- ಐಷಾರಾಮಿ ಕಾರುಗಳು ಹಾಗೂ ಬ್ಯಾಂಕ್ ಖಾತೆಗಳ ಪರಿಶೀಲನೆ
ಚಿತ್ರದುರ್ಗ: ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನೆ ಮೇಲೆ ಜಾರಿ ನಿರ್ದೇಶನಾಲಯ (ED) ಮತ್ತೆ ದಾಳಿ ನಡೆಸಿದ್ದು, ಈ ಬಾರಿ ಆರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಇ.ಡಿ. ಅಧಿಕಾರಿಗಳು ಶಾಸಕರ ಹೇಳಿಕೆ ಆಧರಿಸಿ ದಾಳಿ ನಡೆಸಿ, ಮನೆ ಹಾಗೂ ವಾಹನಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ದಾಳಿಯ ವೇಳೆ ಹತ್ತುಕ್ಕೂ ಹೆಚ್ಚು ಅಧಿಕಾರಿಗಳ ತಂಡ ಭಾಗವಹಿಸಿದ್ದು, ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಮನೆ ಶೋಧನೆಯೊಂದಿಗೆ ಪಪ್ಪಿ ಹಾಗೂ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳ ಕುರಿತು ತನಿಖೆ ಕೂಡ ನಡೆದಿದ್ದು, ಚಳ್ಳಕೆರೆ ಕೋಟೆಕ್ ಮಹೇಂದ್ರ ಮತ್ತು ಆಕ್ಸಿಸ್ ಬ್ಯಾಂಕ್ ಶಾಖೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳನ್ನು ಸಂಗ್ರಹಿಸಿದ್ದು, ಒಟ್ಟು 17 ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ನಡೆದಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಜೊತೆಗೆ ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳ ಮೂಲಕ ಬಂದ ಹಣವನ್ನು ಈ ಖಾತೆಗಳ ಮೂಲಕ ವರ್ಗಾವಣೆ ಮಾಡಿ ಅಕ್ರಮ ವ್ಯವಹಾರ ನಡೆಸಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿಯುತ್ತಿದೆ.
ಹಿಂದೆ ಆಗಸ್ಟ್ 22ರಂದು ಚಳ್ಳಕೆರೆಯಲ್ಲಿರುವ ಪಪ್ಪಿ ನಿವಾಸದ ಮೇಲೆ ಮುಂಜಾನೆ 5 ಗಂಟೆಯಿಂದ ಮಧ್ಯರಾತ್ರಿ ವರೆಗೆ 18 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಶೋಧ ಕಾರ್ಯಾಚರಣೆಯಲ್ಲಿ ಇ.ಡಿ. ಸುಮಾರು 12 ಕೋಟಿ ರೂ. ನಗದು, 1 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ, 6 ಕೋಟಿ ರೂ. ಬೆಲೆಬಾಳುವ ಚಿನ್ನ, 10 ಕೆ.ಜಿ. ಬೆಳ್ಳಿ, 4 ವಾಹನಗಳು, 17 ಬ್ಯಾಂಕ್ ಖಾತೆಗಳು ಹಾಗೂ 2 ಲಾಕರ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು.