ನವದೆಹಲಿ: ಇಂದು ಆರಂಭವಾದ ಕೇಂದ್ರ ಜಿಎಸ್ಟಿ (GST) ಮಂಡಳಿಯ ಎರಡು ದಿನಗಳ ಮಹತ್ವದ ಸಭೆಯಲ್ಲಿ ಅಗತ್ಯ ವಸ್ತುಗಳ ಮೇಲಿನ ತೆರಿಗೆ ದರ ಕಡಿತವಾಗುವ ಸಾಧ್ಯತೆ ಇದ್ದು , ಈ ಹಿನ್ನೆಲೆಯಲ್ಲಿ ಸಭೆಯ ಬಗ್ಗೆ ದೇಶದಾದ್ಯಂತ ಹೆಚ್ಚಿನ ನಿರೀಕ್ಷೆ ಮೂಡಿದೆ.
ಕೇಂದ್ರ ಸರ್ಕಾರ ತನ್ನ ಜಿಎಸ್ಟಿ ಪರಿಷ್ಕರಣೆ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಕೇವಲ 5% ಜಿಎಸ್ಟಿ ವಿಧಿಸುವ ಪ್ರಸ್ತಾಪ ತರುವ ಸಾಧ್ಯತೆಯಿದೆ. ಜೊತೆಗೆ, ಬೆಣ್ಣೆಯಿಂದ ಹಿಡಿದು ಎಲೆಕ್ಟ್ರಾನಿಕ್ಸ್ ವರೆಗೆ ದಿನನಿತ್ಯ ಬಳಕೆಯ ವಸ್ತುಗಳ ಮೇಲಿನ ತೆರಿಗೆ ದರಗಳನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ರಾಜ್ಯಗಳ ಹಣಕಾಸು ಸಚಿವರು ಸಹ ಭಾಗಿಯಾಗಿದ್ದಾರೆ. ಸಭೆಯಲ್ಲಿ ಜಿಎಸ್ಟಿ ದರಗಳನ್ನು ಎರಡು ಪ್ರಮುಖ ಸ್ಲ್ಯಾಬ್‌ಗಳಿಗೆ – 5% ಮತ್ತು 18% ಕ್ಕೆ ಸರಳೀಕರಿಸುವ ಪ್ರಸ್ತಾಪದ ಬಗ್ಗೆ ಚರ್ಚೆಯಾಗಲಿದೆ. ಪ್ರಸ್ತುತ 12% ಮತ್ತು 28% ದರದ ಉತ್ಪನ್ನಗಳನ್ನು ಹೊಸ ವ್ಯವಸ್ಥೆಗೆ ವರ್ಗಾಯಿಸುವ ಪ್ರಸ್ತಾಪವಿದೆ.
ಅದೇ ವೇಳೆ, ಐಷಾರಾಮಿ ಹಾಗೂ ಹಾನಿಕಾರಕ ವಸ್ತುಗಳಿಗೆ 40% ವಿಶೇಷ ತೆರಿಗೆ ದರ ವಿಧಿಸುವ ಸಾಧ್ಯತೆ ಇದೆ. ಆದರೆ, ವಿರೋಧ ಪಕ್ಷದ ಆಡಳಿತದ ರಾಜ್ಯಗಳು ಈ ಬದಲಾವಣೆಯಿಂದ ಉಂಟಾಗುವ ಆದಾಯ ನಷ್ಟಕ್ಕೆ ಪರಿಹಾರವನ್ನು ಒತ್ತಾಯಿಸಿವೆ.ಇದನ್ನು ಓದಿ –ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನೆ ಮೇಲೆ ಇ.ಡಿ. ದಾಳಿ
ಈ ಸಭೆಯ ನಿರ್ಧಾರಗಳಿಂದ ಅಗತ್ಯ ವಸ್ತುಗಳ ಬೆಲೆ ಇಳಿಯುವ ನಿರೀಕ್ಷೆಯಿದ್ದು, ಸಾಮಾನ್ಯ ಗ್ರಾಹಕರಿಗೆ ಇದು ದೊಡ್ಡ ಮಟ್ಟದ ಶಾಂತಿ ನೀಡುವ ಸಾಧ್ಯತೆ ಇದೆ.