ಶಿಕ್ಷಣ (ಸಾಮಾಜಿಕ, ಶೈಕ್ಷಣಿಕ, ಕೌಟುಂಬಿಕವಾಗಿ)
“ವಿದ್ಯೆ ಇಲ್ಲದವ ಹದ್ದಿಗಿಂತ ಕಡೆ” ಎಂಬೊಂದು ಗಾದೆ ಮಾತಿದೆಯಲ್ಲ. ಮಾನವನ ಜೀವನಕ್ಕೆ ಅತಿ ಮುಖ್ಯ ವಿದ್ಯೆ, ಶಿಕ್ಷಣ. ಶಿಕ್ಷಣ ಕ್ಷೇತ್ರದಲ್ಲೂ ಹಿಂದಿಗೂ ಇಂದಿಗೂ ಅಜಗಜಾಂತರ ವ್ಯತ್ಯಾಸವಾಗಿದೆ.ಪೂರ್ವ ಕಾಲದಲ್ಲಿ ಗುರುಕುಲದಲ್ಲಿ, ರಾಜ, ಜನ ಸಾಮಾನ್ಯರೆಂಬ ಬೇಧ ಭಾವವಿಲ್ಲದೇ ಗುರುವಿನ ಸಾನಿಧ್ಯದಲ್ಲಿ, ಅವರ ಮನೆ ಮಕ್ಕಳಂತೆ ಇದ್ದು, ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಶಿಕ್ಷಣ ಕಾಲಕ್ರಮದಲ್ಲಿ ಅನೇಕ ಬದಲಾವಣೆಯ ನಂತರ ಶಾಲೆಗಳಲ್ಲಿ ದೊರೆಯಲು ಆರಂಭವಾಯಿತು.
ನಮ್ಮ ಅಜ್ಜ~ಅಜ್ಜಿಯರ ಕಾಲದಲ್ಲಿ ಪ್ರತಿಯೊಬ್ಬರು ಶಾಲೆಗೆ ಹೋಗುವುದು ಎಂಬ ಪರಿಪಾಠ ಇರಲಿಲ್ಲ. ಆಗೆಲ್ಲ ಗೊತ್ತುಮಾಡಿದ ಶಿಕ್ಷಕರೇ ಮನೆಗೆ ಬಂದು ಪಾಠ ಹೇಳಿ ಕೊಡುತ್ತಿದ್ದರಂತೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ವಿದ್ಯೆ ಯಾಕೆ? ಹೇಗಿದ್ದರೂ ಮುಂದೆ ಮದುವೆಯಾಗಿ ಬೇರೆಯವರ ಮನೆಯಲ್ಲಿ ಅಡುಗೆ~ಮುಸುರೆ ಮಾಡುವ ಕೆಲಸಕ್ಕೆ ಹೋಗುವರೆಂಬ ಉದಾಸೀನ ಭಾವ. ಎಷ್ಟೋ ಮನೆಯ ಹೆಣ್ಣು ಮಕ್ಕಳು ಮನೆಯವರಿಗೆ ತಿಳಿಯದಂತೆ, ತಮ್ಮ ಅಣ್ಣ~ತಮ್ಮಂದಿರಿಗೆ ಪಾಠ ಹೇಳಿ ಕೊಡುವಾಗ ಕದ್ದುಮುಚ್ಚಿ ಅಕ್ಷರ ಕಲಿತದ್ದೂ ಉಂಟಂತೆ. ವಿದ್ಯಾಧಿದೇವತೆ ಶಾರದೆ ಸ್ತ್ರೀಯಾದರೂ, ಹೆಣ್ಣು ಮಕ್ಕಳು ವಿದ್ಯೆ ಕಲಿಯಲು ಪರದಾಡುವ ಕಾಲವಿದ್ದದ್ದು ಎಂಥ ವಿಪರ್ಯಾಸ ಅಲ್ಲವ?
ಕಾಲ ಬದಲಾದಂತೆ, ಶಾಲೆಗಳು ಪ್ರಾರಂಭವಾದವು. ಬರೀ ಗಂಡುಮಕ್ಕಳಿಗೆಂದೇ ಇದ್ದ ಜ್ಞಾನ ದೇಗುಲದ ಬಾಗಿಲು, ಕ್ರಮೇಣ ಹೆಣ್ಣು ಮಕ್ಕಳಿಗೂ ತೆರೆದವು. ಅಕ್ಷರಜ್ಞಾನ ಇರಬೇಕೆಂಬ ಭಾವನೆಯಿಂದ ಕೆಲವು ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸತೊಡಗಿದರು. ಹುಡುಗರಷ್ಟು ಸ್ವತಂತ್ರವಿಲ್ಲದಿದ್ದರೂ, ಅವರುಗಳೂ ಅಕ್ಷರ ಕಲಿತು ವಿದ್ಯಾವಂತರಾಗತೊಡಗಿದರು. ಆದರೂ ನಮ್ಮ ಹಿಂದಿನ ತಲೆಮಾರಿನವರೆಗೂ ಸ್ತ್ರೀಯರು ಹೈಸ್ಕೂಲ್ ಮೆಟ್ಟಿಲು ಹತ್ತಿದ್ದೇ ದೊಡ್ಡದು. ನಾವು ಓದುವ ಸಮಯದಲ್ಲಿ ‘ಹೆಣ್ಣು ಹೆಚ್ಚು ಕಲಿತರೆ ಮದುವೆಗೆ ಗಂಡು ಹುಡುಕುವುದು ಕಷ್ಟ…..’ ಎನ್ನುವ ಭಾವವಿತ್ತು. ಹೆಚ್ಚಿನ ಮನೆಗಳಲ್ಲಿ ಹೆಣ್ಣು ಮಕ್ಕಳಿರುವುದೇ ತಾಯಿಗೆ ಮನೆ ಕೆಲಸದಲ್ಲಿ ನೆರವಾಗಲು ಮತ್ತು ತಮ್ಮ~ತಂಗಿಯರನ್ನು ನೋಡಿಕೊಳ್ಳಲು ಎಂಬ ಭಾವವೇ ಜಾಸ್ತಿ ಇತ್ತಲ್ಲ.
ಪ್ರಸ್ತುತದಲ್ಲಿ ಪ್ರತಿ ಪೋಷಕರೂ ಹೆಣ್ಣಾಗಲೀ, ಗಂಡಾಗಲೀ ಮೊದಲ ಆದ್ಯತೆ ವಿದ್ಯೆಗೆ ಕೊಡುತ್ತಿದ್ದಾರೆ. ಕಲಿತಷ್ಟೂ ಕಲಿಯಲಿ ಎಂದು ಪ್ರೋತ್ಸಾಹ ನೀಡುತ್ತಿದ್ದಾರೆ. ಈಗ ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ….’ ಎನ್ನುವ ಭಾವ. ‘ತೊಟ್ಟಿಲನ್ನು ತೂಗುವ ಕೈ, ದೇಶವನ್ನೂ ಆಳಬಲ್ಲದು’ ಎಂಬ ಮನೋಭಾವನೆಯೂ ಎಲ್ಲರಲ್ಲಿದೆ. ಸರಕಾರವೂ ‘ ಬೇಟಿ ಬಚಾವೋ…. ಬೇಟಿ ಪಡಾವೋ’
ಎನ್ನುವ ಸಂದೇಶವನ್ನು ನೀಡುತ್ತ, ಪ್ರತಿ ಹೆಣ್ಣು ಮಗುವಿಗೂ ಮೂಲ ಶಿಕ್ಷಣ ದೊರೆಯುವಂತೆ ಮಾಡಲು ಶ್ರಮಿಸುತ್ತಿದೆ.
ಹಿಂದೆಲ್ಲ ಸರಕಾರಿ ಶಾಲೆಗಳೇ ಜಾಸ್ತಿ. ನಗರಗಳಲ್ಲಿ ಸುವ್ಯವಸ್ಥಿತ ಕಟ್ಟಡ, ಸಾಕಷ್ಟು ಶಿಕ್ಷಕರು ಇರುವ ಶಾಲೆಗಳಿರುತ್ತಿದ್ದವಾದರೂ ಹಳ್ಳಿಗಳಲ್ಲಿನ ಕಟ್ಟಡಗಳು ಮಾತ್ರ ಹೆಚ್ಚಿನವು ಶಿಥಿಲಾವಸ್ಥೆಯೇ. ಹಲವಾರು ಶಾಲೆಗಳು ‘ಏಕೋಪಾಧ್ಯಾಯ’ ಶಾಲೆಗಳೇ ಆಗಿರುತ್ತಿದ್ದವು. ಒಂದೇ ಕೋಣೆಯಲ್ಲಿ, ಒಂದರಿಂದ ನಾಲ್ಕನೇ ತರಗತಿಯ ವರೆಗಿನ ಮಕ್ಕಳನ್ನು ಕೂಡಿಸಿ ಎಲ್ಲರಿಗೂ ಪಾಠ ಮಾಡುತ್ತಿದ್ದದ್ದನ್ನು ನಾನು ನೋಡಿದ್ದೀನಿ. ಅನೇಕ ಕಡೆ ಮರದ ಕೆಳಗೆ ಪಾಠ ಮಾಡುತ್ತಿದ್ದರೆಂದೂ ಕೇಳಿದ್ದೇನೆ. ವಿದ್ಯಾರ್ಥಿಗಳ ಪೋಷಕರ ಆರ್ಥಿಕ ಸ್ಥಿತಿಯೂ ಅಷ್ಟಕ್ಕಷ್ಟೆ ಆಗಿದ್ದರಿಂದ ಅದರ ಬಗ್ಗೆ ಯಾರೂ ತಲೆಬಿಸಿ ಮಾಡುತ್ತಲೇ ಇರಲಿಲ್ಲವೇನೋ…. ಈಗಲೂ ಬೆರಳೆಣಿಕೆಯಷ್ಟು ಶಾಲೆಗಳು ಈ ಪರಿಸ್ಥಿತಿಯಲ್ಲಿರುವುದು ಮಾತ್ರ ಶೋಚನೀಯ ಸಂಗತಿ.
ಕಾಲ ಕಳೆದಂತೆ ಖಾಸಗಿ ಶಾಲೆಗಳು ಆರಂಭವಾದವು. ಕಾನ್ವೆಂಟ್ ಗಳು, ಇಂಗ್ಲೀಷ್ ಮೀಡಿಯಮ್ ಶಾಲೆಗಳು, ಸಂಘ~ಸಂಸ್ಥೆಗಳಿಂದ ನಡೆಯುವ ಶಾಲೆಗಳು ಹುಟ್ಟಿಕೊಂಡವು. ಶುಲ್ಕ ಭರಿಸುವ ಶಕ್ತಿ ಇದ್ದವರು, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸತೊಡಗಿದರು. ಕ್ರಮೇಣ ಸರ್ಕಾರಿ ಶಾಲೆಗಳು ಮೂಲೆ ಗುಂಪಾಗಿ, ಖಾಸಗಿ ಶಾಲೆಗೆ ಹೋಗುವುದು ಪ್ರತಿಷ್ಠೆಯ ಕುರುಹಾಗಿ ಬೆಳೆಯತೊಡಗಿತು.
ಪ್ರಸ್ತುತದಲ್ಲಂತೂ ಶುಲ್ಕ ಹೆಚ್ಚಿದಷ್ಟೂ ಆ ಶಾಲೆ ಉತ್ತಮವೆಂದು ಪರಿಗಣಿಸುವ ಪಾಲಕರು ಹೆಚ್ಚಾಗಿದ್ದಾರೆ. ಈ ಮೂಢ(!) ನಂಬಿಕೆಯನ್ನು ಖಾಸಗಿಯವರು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಮೊದಲೆಲ್ಲ ಇಡೀ ಊರಿಗೆ ಎರೆಡು ಅಥವಾ ಮೂರು ಶಾಲೆಗಳಿದ್ದದ್ದು ಈಗ ಬೀದಿಗೊಂದು ಶಾಲೆ ಎಂಬಂತಾಗಿವೆ. ಕೊರೋನಾ ಕಾಲಘಟ್ಟದಲ್ಲಂತೂ ಆನ್ಲೈನ್ ಶಿಕ್ಷಣದಿಂದಾಗಿ ಪ್ರತೀ ಮನೆಯೂ ಒಂದು ಶಾಲೆಯಾಗಿತ್ತು. ಹೆಚ್ಚಿನ ಎಲ್ಲ ಶಾಲೆಗಳಲ್ಲೂ ಹಿಂದಿನ ಮೌಲ್ಯಯುತ ಶಿಕ್ಷಣಕ್ಕಿಂತ, ಪರೀಕ್ಷೆಯಲ್ಲಿ ತೆಗೆಯುವ ಅಂಕಗಳದ್ದೇ ಕಾರುಬಾರು.
ಅದೆಷ್ಟೋ ಸಂಸ್ಥೆಗಳಲ್ಲಿ ಹಣದಿಂದ ಪದವಿ, ಡಾಕ್ಟರೇಟ್ ಗಳಂತಹವುಗಳನ್ನೂ ಪಡೆಯಬಹುದೆಂದಾದರೆ, ನಮ್ಮ ಶಿಕ್ಷಣ ಮಟ್ಟ ಎಷ್ಟು ಕುಸಿದಿದೆ ಎಂದು ಅಂದಾಜಿಸಬಹುದು.
ಇಂಥಹ ಶಿಕ್ಷಣದ ವ್ಯಾಪಾರೀಕರಣದ ಮಧ್ಯೆಯೂ, ಬೆರಳೆಣಿಕೆಯಷ್ಟಾದರೂ ಉತ್ತಮ ಶಿಕ್ಷಣ ಸಂಸ್ಥೆಗಳಿರುವುದು ಇಂದಿನ ಮಕ್ಕಳ ಭಾಗ್ಯವೇ ಸರಿ.
ಆಗಿನ ಕಾಲದ ಗುರು~ಶಿಷ್ಯರ ಸಂಬಂಧವೂ ಎಷ್ಟೊಂದು ಚೆನ್ನಾಗಿತ್ತು. ವಿದ್ಯಾರ್ಥಿಗಳು ‘ಗುರು ದೇವೋ ಭವ’ ಎಂಬಂತೆ ಗುರುವನ್ನು ದೇವರ ಸ್ವರೂಪವಾಗಿ ಕಂಡರೆ, ಗುರುಗಳಿಗೂ ಅಷ್ಟೆ, ತಮ್ಮ ವಿದ್ಯಾರ್ಥಿಗಳೆಲ್ಲ ಮಕ್ಕಳ ಸಮಾನರು. ಎಲ್ಲರನ್ನೂ ಒಂದೇ ಭಾವದಿಂದ ನೋಡುತ್ತಿದ್ದರು. ಆಗ “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದಿದ್ದ ಮಾತನ್ನು ಈಗಿನ ಕೆಲ ಶ್ರೀಮಂತ, ರಾಜಕೀಯ ನಾಯಕರ ಪುತ್ರರತ್ನ(?) ರು ಗುರುಗಳನ್ನೇ ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳುವಷ್ಟು ಅಧೋಗತಿಗಿಳಿಸಿದ್ದಾರೆ. ಆಗೆಲ್ಲ ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಶಿಕ್ಷೆ ಕೊಡುವ ಅಧಿಕಾರವಿತ್ತು. ಈಗ ಶಿಕ್ಷೆ ಕೊಡುವುದಿರಲಿ, ವಿದ್ಯಾರ್ಥಿಗಳಿಗೆ ಬೈಯುವುದೂ ಮಹಾಪರಾಧವೇ. ಇದಕ್ಕೆ ಸರಿಯಾಗಿ ಕೆಲವು ಶಿಕ್ಷಕ/ ಶಿಕ್ಷಕಿಯರೂ ನೈತಿಕವಾಗಿ ಶಿಕ್ಷೆ ಕೊಡುವ ಅಧಿಕಾರ ಕಳೆದುಕೊಂಡಿರುವುದೂ ವಿಪರ್ಯಾಸವೇ.
ಇನ್ನು ಕೌಟುಂಬಿಕ ದೃಷ್ಟಿಯಿಂದ ಅವಲೋಕಿಸಿದರೆ, ಶಿಕ್ಷಣಕ್ಕೆ ನೀಡುವ ಮೌಲ್ಯದಲ್ಲಿ ಹಿಂದಿಗೂ, ಇಂದಿಗೂ ಅಜಗಜಾಂತರ ವ್ಯತ್ಯಾಸವಿದೆ. ನಮ್ಮದು ಕೃಷಿ ಪ್ರಧಾನ ದೇಶವಾದುದರಿಂದ, ಹಿಂದೆಲ್ಲ ಹೆಚ್ಚಿನ ಮನೆಗಳಲ್ಲಿ ಕೃಷಿ ಹಾಗೂ ಅದಕ್ಕೆ ಸಂಬಂಧಪಟ್ಟ ಕೆಲಸಗಳಿಗೇ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದದ್ದು. ಹಳ್ಳಿಗಳಲ್ಲಂತೂ ಹುಡುಗರು ಸ್ವಲ್ಪ ದುಡಿಯುವಷ್ಟು ದೊಡ್ಡವರಾಗುತ್ತಲೇ ಹೊಲ/ಗದ್ದೆ, ತೋಟಗಳ ಕೆಲಸಕ್ಕೆ ಸೇರಿಸಿಕೊಂಡುಬಿಡುತ್ತಿದ್ದರು. ಹೆಣ್ಣು ಮಕ್ಕಳಂತೂ ಸರಿಯೇ ಸರಿ, ‘ಓದಿ ಏನು ದೇಶ ಆಳ್ಬೇಕಾ?… ಮನೆಯ ಕಸ, ಮುಸುರೆ ಕೆಲಸ, ಅಡುಗೆ ಮನೆಯ ಕೆಲಸ ಕಲಿತು, ಸೇರಿದ ಮನೆಯಲ್ಲಿ ಒಳ್ಳೆ ಹೆಸರು ತಂದರೆ ಸಾಕು ಅನ್ನುವ ಭಾವವೇ ಜಾಸ್ತಿ. ಹಾಗಾಗಿ ಕೃಷಿಗೆ ಸಂಬಂಧಪಟ್ಟ ಹೆಚ್ಚಿನ ಕೆಲಸಗಳಿದ್ದಾಗ ಗಂಡು ಮಕ್ಕಳೂ, ಮನೆಯಲ್ಲಿ ಕಾರ್ಯದೊತ್ತಡವಿದ್ದಾಗ ಹೆಣ್ಣು ಮಕ್ಕಳೂ ಶಾಲೆಗೆ ಚಕ್ಕರ್ ಹಾಕೋದು ಮಾಮೂಲಿಯೇ. ಮನೆಯಲ್ಲಿ ಹಿರಿಯರೇ ….’ಇನ್ನೊಂದು ವಾರ ನೀನೇನು ಶಾಲೆಗೆ ಹೋಗೋದ್ಬೇಡ…. ನಾನು ಮಾಷ್ಟ್ರಿಗೆ ಹೇಳ್ತೀನಿ…. ಎನ್ನುವ ಪರಿಸ್ಥಿತಿ ಇತ್ತೆಂದರೆ, ವಿದ್ಯೆಗೆ ಅದೆಷ್ಟು ಮಹತ್ವ ಕೊಡುತ್ತಿದ್ದರೆಂಬ ಅರಿವಾಗಬಹುದು. ಕೆಲವು ಮನೆಗಳಲ್ಲಂತೂ, ಅದೂ ಕೂಡು ಕುಟುಂಬಗಳಲ್ಲಿ, ಪಾಸಾದ್ರೆ ಮುಂದಿನ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಬೇಕಲ್ಲಾಂತ, ಅಥವಾ ಒಬ್ಬರನ್ನು ಓದಿಸಿದರೆ ಮತ್ತೆ ಎಲ್ಲರನ್ನೂ ಓದಿಸಬೇಕೆಂಬ ಕಾರಣಕ್ಕೇ, ಮಕ್ಕಳು ಅನುತ್ತೀರ್ಣರಾದ್ರೇ ಸಂತಸ ಪಡುವ ಪೋಷಕರಿದ್ದರೂಂತಲೂ ಕೇಳಿ ಅಚ್ಚರಿ, ಸಂಕಟ ಪಟ್ಟಿದ್ದಿದೆ. ಆಗೆಲ್ಲ ಅನೇಕ ಹಳ್ಳಿಗಳಲ್ಲಿ ಶಾಲೆ ಇರದೇ ದಿನಕ್ಕೆ ಅದೆಷ್ಟೋ ಕಿ.ಮಿ ಮಳೆ, ಚಳಿ ಎನ್ನದೇ ನಡೆದೇ ಶಾಲೆಗೆ ಹೋಗಬೇಕಿತ್ತು. ಅದಿಲ್ಲದಿದ್ದರೆ ಬೇರೆ ನೆಂಟರ ಮನೆಗಳಲ್ಲಿ ಇದ್ದು ಓದುವ ಪದ್ಧತಿ ಜಾಸ್ತಿ ಇತ್ತು. ಅದೂ ಒಂದು ರೀತಿಯ ಕಿರಿಕಿರಿಯೇ. ಈಗಿನಂತೆ ಪಿ.ಜಿಗಳು, ಹಾಸ್ಟೆಲ್ ಗಳು ಅಷ್ಟೊಂದಿರದ ಕಾಲವದು. ಇದ್ದರೂ ಅಷ್ಟು ದುಡ್ಡು ಸುರಿಯುವ ಆರ್ಥಿಕ ಪರಿಸ್ಥಿತಿ ಮನೆಯವರದಾಗಿರುತ್ತಿರಲಿಲ್ಲ. ಇನ್ನೂ ಸ್ವಲ್ಪ ಹಿಂದೆಯಂತೂ ಪಾಪದ ಮಕ್ಕಳು, ಇರಲು ಒಂದು ವ್ಯವಸ್ಥೆ ಮಾಡಿಕೊಂಡು ವಾರಾನ್ನ(ದಿನಕ್ಕೊಬ್ಬರ ಮನೆಯಂತೆ ವಾರ ಪೂರ್ತಿ ಒಬ್ಬೊಬ್ಬರ ಮನೆಯಲ್ಲಿ ಊಟ ಮಾಡುವುದು. ಅವರು ಚಿಕ್ಕ~ಪುಟ್ಟ ಕೆಲಸ ಹೇಳಿದರೆ ಮಾಡಿಕೊಡುವುದು)ದಿಂದ ಕಾಲ ಕಳೆದು ವಿಧ್ಯಾಭ್ಯಾಸ ಮುಗಿಸಿದ್ದೂ ಇದೆ. ಮನೆಯಲ್ಲಿ ವಿದ್ಯುತ್ ಇಲ್ಲದೇ ಬೀದಿ ದೀಪದ ಕೆಳಗೆ ಓದಿದವರೆಷ್ಟೋ….. ಆಗೆಲ್ಲ ಓದಿ ತಾನೊಂದು ಉನ್ನತ ಸ್ಥಾನಕ್ಕೇರಬೇಕು, ಮನೆಯ ಕಷ್ಟಕ್ಕೆ ಹೆಗಲಾಗಬೇಕು ಎಂಬಂತಹ ತೀವ್ರ ಹಂಬಲ, ಅಚಲ ಗುರಿಯಷ್ಟೇ ಈ ಎಲ್ಲ ಅಡೆತಡೆಯನ್ನೂ ದಾಟುವಂತೆ ಮಾಡುತ್ತಿತ್ತೇನೋ ಅನಿಸುತ್ತದೆ.
ಇದರ ಜೊತೆ ಇನ್ನೊಂದು ಪ್ರಮುಖ ವಿಷಯ ಹೇಳಲೇಬೇಕು. ಶಾಲೆಗೆ ಸಮವಸ್ತ್ರ ಹಾಕಬೇಕೆಂದಾದ ಮೇಲೆ, ವರುಷಕ್ಕೊಂದು ಜೊತೆ ಎಂದು ಹೊಲೆಸುತ್ತಿದ್ದ ಬಟ್ಟೆಯಲ್ಲಿ ಒಮ್ಮೊಮ್ಮೆ ಸಮವಸ್ತ್ರವನ್ನೇ ಹೊಲಿಸಲಾಗುತ್ತಿತ್ತು. ಒಮ್ಮೆ ಹೊಲಿಸಿದರೆ ಮುಗೀತು ಅದು ಕಡಿಮೆಯಲ್ಲಿ ೪~೫ ವರ್ಷಗಳ ಬಾಳಿಕೆ ಬರಲೇಬೇಕಿತ್ತು. ಊ….ದ್ದ ಹೊಲೆಸಿ, ನಾಲ್ಕು ಬಾರಿ ಮಡಿಚಿ, ಮಕ್ಕಳು ಬೆಳೆಯುತ್ತಿದ್ದಂತೆ ಅದರ ಒಂದೊಂದೇ ಪದರವನ್ನು ಬಿಚ್ಚುತ್ತಿದ್ದರೆ….. ಆಹಾ! ಮೂಲ ವಸ್ತ್ರದ ಬಣ್ಣಕ್ಕೂ, ಬಣ್ಣ ಕಳೆದ ವಸ್ತ್ರಕ್ಕೂ ಒಂದು ಚೂರಾದರೂ ಹೋಲಿಕೆ ಇದ್ದರೆ ಆ ಮಕ್ಕಳ ಪುಣ್ಯವೇ ಸರಿ. ಪುಸ್ತಕಗಳಂತೂ ಸರಿಯೇ ಸರಿ. ಪಾಠದ ಪುಸ್ತಕಗಳೆಲ್ಲ ಒಮ್ಮೆ ಯಾರಿಂದಲಾದರೂ ಅರ್ಧ ಬೆಲೆಗೆ ಕೊಂಡರಾಯ್ತು. ನಂತರ ತಮ್ಮಂದಿರು, ತಂಗಿಯರು ಎಲ್ಲರಿಗೂ ಅವೇ, ಹೊಸ ಹೊಸ ಬೈಂಡ್ ಧರಿಸಿದ ಹಳೆಯ ಪುಸ್ತಕಗಳೇ. ಹಳೆಯ ನೋಟ್ಸನ ಯಾವ ಖಾಲಿ ಹಾಳೆಯನ್ನೂ ಹಾಳು ಮಾಡುವಂತಿಲ್ಲವೇ ಇಲ್ಲ, ಎಲ್ಲ ಸೇರಿಸಿ ಹೊಲೆದು ಇನ್ನೊಂದೆರೆಡು ನೋಟ್ಸ್ ತಯಾರ್ ಆಗ್ತಿತ್ತು ಅಲ್ವಾ….. ಇನ್ನು ಪರೀಕ್ಷೆ ಬರೆಯಲು ರಟ್ಟು, ಪೆನ್, ಕಂಪಾಸ್ ಬಾಕ್ಸ್, ಚಪ್ಪಲಿ, ಟೇಪು, ಕ್ಲಿಪ್, ಕೊಡೆ, (ನಮ್ಮ ತಂದೆ~ತಾಯಿಯರ ಸಮಯದಲ್ಲಿ ಪ್ಲಾಸ್ಟಿಕ್ ಕೊಪ್ಪೆಗಳು) ಮುಂತಾದುವೆಲ್ಲ ಪ್ರೈಮರಿಯಲ್ಲಿ ಒಮ್ಮೆ ಕೊಡಿಸಿದರೆ ಮುಗಿಯಿತು. ಅದೆಷ್ಟು ಜೋಪಾನ ಮಾಡಿಕೊಂಡಿರಬೇಕಿತ್ತಲ್ವ! ಪುಣ್ಯವಂತರಿಗೆ ಹೈಸ್ಕೂಲಿನಲ್ಲಿ ಒಮ್ಮೆ ಹೊಸತು ಬರುತ್ತಿತ್ತೇನೋ…..
ಆದರೂ ಇಷ್ಟೆಲ್ಲ ಕಷ್ಟಗಳ ನಡುವೆಯೂ ಬಾಲ್ಯದಲ್ಲಿದ್ದ ಆ ಉತ್ಸಾಹ ಇವೆಲ್ಲ ಕಷ್ಟವೆಂದು ಅನಿಸಲು ಬಿಡಲೇ ಇಲ್ಲ. ಹೆಚ್ಚಿನ ಎಲ್ಲರ ಮನೆಯ ಪರಿಸ್ಥಿತಿಯೂ ಹೀಗೇ ಇದ್ದುದ್ದರಿಂದ ಖುಷಿಖುಷಿಯಾಗೇ ಕಳೆದು ಹೋಯಿತು. ಹೆಚ್ಚಿನ ಯಾರಿಗೂ ಇವೆಲ್ಲದರಿಂದ ಕೀಳರಿಮೆ ಕಾಡಲೇ ಇಲ್ಲ.
ಕಾಲ ಕಳೆದಂತೆ ಇಂದಿನ ಮಕ್ಕಳು ಶಾಲೆಗೆ ಹೋಗುವುದೇ ಒಂದು ಸಂಭ್ರಮ. ಮಕ್ಕಳಿಗೆ ಬೇಕೋ ಬೇಡವೋ ರಾಶಿ ರಾಶಿ ಶುಲ್ಕ ಕೊಟ್ಟು, ಅದನ್ನೇ ಪ್ರತಿಷ್ಠೆ ಎಂದುಕೊಂಡು ದೊಡ್ಡ ದೊಡ್ಡ ಶಾಲೆಗೆ ಸೇರಿಸುವ, ನಂತರ ಮನೆಪಾಠಕ್ಕೂ ಕಳಿಸುವ ಪೋಷಕರು, ಪ್ರತೀ ವರ್ಷವೂ ಶಾಲೆಯಿಂದಲೇ ಸಿಗುವ ಹೊಸ ಹೊಸ ಸಮವಸ್ತ್ರ, ಪುಸ್ತಕ ಮುಂತಾದವುಗಳು. ಮನೆ ಬಾಗಿಲಿಗೇ ಬಂದು ಮಕ್ಕಳನ್ನು ಕರೆದೊಯ್ಯುವ ಶಾಲಾ ವಾಹನಗಳು, ಊಟದ ಸಮಯದಲ್ಲಿ ಬಿಸಿಬಿಸಿಯಾಗಿ ದೊರೆಯುವ ಆಹಾರ, ಅಬ್ಬ ಎಷ್ಟೆಲ್ಲ ವ್ಯವಸ್ಥೆ. ಸಾಲದ್ದಕ್ಕೆ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲ ಪಾಠಗಳೂ ಇದ್ದರೆ ಮಕ್ಕಳಿಗೆ ಕಷ್ಟವಾಗುತ್ತದೆಂದು ಸೆಮಿಸ್ಟರ್ ಪದ್ಧತಿ. ನಾವೇ ನಮ್ಮ ಮಕ್ಕಳನ್ನು ತೀರ ಸುಖವಾಗಿ ಬೆಳೆಸಿ, ವಿಶಾಲವಾಗಿ ಅರಳಲು ಅವರಿಗಿರುವ ಅಗಾಧ ಯೋಗ್ಯತೆಯನ್ನು ಚಿಕ್ಕದಾಗಿಸಿ, ಬೋನ್ಸಾಯ್ ಥರ ಮಾಡುತ್ತಿದ್ದೀವೇನೋ ಅನಿಸುತ್ತದಲ್ಲವೇ?
(ಸರಕಾರವೂ ಈ ವಿಷಯದಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ತನ್ನ ಶಾಲೆಯಲ್ಲಿ ಓದುವ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಮಧ್ಯಾಹ್ನದ ಊಟ ಇಷ್ಟನ್ನಂತೂ ಖಂಡಿತ ಕೊಡುತ್ತಿದೆ.) ಮಕ್ಕಳು ಹೆಚ್ಚಿನ ಅಂಕ ತೆಗೆಯಲಿ ಎಂದು ತೋರಿಸುವ ಆಮಿಷಗಳು, ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲ ವಿಷಯಗಳಲ್ಲೂ ಬೇರೆಯವರೊಂದಿಗೆ ಮಾಡಿಕೊಳ್ಳುವ ಹೋಲಿಕೆಗಳು, ಒಂದೇ ಎರೆಡೇ….. ಮಕ್ಕಳಿಗೂ, ಪೋಷಕರಿಗೂ ಎಲ್ಲ ಕಡೆಯಿಂದಲೂ ಒತ್ತಡವೇ. ಶಾಲೆಗಳಂತೂ ವ್ಯಾಪಾರೀ ಕೇಂದ್ರಗಳಾಗಿಬಿಟ್ಟಿವೆ. ಮೊದಲು ‘ವಿದ್ಯಾ ದಾನ’ ಎಂದು ಇದ್ದದ್ದು, ಈಗ ವಿದ್ಯೆಯ ಮಾರಾಟದ ಕೇಂದ್ರಗಳಾಗಿವೆ. ಯಾವುದೇ ಪಠ್ಯ, ಪಠ್ಯೇತರ ವಿಷಯಗಳನ್ನು ಕಲಿಸುವುದೂ ಹಣ ಮಾಡುವ ಉದ್ದೇಶದಿಂದಲೇ ಎಂದಾಗಿದೆ. ವಿಪರ್ಯಾಸವೆಂದರೆ ಕಲಿಸುವ ಶಾಲೆಯಲ್ಲೇ, ಶಾಲೆಯ ಸಮಯ ಮುಗಿದ ನಂತರ ಮತ್ತೆ ಪಾಠಮಾಡಿ ಅದಕ್ಕೆ ಟ್ಯೂಷನ್ ಫೀಸ್ ಎಂಬ ಶುಲ್ಕ ಹಾಕುವುದು. ಅದಕ್ಕಿಂತಲೂ ತಮಾಷೆ ಎಂದರೆ ಶಾಲೆ/ಕಾಲೇಜುಗಳಲ್ಲಿ ಹೇಳಿಕೊಡುವ ಉಪಾಧ್ಯಾಯರೇ ಕೆಲವರು ಸಂಜೆ ಮನೆಯಲ್ಲಿ ಮತ್ತೆ ಅದೇ ಮಕ್ಕಳಿಗೆ ಟ್ಯೂಷನ್ ಮಾಡುವುದು. ಚೆನ್ನಾಗಿ ಪಾಠ ಮಾಡುವವರಾದರೆ ಶಾಲೆಯಲ್ಲೇ ತಮ್ಮ ಅವಧಿಯಲ್ಲಿ ಕಲಿಸಬಹುದಲ್ಲ? ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಟ್ಯೂಷನ್ ಗೆ ಬರದ ಮಕ್ಕಳನ್ನು ಶಾಲೆಯಲ್ಲಿ ಬೇರೇ ರೀತಿಯೇ ನಡೆಸಿಕೊಳ್ಳುವುದನ್ನೂ ನೋಡಿದ್ದೇನೆ. ಇವರಿಗೆಲ್ಲ ಆತ್ಮಸಾಕ್ಷಿಯೇ ಇಲ್ವಾಂತ ಬೈದುಕೊಂಡಿದ್ದೇನೆ. ಇಷ್ಟವಿಲ್ಲದಿದ್ದರೂ ಮಕ್ಕಳನ್ನು ಈ ವಿಷಯಕ್ಕಾಗಿ ಮನೆಪಾಠಕ್ಕೆ ಕಳಿಸಬೇಕಾಗುವುದು ಅನೇಕ ಪೋಷಕರಿಗೆ ಅನಿವಾರ್ಯ ಹೊರೆ. ಇದಕ್ಕೆಲ್ಲ ಕಡಿವಾಣ ಹಾಕುವುದಾದರೂ ಹೇಗೆ? ಇದೆಲ್ಲ ನೋಡಿದಾಗ ಹಿಂದಿನ “ಆಚಾರ್ಯ ದೇವೋಭವ” ಎನ್ನುವ ಮಾತಿಗಿದ್ದ ಗೌರವ ನಿಧಾನವಾಗಿ ಕರಗುತ್ತಿದೆ ಎನಿಸುತ್ತಿದೆ. ಕೆಲ ಪೋಷಕರೂ ತಮ್ಮ ಮಕ್ಕಳ ಎದುರಲ್ಲೇ ಶಿಕ್ಷಕ/ ಶಿಕ್ಷಕಿಯರನ್ನು ಬಯ್ಯುವುದರಿಂದ ಮಕ್ಕಳಿಗೂ ಶಿಕ್ಷಕರ ಬಗ್ಗೆ ಸಸಾರವಾಗುತ್ತದೆ. ಹಿಂದೆಲ್ಲ ಖಂಡಿತ ಹೀಗಿರಲಿಲ್ಲ. ಗುರುಗಳನ್ನು ಎಲ್ಲರೂ ಭಯ~ಭಕ್ತಿಗಳಿಂದಲೇ ನೋಡುತ್ತಿದ್ದರು. ಅವರಿಗೊಂದು ಪೂಜ್ಯವಾದ ಸ್ಥಾನವಿತ್ತು. ಗುರುಗಳೂ ಸಹ ತಮ್ಮ ಉನ್ನತ ಧ್ಯೇಯೋದ್ದೇಶಗಳಿಂದ ಅದನ್ನು ಉಳಿಸಿಕೊಂಡಿದ್ದರು. ಈಗ ‘ಕಾಲಾಯ ತಸ್ಮೈ ನಮ:’ ಅನ್ನದೇ ಬೇರೆ ಉಪಾಯವಿಲ್ಲ…. ಅಂತೂ ಎಲ್ಲ ರೀತಿಯಲ್ಲೂ ಶಿಕ್ಷಣದ ಮಟ್ಟ ಕುಸಿಯುತ್ತಿರುವುದಂತೂ ಸತ್ಯ.
ಇದು ನಾನು ಕಂಡಂತೆ ಜೀವನ ಶೈಲಿಯಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹಿಂದಿನಿಂದ ಇಂದಿನವರೆಗಾದ ಬದಲಾವಣೆ.ನಿಮಗೂ ಈ ಅನುಭವಗಳಿರಬಹುದಲ್ವ….

ಜ್ಯೋತಿ ರಾಜೇಶ್