ಚಿತ್ರದುರ್ಗ: 35 ಲಕ್ಷ ರೂ. ಮೌಲ್ಯದ ಕಾಮಗಾರಿಗಳಿಗೆ ಕಾರ್ಯಾದೇಶ ನೀಡುವ ಹೆಸರಿನಲ್ಲಿ ಲಂಚ ಬೇಡುತ್ತಿದ್ದ ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಮ್ಮರಾಯಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಲೆ ಬೀಸಿ ಬಂಧಿಸಿದ್ದಾರೆ.
ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದ ವಿದ್ಯುತ್ ಗುತ್ತಿಗೆದಾರ ಎಸ್.ಆರ್. ಸಂಜಯ್ ಅವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. 10 ಕಾಮಗಾರಿಗಳಿಗೆ ಅನುಮೋದನೆ ನೀಡಲು ಶೇಕಡ 10ರಷ್ಟು (ಸುಮಾರು 3.5 ಲಕ್ಷ ರೂ.) ಲಂಚ ಕೇಳಲಾಗಿತ್ತು.
ಚಿತ್ರದುರ್ಗದ ಅಮೃತ ಆಯುರ್ವೇದಿಕ್ ಆಸ್ಪತ್ರೆ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲೇ ಪೊಲೀಸರು ದಾಳಿ ನಡೆಸಿ ತಿಮ್ಮರಾಯಪ್ಪ ಅವರನ್ನು ಕೈಗೆ ಸಿಕ್ಕಿಸಿದರು. ಲಂಚದ ಹಣವನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣ ಸಂಬಂಧವಾಗಿ ತನಿಖೆ ಮುಂದುವರಿದಿದೆ.
ಈ ದಾಳಿಯನ್ನು ಲೋಕಾಯುಕ್ತ ಎಸ್.ಪಿ. ವಾಸುದೇವರಾಮ, ಡಿವೈಎಸ್ಪಿ ಎನ್. ಮೃತ್ಯುಂಜಯ್ ಹಾಗೂ ಇನ್ಸ್ಪೆಕ್ಟರ್ ಬಸವರಾಜು ಅವರ ನೇತೃತ್ವದಲ್ಲಿ ನಡೆಸಲಾಯಿತು.