ಈ ನಮ್ಮ ಮನಸ್ಸು ಎಂಥಾ ವಿಚಿತ್ರ ಅಂದ್ರೆ ಸದಾ ನಮ್ಮಜೊತೆಯಲ್ಲೇ ನಮ್ಮೆದುರೇ ಇರುವವರಿಗಿಂತ ದೂರದಲ್ಲೆಲ್ಲೋ ಇರುವವರನ್ನು ನೆನೆದು ಒಮ್ಮೊಮ್ಮೆ ತುಂಬಾ ಭಾವುಕವಾಗಿ ಬಿಡುತ್ತೆ.
ಹಾಂ…ದೂರದಲ್ಲಿರುವವರೆಂದರೆ ಅವರು ನಮಗೆ ಚೆನ್ನಾಗಿ ಗೊತ್ತಿರಲೇಬೇಕೆಂದೇನೂ ಅಲ್ಲ ಅಥವಾ ಅವರು ನಮ್ಮ ಬಂಧುಗಳು ಸ್ನೇಹಿತರೂ ಆಗಬೇಕೆಂದೇನೂ ಇಲ್ಲ. ಎಲ್ಲೋ ನೋಡಿದ, ಕೇಳಿದ ಅಥವಾ ಇದುವರೆಗೂ ನೋಡಿಯೇ ಇಲ್ಲದ ವ್ಯಕ್ತಿಗಳೂ, ಅವರ ವ್ಯಕ್ತಿತ್ವಗಳ ಒಂದು ಸಣ್ಣ ನೆನಪಿನ ಫ಼್ಲಾಷ್ ಸಹಾ ನಮ್ಮೊಳಗೆ ಒಂಥರಾ ಪಾಸಿಟೀವ್ ವೈಬ್ಸ್ ಹುಟ್ಟುಹಾಕಬಲ್ಲದು !
ಅದೆಂತಹಾ ಪಾಸಿಟೀವ್ ವೈಬ್ಸ್ ಗಳೆಂದರೆ ಜೀವನದಲ್ಲಿ ನಿರಾಶೆಯ ಕ್ಷಣಗಳೇ ಕಣ್ಣೆದುರಿಗಿದ್ದಾಗ, ನೋವುಗಳೇ ಸುತ್ತುವರೆದಾಗ, ಬದುಕಿನ ನಿತ್ಯ ಜಂಜಾಟಗಳೇ ಜಡಿದು ಕೂರಿಸಿರುವಾಗ, ನಮ್ಮವರೇ ನಮಗೆ ಹಿತಶತ್ರುಗಳೆಂದೆನಿಸಿದಾಗ , ಬದುಕಲ್ಲಿ ಅಂದುಕೊಂಡ ಯಾವುದೂ ಕೈಹಿಡಿಯದೇ ಹೋದಾಗ, ಹತ್ತಿರದವರಿಗೇ ನೀವೇನೆಂದು ಅರ್ಥವಾಗದಾಗ, ನಂಬಿದವರೇ ಬೆನ್ನಹಿಂದೆ ತಿವಿದಾಗ ಅಥವಾ ಇದಾವುದಲ್ಲದಿದ್ದರೂ ತಥಾಕಥಿತ ಬದುಕಿನ ಏಕತಾನತೆಯಿಂದ ಕಿಂಚಿತ್ ವಿಮುಖನಾಗಿ ನೋಡಿದಾಗ, ಆಕಸ್ಮಾತ್ ಮನದೊಳಗೆ ಮೂಡುವ ಇಂತಹ ವ್ಯಕ್ತಿಗಳ ನೆನಪುಗಳು, ಯೋಚನೆಗಳು, ಅಥವಾ ಅಂದುಕೊಳ್ಳದೇ ಮೂಡಬಹುದಾದ ಸ್ಮರಣೆಯೇ ನಮ್ಮೊಳಗೆ ಈ ಎಲ್ಲಾ ದುಗುಡಗಳನ್ನೂ ಮೀರಿ ಎಂಥಾದ್ದೋ ಒಂದು ಧನಾತ್ಮಕ ಸಂವೇದನೆಗಳನ್ನು ಅನಾಮತ್ತು ಹುಟ್ಟುಹಾಕಬಲ್ಲದು …ಒಂಥರಾ ಬಿಸಿಲಿನ ಧಗೆಯಲ್ಲಿ ಬೆವರಿಳಿಸಿ ಕೂತವನಿಗೆ ಹಿತವಾದ ತಂಗಾಳಿ ಬೀಸಿದಂತೆ !
ಅಂದ ಮಾತ್ರಕ್ಕೆ ಇದು ದಿನವಿಡೀ ಹತ್ತಿರವಿರುವವರ ಬಗೆಗಿನ ತಾತ್ಸಾರವಾಗಲೀ , ಚಲ್ತಾ ಹೈ ಆಟಿಟ್ಯೂಡು ಅಂತಾಗಲೀ ಅಥವಾ ಎಲ್ಲೋ ಒಮ್ಮೊಮ್ಮೆ ಅಪರೂಪಕ್ಕೆ ಸಿಗುವವರ ಮೇಲೆ ಸಹಜ ಕೌತುಕದಿಂದ ಹುಟ್ಟಿಕೊಳ್ಳಬಹುದಾದ ಔಪಚಾರಿಕ ಭಾವನೆಗಳಾಗಲೀ ಅಲ್ಲ. ಇದೊಂಥರಾ ಅವ್ಯಕ್ತ ಆಲಾಪನೆಯಂತೆ, ಹೃದಯದೊಳಗೆ ಅವಿತುಕೊಂಡೇ ಇರಬಹುದಾದ ಅನಿಸಿಕೆಗಳಂತೆ , ಅಂದುಕೊಂಡಾಗಲೆಲ್ಲಾ ಆವಿರ್ಭವಿಸುವ ಆಮೋದದಂತೆ ಮನದೊಳಗೆ ಆ ಕ್ಷಣದ ಜೀವಸೆಲೆಯನ್ನು ಉದ್ದೀಪನಗೊಳಿಸಬಲ್ಲ ” ಸವಿ ಚೇತನ ” ವುಳ್ಳದ್ದು, ಪವಿತ್ರವಾದದ್ದು , ಪಾರಮಾರ್ಥಿಕವಾದದ್ದು ಅಥವಾ ಯಾವ ಅಕ್ಷರಗಳ ಅಂಕೆಗೂ ಸಿಗದಿರುವ ಶ್ರೇಷ್ಠ ಭಾವನೆಗಳಂಥಾದ್ದು.
ಹಾಗಾದರೆ ನಮ್ಮನಡುವೆ ಇರುವವರಲ್ಲಿ ಇಲ್ಲದೇ ಇರುವ , ಹೀಗೆ ಎಲ್ಲೋ ಬೇರೆಡೆಯಿರುವವರಲ್ಲಿ ಇರಬಹುದಾದ ಈ ತೆರನಾದ ಜೀವನೋತ್ಸಾಹದ ಚುಳುಕು ಸೃಜಿಸಬಲ್ಲ ಶಕ್ತಿ ಅದಾವುದು ? ಅದಾವ ಮೋಡಿಯದು ? ಅದಾವ ಸೆಳೆತವದು…?
ಅದೇನು ಪ್ರೀತಿಯೋ, ಪ್ರೇಮವೋ ? ಸ್ನೇಹವೋ , ಮೋಹವೋ, ಅನುರಾಗವೋ , ಅಭಿಮಾನವೋ, ಆರಾಧನೆಯೋ..?
ಚಕ್ಕನೇ ಹೇಳಲಾಗೋಲ್ಲಾರೀ….!
ಅದು ಅವರವರ ಭಾವನೆಗಳಿಗೆ ತಕ್ಕಂತೆ , ಆಲೋಚನೆಗಳಿಗೆ ನಿಲುಕುವಂತೆ ಇವುಗಳಲ್ಲಿ ಯಾವುದಾದರೂ ಆಗಿರಬಹುದು ಅಥವಾ ಇದಾವುವೂ ಅಲ್ಲದೆಯೂ ಇರಬಹುದು. ಮನುಷ್ಯನ ಭಾವನೆಗಳ ಅಭಿವ್ಯಕ್ತಿಗೆ ಸಿಗದ ಅನೇಕಾನೇಕ ಸೂಕ್ಷ್ಮ ಸಂಗತಿಗಳಲ್ಲಿ ಒಂದಾಗಿರಬಹುದು.
ಇದರ ಅಸಲಿಯತ್ತೇನು ಗೊತ್ತಾ..? ಈ ಫ಼ೀಲಿಂಗುಗಳು ಕೇವಲ ಭಾವಜೀವಿಗಳಲ್ಲಿ ಅಥವಾ ಭಾವುಕತೆಯ ಬಕ್ರಾಗಳಲ್ಲಿ ಮಾತ್ರ ಇರುತ್ತವೆ ಅಂತಲ್ಲ. ಬದುಕಿನ ಯಾವುದೋ ಒಂದು ಹಂತದಲ್ಲಿ ಈ ರೀತಿಯ ಸ್ಥಿತಿಗೆ ಮನುಷ್ಯನ ಮನಸ್ಸು ತಾನಾಗಿಯೇ ತೆರೆದುಕೊಂಡಿರ ಬಲ್ಲದು. ಅದಕ್ಕೆ ಭಾವುಕ- ನಿರ್ಭಾವುಕ ಎಂಬ ಬೇಧವಿರುವುದಿಲ್ಲ. ಭಾವುಕರು ಅದನ್ನು ಗುರುತಿಸಬಲ್ಲರಾದರೆ ನಿರ್ಭಾವುಕರಿಗೆ ಅಥವಾ ನಿತ್ಯ ಜೀವನದ ತಾಪತ್ರಯಗಳಲ್ಲೇ ತಾನು ಮುಳುಗಿದ್ದೇನೆಂದು ಭ್ರಮಿಸುವವರಿಗೆ ಅದರ ಸೂಕ್ಷ್ಮತೆಯ ರಿಚ್, ಟಚ್ ಆಗದೇ ಹೋಗಬಹುದು.
ಕೇವಲ ನೆನಪು ಮಾತ್ರದಿಂದಲೇ ಆ ರೀತಿಯ ಜೀವಸೆಲೆ ಉಕ್ಕಿಸಬಲ್ಲ ವ್ಯಕ್ತಿತ್ವವುಳ್ಳವರು ಇಂಥವರೇ ಎಂದು ಆಗಬೇಕಿಲ್ಲ, ಅಥವಾ ಅಂಥವರು ಜೀವಂತವಾಗಿಯೇ ಇರಬೇಕಿಲ್ಲ. ಅಸಲು ನಮ್ಮಿಂದ ಎಲ್ಲೋ ಬಹುದೂರದಲ್ಲಿರುವ ಚೇತನಗಳು, ನಾವು ನೇರವಾಗಿ ನೋಡಿಯೇ ಇರದ, ಭೇಟಿಯಾಗದೇ ಇರುವ ವ್ಯಕ್ತಿಗಳು- ಶಕ್ತಿಗಳು ಹೇಗಿದ್ದರೇನು ಅಲ್ಲವೇ..? ಅದು ಅಮೂರ್ತವಾಗಿದ್ದರೂ ಅವರಿಗೆಂದೇ ಮನದಲ್ಲೆಲ್ಲೋ ಒಂದೆಡೆ ವಿಶೇಷ ಜಾಗ ಮನೆ ಮಾಡಿರಬಲ್ಲದು.
ಅವರ ನೆನಪು- ಸ್ಮರಣೆ ಮಾತ್ರ ನಮ್ಮೊಳಗೆ ಒಂದು ವಿನೂತನ ಸಂವೇದನೆಯನ್ನು , ಅವ್ಯಕ್ತವಾದ ಸಂತೃಪ್ತಿಯನ್ನು , ಬರಡಾದ ಹೃದಯಕ್ಕೆ ಪ್ರೀತಿ ಪ್ರೇಮಗಳ ಅಥವಾ ಪೂಜ್ಯ ಆರಾಧನೆಗಳ ಜೀವನೋತ್ಸಾಹಗಳ ಜೀವಸೆಲೆಯನ್ನು ಹುಟ್ಟುಹಾಕಬಲ್ಲದ್ದಾದರೆ……
ಅದಕ್ಕಿಂತ ಮತ್ತೇನು ಬೇಕು…. ?
ಮರೆಯುವ ಮುನ್ನ
ಜೀವನದಲ್ಲಿ ಇರುವುದಕ್ಕಿಂತಲೂ ಇಲ್ಲದಿರುವ ಕಡೆಗೆ, ಹತ್ತಿರವಿರುವವರಿಗಿಂತಲೂ ದೂರದಲ್ಲಿರುವವರೆಡೆಗೆ ನಮ್ಮೊಳಗೆ ಉಂಟಾಗುವ ಈ ವಿಚಿತ್ರ ಭಾವನೆ ಗಳಿಗಿರಬಹುದಾದ ಸೆಳಕುಗಳನ್ನು ಹುಡುಕುವುದು ಒಂಥರಾ ನದಿಮೂಲ ಋಷಿಮೂಲ ಹುಡುಕಿದಂತೆ. ! ಅವೊಂಥರಾ ನಮಗೆ ಗೊತ್ತಿದ್ದೂ ಗೊತ್ತಿಲ್ಲದಂತೆ, ಅರಿವಿದ್ದೂ ಅರಿವಿಲ್ಲದಂತೆ ಇರಬಹುದಾದ ನಿರಾಮಯ ಸ್ಥಿತಿ .
ಕೆಲವೊಮ್ಮೆ ಸೊರಗಿದ ಮರಿದುಂಬಿಯಂತಾಗಿದ್ದ ನಿಮ್ಮ ನೀರಸ ಕ್ಷಣಗಳಲ್ಲೂ ತಮ್ಮ ಸ್ಮರಣೆ ಮಾತ್ರದಿಂದಲೇ ಸ್ವರ ಹಾಡಿಸಬಲ್ಲ ತಾಕತ್ತಿರುವ ಅಂತಹ ವ್ಯಕ್ತಿಗಳು- ವ್ಯಕ್ತಿತ್ವಗಳು ನಿಮ್ಮ ಬಾಳಪುಟದ ಲಿಸ್ಟ್ ನಲ್ಲಿದ್ದಾರೆಯೇ…..?
ಒಮ್ಮೆ ತಿರುವಿ ನೋಡಿ. ಏಕೆಂದರೆ ಅದು….. ಸಿರ್ಫ಼್ ನಿಮಗೆ ಮಾತ್ರ ಗೊತ್ತು.!
ಪ್ರೀತಿಯಿಂದ…..

ಹಿರಿಯೂರು ಪ್ರಕಾಶ್.