- 20ಕ್ಕೂ ಹೆಚ್ಚು ಮಂದಿಗೆ ಗಾಯ
ಹಾಸನ : ಮದ್ದೂರಿನಲ್ಲಿ ಗಣೇಶ ಮೆರವಣಿಗೆಯ ವೇಳೆ ನಡೆದ ಅಶಾಂತಿ ಪ್ರಕರಣ ತಣ್ಣಗಾಗುವ ಮುನ್ನವೇ ಹಾಸನದಲ್ಲಿ ಗಣೇಶ ಮೆರವಣಿಗೆಯ ವೇಳೆ ಭೀಕರ ಅಪಘಾತ ಸಂಭವಿಸಿದೆ. ಮೆರವಣಿಗೆಯಲ್ಲಿ ಸಾಗುತ್ತಿದ್ದವರ ಮೇಲೆ ಟ್ರಕ್ ನುಗ್ಗಿ 9 ಮಂದಿ ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ದುರ್ಘಟನೆ ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಿಮ್ಸ್ ಸೇರಿದಂತೆ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಲ್ಲಿ ಮೂವರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರಲ್ಲಿ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ಆಗಿದ್ದು, ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಮೃತರ ಪೈಕಿ ಪ್ರವೀಣ್ ಕುಮಾರ್ (ಬಳ್ಳಾರಿ), ರಾಜೇಶ್ (ಕೆ.ಬಿ. ಪಾಳ್ಯ), ಈಶ್ವರ (ಡನಾಯಕನಹಳ್ಳಿ), ಗೋಕುಲ (ಮುತ್ತಿಗೆಹೀರಳ್ಳಿ), ಕುಮಾರ (ಕಬ್ಬಿನಹಳ್ಳಿ), ಪ್ರವೀಣ್ (ಕಬ್ಬಿನಹಳ್ಳಿ), ಮಿಥುನ್ (ಗವಿಗಂಗಾಪುರ, ಚಿತ್ರದುರ್ಗ), ಸುರೇಶ್ (ಚಿಕ್ಕಮಗಳೂರು), ಪ್ರಭಾಕರ್ (ಬಂಟರಹಳ್ಳಿ) ಸೇರಿದ್ದಾರೆ.
ಅಪಘಾತದ ಬಗ್ಗೆ ಮಾಹಿತಿ ಪ್ರಕಾರ, ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಟ್ರಕ್ ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ಜನರ ಮೇಲೆ ಹರಿದಿದೆ. ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಟ್ರಕ್ ಚಾಲಕ ಭುವನೇಶ್ (ಕಟ್ಟೆಬೆಳಗುಲಿ, ಹೊಳೆನರಸೀಪುರ) ಸ್ಥಳೀಯರ ಕೈಗೆ ಸಿಕ್ಕಿ ಥಳನೆಯಾಗಿದ್ದು, ನಂತರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸ್ಥಳಕ್ಕೆ ಜಿಲ್ಲಾಧಿಕಾರಿ ಲತಾ ಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇದನ್ನು ಓದಿ –ಗಣೇಶ ಮೆರವಣಿಗೆ ವೇಳೆ ಟ್ರಕ್ ನುಗ್ಗಿ 8 ಮಂದಿ ದುರಂತ ಸಾವು
ಈ ದುರಂತಕ್ಕೆ ಪೊಲೀಸರ ವೈಫಲ್ಯವೇ ಕಾರಣ ಎಂದು ಶಾಸಕ ಎಚ್.ಡಿ. ರೇವಣ್ಣ ಆರೋಪಿಸಿದ್ದು, ಸಂಸದ ಶ್ರೇಯಸ್ ಪಟೇಲ್ “ಇದು ಹಾಸನಕ್ಕೆ ಕರಾಳ ದಿನ, ಸೂಕ್ತ ತನಿಖೆ ನಡೆಯಬೇಕು” ಎಂದು ಪ್ರತಿಕ್ರಿಯಿಸಿದ್ದಾರೆ.