- ಕಾರ್ಯಸಾಧ್ಯತಾ ಅಧ್ಯಯನ ಆರಂಭ
ನವದೆಹಲಿ: ಹಲವು ವರ್ಷಗಳಿಂದ ನೆಗೆಯಾದ ನಿಲಂಬೂರು–ನಂಜನಗೂಡು ರೈಲು ಮಾರ್ಗ ಯೋಜನೆಗೆ ಇದೀಗ ಮರುಜೀವ ದೊರಕುವ ಸಾಧ್ಯತೆ ಮೂಡಿದ್ದು, ರೈಲ್ವೆ ಇಲಾಖೆ ಹೊಸ ಕಾರ್ಯಸಾಧ್ಯತಾ ಅಧ್ಯಯನ ಕೈಗೆತ್ತಿಕೊಂಡಿದೆ.
236 ಕಿ.ಮೀ ಉದ್ದದ ಈ ಮಾರ್ಗವು ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳನ್ನು ಸಂಪರ್ಕಿಸುತ್ತದೆ. ಬಂಡೀಪುರ (ಕರ್ನಾಟಕ), ಮಧುಮಲೆ (ತಮಿಳುನಾಡು) ಹಾಗೂ ವಯನಾಡು (ಕೇರಳ) ಅರಣ್ಯ ಸಂರಕ್ಷಿತ ಪ್ರದೇಶಗಳ ಮೂಲಕ ಹಾದು ಹೋಗುವುದರಿಂದ ಯೋಜನೆ ಪ್ರಾರಂಭದಿಂದಲೇ ವಿವಾದಕ್ಕೆ ಗುರಿಯಾಗಿದೆ.
ಕರ್ನಾಟಕ ಸರ್ಕಾರ ಪರಿಸರ ಹಾನಿಯ ಕಾರಣವನ್ನು ಉಲ್ಲೇಖಿಸಿ ವಿರೋಧ ವ್ಯಕ್ತಪಡಿಸಿದ್ದರಿಂದ, ಕೇರಳ ಸರ್ಕಾರದ ಮನವೊಲಿಕೆ ಪ್ರಯತ್ನಗಳು ಫಲಕಾರಿಯಾಗಿರಲಿಲ್ಲ. 2007–08ರಲ್ಲಿ ನಡೆದ ಸಮೀಕ್ಷೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಇರುವುದರಿಂದ ಯೋಜನೆ ಕಾರ್ಯಸಾಧುವಲ್ಲ ಎಂದು ವರದಿ ಹೊರಬಿದ್ದಿತ್ತು. ಹೀಗಾಗಿ ಯೋಜನೆ ಅಂದು ಸ್ಥಗಿತಗೊಂಡಿತ್ತು.
ಆದರೆ ಕೇರಳ ಸರ್ಕಾರ ಹಾಗೂ ಸ್ಥಳೀಯ ನಾಗರಿಕರ ಒತ್ತಡದಿಂದ, 2023ರಲ್ಲಿ ರೈಲ್ವೆ ಇಲಾಖೆ ವಿಸ್ತೃತ ಯೋಜನಾ ವರದಿ ತಯಾರಿಸಲು ಅಂತಿಮ ಸ್ಥಳ ಸಮೀಕ್ಷೆಗೆ ಅನುಮತಿ ನೀಡಿತು. ಮಾರ್ಗವು ಅರಣ್ಯ ಭಾಗಗಳಲ್ಲಿ ಹಾದು ಹೋಗುವುದರಿಂದ, ಕರ್ನಾಟಕ ಮತ್ತು ಕೇರಳದ ಮುಖ್ಯ ಕಾರ್ಯದರ್ಶಿಗಳು ಹಾಗೂ ಅರಣ್ಯ–ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳ ಸಮಾಲೋಚನೆಯ ನಂತರವೇ ವರದಿ ಅಂತಿಮಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿತ್ತು.
ಇದೇ ವೇಳೆ, ತಲಶ್ಶೇರಿ–ಮೈಸೂರು ರೈಲು ಮಾರ್ಗಕ್ಕೂ 2008–09ರಲ್ಲಿ ಸಮೀಕ್ಷೆ ನಡೆದಿದ್ದು, 2018ರಲ್ಲಿ ಮತ್ತೊಮ್ಮೆ ಸಮೀಕ್ಷೆ ಮಾಡಲಾಗಿತ್ತು. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಹಾದು ಹೋಗುವ ಕಾರಣಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.ಇದನ್ನು ಓದಿ –ರಾಜ್ಯದ 13 ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್
ಇದೀಗ, ನಂಜನಗೂಡು–ನಿಲಂಬೂರು ಹಾಗೂ ತಲಶ್ಶೇರಿ–ಮೈಸೂರು ರೈಲು ಯೋಜನೆಗಳನ್ನು ಸಂಯೋಜಿಸಿ ಹೊಸ ಮಾರ್ಗ ನಿರ್ಮಾಣ ಸಾಧ್ಯತೆಯ ಅಧ್ಯಯನ ನಡೆಯುತ್ತಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.