- ಅಧ್ಯಕ್ಷ ಪೌಡೆಲ್ ನೇಮಕ ಮಾಡುವ ನಿರೀಕ್ಷೆ
ಕಠ್ಮಂಡು : ನೇಪಾಳದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿರುವ ನಡುವೆ, ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ಶುಕ್ರವಾರ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಸುಶೀಲಾ ಕರ್ಕಿ ಅವರನ್ನು ನೇಮಿಸುವ ನಿರೀಕ್ಷೆಯಿದೆ ಎಂದು ಪಿಟಿಐ ವರದಿ ಮಾಡಿದೆ.
ಸರ್ಕಾರ ವಿರೋಧಿ ಪ್ರತಿಭಟನೆಗಳನ್ನು ಮುನ್ನಡೆಸಿದ ಜನರಲ್ ಝೆಡ್ ಗುಂಪಿನ ಪ್ರತಿನಿಧಿಗಳು ಸೇರಿದಂತೆ ವಿವಿಧ ಮಧ್ಯವರ್ತಕರ ನಡುವೆ ನಡೆದ ಮಾತುಕತೆಗಳು ಗುರುವಾರ ಮಧ್ಯರಾತ್ರಿ ಫಲಪ್ರದವಾಗದೆ ಮುಗಿದವು. ಆದರೆ ಯುವ ನಾಯಕತ್ವದ ಜನರಲ್ ಝೆಡ್ ಗುಂಪು ಹೊಸ ಪ್ರಧಾನಿಯಾಗಿ ಸುಶೀಲಾ ಕರ್ಕಿ ಅವರ ಹೆಸರನ್ನು ಮುಂದಿರಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಅಧ್ಯಕ್ಷ ಪೌಡೆಲ್ ಅವರು ಪ್ರಸ್ತುತ ರಾಜಕೀಯ ಬಿಕ್ಕಟ್ಟಿನಿಂದ ಹೊರಬರಲು ಮಾರ್ಗಗಳನ್ನು ಹುಡುಕುವ ಸಲುವಾಗಿ ವಿವಿಧ ರಾಜಕೀಯ ನಾಯಕರು ಮತ್ತು ಸಂವಿಧಾನ ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಹೊಸ ಸರ್ಕಾರವನ್ನು ರಚಿಸಲು ಸಂಸತ್ತನ್ನು ವಿಸರ್ಜಿಸುವುದೇ ಅಥವಾ ಅದನ್ನು ಉಳಿಸಿಕೊಂಡೇ ಮುಂದುವರೆಯುವುದೇ ಎಂಬ ಎರಡು ಆಯ್ಕೆಗಳ ಬಗ್ಗೆ ಚರ್ಚೆ ನಡೆದಿದೆ. ಅಂತಿಮವಾಗಿ, ಪ್ರತಿಭಟನಾ ಗುಂಪು ಸಂವಿಧಾನಿಕ ಚೌಕಟ್ಟಿನೊಳಗೆ ಪರಿಹಾರವನ್ನು ಕಂಡುಕೊಳ್ಳಲು ಒಪ್ಪಿಕೊಂಡಿದೆ.ಇದನ್ನು ಓದಿ –ಭಾರಿ ಮಳೆ ಅಬ್ಬರ: ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ
ಇದರಿಂದ ಕಠ್ಮಂಡುವಿನಲ್ಲಿ ಹೇರಲಾಗಿದ್ದ ರಾತ್ರಿ ಕರ್ಫ್ಯೂಗೆ ಸಡಿಲಿಕೆ ನೀಡಲಾಗಿದ್ದು, ಜನರು ದೈನಂದಿನ ಜೀವನವನ್ನು ಸರಾಗವಾಗಿ ನಡೆಸಿಕೊಳ್ಳಲು ಬೆಳಿಗ್ಗೆ 7ರಿಂದ 11ರವರೆಗೆ ನಾಲ್ಕು ಗಂಟೆಗಳ ಕಾಲ ಹೊರಗೆ ಹೋಗಲು ಅವಕಾಶ ನೀಡಲಾಗಿದೆ.