದೆ” ಎಂದು ಅವರು ಹೇಳಿದರು. ಆಪರೇಷನ್ ಸಿಂಧೂರ್ ಯಶಸ್ವಿ ನಿರ್ವಹಣೆ ಇದಕ್ಕೆ ಸಾಕ್ಷಿ ಎಂದರು.ಇದನ್ನು ಓದಿ –ಒಂದೇ ವರ್ಷದಲ್ಲಿ RR ಕೋಚ್ ಹುದ್ದೆಗೆ ವಿದಾಯ ಹೇಳಿದ ರಾಹುಲ್ ದ್ರಾವಿಡ್
ಇದೇ ವೇಳೆ, ಭಾರತವು ಈಗ ಕೇವಲ ಶಸ್ತ್ರಾಸ್ತ್ರ ಖರೀದಿದಾರನಷ್ಟೇ ಅಲ್ಲದೆ, ಶಸ್ತ್ರಾಸ್ತ್ರ ರಫ್ತುದಾರ ರಾಷ್ಟ್ರವಾಗಿಯೂ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು. ಈ ಬೆಳವಣಿಗೆ ಭಾರತವನ್ನು ಭವಿಷ್ಯದಲ್ಲಿ ಹೆಚ್ಚು ಸುರಕ್ಷಿತ ರಾಷ್ಟ್ರವಾಗಿಸುವುದರೊಂದಿಗೆ ವಿಶ್ವದ ಉದಯೋನ್ಮುಖ ಶಕ್ತಿಗಳ ಪೈಕಿ ಪ್ರಮುಖ ಸ್ಥಾನಕ್ಕೆ ತಂದು ನಿಲ್ಲಿಸುತ್ತದೆ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.