ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ, ಸಾಧಿಸಲು ಮನೋಬಲ ಆತ್ಮವಿಶ್ವಾಸ ದೃಢವಾದ ನಂಬಿಕೆ ಇರಬೇಕು. ಒಬ್ಬ ವ್ಯಕ್ತಿಗೆ ಸಾಧಿಸುವ ಛಲವಿದ್ದಾಗ ಮಾತ್ರ ಯಾವುದಾದರೂ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಾಗುವುದು. ಮನುಷ್ಯ ಸಾಧನೆ ಮಾಡಬೇಕೆಂದರೆ ದೇಹಕ್ಕೆ ವಯಸ್ಸಾಗಿದೆ ಎಂಬುದು ಕಾರಣವಾಗುವುದಿಲ್ಲ. ಬದಲಿಗೆ ಆತನ/ಆಕೆಯ ಮನಸ್ಸು ಮಾತ್ರವಾಗಿರುತ್ತದೆ.
ನಿನ್ನೆ ದಿನಾ ನನ್ನ ಆತ್ಮೀಯರೊಬ್ಬರು ಕರೆ ಮಾಡಿ ಹೇಳುತ್ತಿದ್ದರು ನೀವು ಏನಾದರೂ ಒಂದು ಮಾಡುತ್ತ ಇರುತ್ತೀರಿ ತುಂಬಾ ಖುಷಿಯಾಗುತ್ತದೆ ಎಂದು ಹೇಳಿ ಅಭಿನಂದನೆಗಳನ್ನು ಸಲ್ಲಿಸಿದರು. ಹೌದು ಅವರು ಹೇಳಿದಂತೆ ನನ್ನ ಮನಸ್ಸು ಯಾವಾಗಲೂ ಒಂದು ಗುರಿಯತ್ತ ಸಾಗಿ ಏನಾದರೂ ಸಾಧನೆ ಮಾಡುತ್ತಿರಬೇಕು ಎಂದು ಸದಾ ಹಂಬಲಿಸುತ್ತಿರುತ್ತದೆ. ವ್ಯಕ್ತಿತ್ವ ರೂಪುಗೊಂಡರೆ ಯಾವುದು ಕೂಡ ಬದುಕಿಗೆ ಮಾನ ದಂಡವಾಗುವುದಿಲ್ಲ. ನಾನು ಕಿರಿಯವಳಾದರೂ ಕನಿಷ್ಠ ಅಕ್ಷರಗಳ ಮೂಲಕ ಯಶಸ್ವಿಯತ್ತ ಸಾಗುತ್ತಿದ್ದೇನೆಂದರೆ ತಪ್ಪಾಗಲಿಕಿಲ್ಲ. ಕೆಲವು ಹೊಟ್ಟಿಕಿಚ್ಚು ಪಡುವವರ ಮಾತಿಗೆ ತಲೆ ಕೆಡಿಸಿಕೊಳ್ಳದೆ ನಾನು ನನ್ನ ಸಾಧನೆ ಎಂಬುದರ ಅರಿವಿದ್ದರೆ ಖಂಡಿತಾ ಯಶಸ್ಸನ್ನು ಪಡೆಯಬಹುದು. ಹೌದು ಬಹಳಷ್ಟು ಮಂದಿಗೆ ತಮ್ಮಲ್ಲಿರುವ ಶಕ್ತಿ ಸಾಮರ್ಥ್ಯದ ಅರಿವಿರುವುದಿಲ್ಲ. ಏಕೆಂದರೆ ಅವರು ಒಮ್ಮೆಯೂ ತಮ್ಮನ್ನು ತಾವು ಪರೀಕ್ಷಿಸಿಕೊಂಡಿರುವುದಿಲ್ಲ.
ಯಾವುದೇ ಹೊಸ ಸೃಜನಾತ್ಮಕತೆಗೆ ಪ್ರಯತ್ನಿಸದೆ ಕೇವಲ ಯಾಂತ್ರಿಕ ಜೀವನ ಸಾಗಿಸುತ್ತಿರುತ್ತಾರೆ. ಜಗತ್ತಿನಲ್ಲಿ ಸೃಷ್ಟಿಯಾಗಿರುವ ಪ್ರತಿ ಜೀವಿಗೂ ತನ್ನದೇ ಆದ ವಿಭಿನ್ನ ಆಲೋಚನಾ ಶಕ್ತಿಯಿರುತ್ತದೆ. ಮಾನವನಿಗಂತೂ ಸ್ವಲ್ಪ ಹೆಚ್ಚು ವಿವೇಚಿಸುವ, ನಿರ್ಣಯಿಸುವ ಮತ್ತು ಸಂವೇದಿಸುವ ಶಕ್ತಿಯಿರುತ್ತದೆ. ನಿತ್ಯಜೀವನದಲ್ಲಿ ಏಳು ಬೀಳುಗಳು ಸಹಜ. ಸೋಲಾಗಲಿ-ಗೆಲುವಾಗಲಿ, ಸುಖ-ದುಖ:ಗಳಾಗಲಿ ಎಲ್ಲವೂ ಸಹಜ ಕ್ರಿಯೆಗಳೆಂದು ತಿಳಿದು ಧೈರ್ಯದಿಂದ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಇನ್ನೂ ಕೆಲವರು ತಮ್ಮ ಆತ್ಮವಿಶ್ವಾಸದ ಸೋಲಿನ ಅನುಭವದಿಂದ ಬೇರೆಯವರ ಸಾಧನೆ ಕಂಡು ಹೊಟ್ಟೆಕಿಚ್ಚು ಪಡುವುದರಲ್ಲೆ ಕಾಲ ಕಳೆಯತ್ತಿರುತ್ತಾರೆ. ಒಮ್ಮೆ ಉಂಟಾದ ಸೋಲಿನ ವಿಮರ್ಶೆ ಮಾಡುತ್ತಾ ಅದನ್ನೇ ಚಿಂತಿಸುತ್ತಾ ಕೂರುವುದರಲ್ಲಿ ಉಪಯೋಗವಿಲ್ಲ. ಇದರಿಂದ ನಮ್ಮ ಪರಿಪೂರ್ಣ ವ್ಯಕ್ತಿತ್ವದ ಅರಿವು ಉಂಟಾಗುವ ಬದಲು ನಮ್ಮಲ್ಲಿ ಕೀಳರಿಮೆ ಬೆಳೆದು, ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಗಬಹುದು. ಜೀವನದಲ್ಲಿ ಮಹತ್ತರವಾದ ಸಾಧನೆ ಮಾಡಿರುವ ಬಹುತೇಕರು ಯಾವುದೇ ಪದವಿ ಪಡೆದಿಲ್ಲ. ಶಾಲೆಯ ಮೆಟ್ಟಿಲೇರದವರೂ ಇಂದು ಉನ್ನತ ಸಾಧನೆ ಮಾಡಿರುವ ಉದಾಹರಣೆಗಳಿವೆ. ಹಾಗೆಂದು ಓದುವುದೇ ಮುಖ್ಯವಲ್ಲವಂತಲ್ಲ. ಬದಲಿಗೆ ಅದರಲ್ಲಿನ ಅಲ್ಪಯಶಸ್ಸನ್ನು ಸ್ವಸಾಮರ್ಥ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಿ ಯಶಸ್ವಿಯಾಗಬೇಕು. ಮನಸ್ಸಿನ ಮೊದಲ ಮಿತ್ರ ಆತ್ಮವಿಶ್ವಾಸ, ಆತ್ಮವಿಶ್ವಾಸವಿದ್ದವರು ಜೀವನದಲ್ಲಿ ಸೋಲು ಎಂಬ ಪದವನ್ನೇ ಕೇಳಿರಲಾರರು.
ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಆತ್ಮವಿಶ್ವಾಸದ ನುಡಿ ಸದಾ ನಮ್ಮ ಕಿವಿಯಲ್ಲಿ ರಿಂಗಣಿಸುತ್ತಿರಬೇಕು. ನಮ್ಮ ಗುರಿಯು ಈಡೇರಬೇಕಾದರೆ ಮೊದಲು ನಮ್ಮಲ್ಲಿ ಆಸಕ್ತಿ ಅಭ್ಯಾಸ ಮತ್ತು ತಕ್ಕ ಪರಿಶ್ರಮ ಇರಬೇಕಾಗುತ್ತದೆ. ನನಗೆ ವಯಸ್ಸಾಗಿದೆ ನಾನು ಏನನ್ನು ಮಾಡಲಾಗುವುದಿಲ್ಲ ಅಥವಾ ಅದೆಲ್ಲವನ್ನು ಯಾರು ಮಾಡುತ್ತಾರೆ ಈ ರೀತಿಯ ಚಿಂತೆಗಳನ್ನು ಮಾಡುತ್ತಾ ಕುಳಿತುಕೊಂಡರೆ ನಾನು ಮುಂದೆ ಸಾಗಲು ಸಾಧ್ಯವೇ ಇಲ್ಲ. ನಾವು ನಮ್ಮ ಸಾಧನೆಯ ಚಿಂತನೆಗಳನ್ನು ನನಸು ಮಾಡಲು ಪ್ರಯತ್ನ ಮಾಡಿದರೆ ಮಾತ್ರ ನಾನು ಜೀವನದಲ್ಲಿ ಯಶಸ್ಸನ್ನು ಕಾಣಬಹದು. ಡಾ.ಎ.ಪಿ.ಜೆ ಅಬ್ದುಲ್ ಕಲಾಮ್ ಹೇಳುವಂತೆ “ನಿದ್ದೆಯಲ್ಲಿ ಕನಸು ಕಾಣುವುದಕ್ಕಿಂತ ಇತರರು ನಿದ್ರೆಗೆಡುವಂತೆ ಕಂಡ ಕನಸು ನನಸು ಮಾಡಿಕೊಳ್ಳುವುದು ಸಾಧನೆ”. ಗುರಿಯಿಲ್ಲದ ಜೀವನ ನಾವಿಕನಿಲ್ಲದ ಹಡಗಿನಂತೆ ಎಂಬುದನ್ನು ಅರಿತು ಬದುಕಿನಲ್ಲಿ ಗುರಿಯನ್ನು ಇಟ್ಟುಕೊಂಡು ಅದರ ಸಿದ್ಧಿಗಾಗಿ ಶ್ರಮಿಸಬೇಕು. ನಾವು ಅದೆಲ್ಲವನ್ನೂ ಛಲದಿಂದ, ದೃಢ ಮನೋಭಾವದಿಂದ ಅಭ್ಯಾಸ ಮಾಡಿದರೆ ಒಗ್ಗಿಕೊಳ್ಳುತ್ತವೆ. ಅದು ಓದು ಬರಹ ಇರಬಹುದು, ದೈಹಿಕ ಚಟುವಟಿಕೆ ಇರಬಹುದು ಅಥವಾ ಇನ್ಯಾವುದೇ ಸಾಧನೆ ಇರಬಹುದು. ಪ್ರಯತ್ನಿಸಿದರೆ ಯಾವುದೂ ಕಷ್ಟವಲ್ಲ. ಅಸಾಧ್ಯವಾದುದು ಏನೇನೂ ಇಲ್ಲ ಹಠಕ್ಕೆ ಬಿದ್ದರೆ ಇಡೀ ಜಗತ್ತನ್ನೇ ಗೆಲ್ಲಬಹುದು.
-ಪುಷ್ಪ ಪ್ರಸಾದ್