ನಮ್ಮೆಲ್ಲರ ಜೀವನಪಯಣದಲ್ಲಿ ಕೆಲವರು ಅನಿರೀಕ್ಷಿತವಾಗಿ ಅಮರಿಕೊಂಡು ಅತ್ಯಂತ ಆತ್ಮೀಯವಾಗಿ ಹತ್ತಿರಕ್ಕೆ ಬಂದು ನಿಲ್ಲುತ್ತಾ ನಮ್ಮೊಡನೆ ಸಾಗುತ್ತಾರೆ. ಅವರಿಗೆ ಬನ್ನಿ ಅಂತ ನಾವೇನೂ ಆಹ್ವಾನ ಕೊಟ್ಟು ಕರೆದಿರುವುದಿಲ್ಲವಾದರೂ, ಕೆಲವರು ತಾವಾಗಿಯೇ ಎಷ್ಟು ಹತ್ತಿರಕ್ಕೆ ನಮ್ಮ ಜಿಂದಗಿಯಲ್ಲಿ ಜೀಕುತ್ತಾರೆಂದರೆ ಇಷ್ಟು ದಿನ ಇವರೆಲ್ಲಿದ್ದರಪ್ಪಾ ಎನ್ನುವಷ್ಟರ ಮಟ್ಟಿಗೆ ನಮ್ಮ ಎದೆಗೂಡಲ್ಲಿ ಭಾವನಾತ್ಮಕ ರಂಧ್ರ ಕೊರೆದು ಜಾಗ ಮಾಡಿ ಕೆಲಕಾಲ ಭದ್ರವಾಗಿ ಕೂತುಬಿಟ್ಟಿರುತ್ತಾರೆ.
ಹೀಗೆ ಬಂದವರ ಎಂಟ್ರಿಯಿಂದಾಗಿ ಅಲ್ಲಿಯವರೆಗೂ ನಮ್ಮ ಸನಿಹದಲ್ಲಿದ್ದವರ ಅಥವಾ ಇರಬೇಕೆಂದು ಕೊಂಡವರನ್ನೆಲ್ಲಾ ಸೈಲೆಂಟಾಗಿ ಸೈಡಿಗೆ ತಳ್ಳಿ ಹೊಸದಾಗಿ ನಮ್ಮತ್ತ ಬಾಗಿದ ಇಂಥವರ ಗೆಳೆತನಕ್ಕೆ ನಮ್ಮ ಮನಸ್ಸು ಎಂಬುದು ಅನ್ ಕಂಡೀಷನಲ್ ಆಗಿ ಫ಼ಿದಾ ಆಗಿಬಿಡುತ್ತದೆ. ಈ ಮನಸೇ ಒಂಥರಾ ವಿಚಿತ್ರ ಕಣ್ರೀ… !
ಆಲ್ ರೈಟ್ , ಈ ರೀತಿ ಆಕಸ್ಮಿಕವಾಗಿ ಅಥವಾ ಸಾಂಧರ್ಭಿಕವಾಗಿ ನಮ್ಮ ಸನಿಹಕ್ಕೆ ಬಂದು ತುಂಬಾನೇ ಹಚ್ಚಿಕೊಳ್ಳುವ ಕೆಲವರು ನಮ್ಮ ಜೊತೆ ಕೊನೆಯವರೆಗೂ ಹಾಗೇನೇ ಯಾಕೆ ಉಳಿಯಲಾರರು…. ಎಂಬ ಜಿಜ್ಞಾಸೆ ಹೀಗೆ ಬಂದು ಹಾಗೆ ಬಿಟ್ಟು ಹೋಗುವವರ ವರ್ತನೆಯನ್ನು ನೋಡಿದಾಗ ನಮ್ಮನ್ನು ಬೇಡವೆಂದರೂ ಆಗಾಗ್ಗೆ ಕಾಡುತ್ತಲೇ ಇರುತ್ತದೆ.
ನಮ್ಮ ಬದುಕಿನಲ್ಲಿ ಕೆಲವರು ಹಾಗೆ ಎಂಟ್ರಿ ಕೊಡುವಾಗ ನಮ್ಮ ಮನಸಿನ ಮೇಲೆ ತಂಗಾಳಿ ಬೀಸಿದಂತಹ ಅನುಭವವನ್ನು ಸೃಷ್ಟಿ ಮಾಡಿದರೆ, ಕಾರಣ ಕೊಡದೇ ನಮ್ಮಿಂದ ಹೊರಡುವಾಗ ಮನದಾಳದಲ್ಲೆಲ್ಲೋ ಒಂದೆಡೆ ಬಿರುಗಾಳಿಯಂತಹ ಗೊಂದಲವನ್ನು ಉಳಿಸಿಯೇ ಹೋಗುತ್ತಾರೆ. ಅದರ ಪರಿಣಾಮದ ಆಳ ಅಗಲಗಳು ಒಬ್ಬರಿಂದ ಮತ್ತೊಬ್ಬರಿಗೆ ವಿಭಿನ್ನವಾಗಿದ್ದು, ಆಯಾ ಸಂಬಂಧಗಳ ವ್ಯಾಪ್ತಿಯ ಮೇಲೆ ಅವುಗಳ ಆಯಸ್ಸು ನಿಂತಿರಬಲ್ಲವು.
ನನ್ನ ಜೀವನದಲ್ಲಂತೂ ಈ ತರಹದ ಗಿರಾಕಿಗಳ ದೊಡ್ಡ ಲಿಸ್ಟೇ ಇದೆ. ಅವರು ನನ್ನ ಬದುಕಿನ ಸಂಪರ್ಕಕ್ಕೆ ಎಷ್ಟು ಆಕಸ್ಮಿಕವಾಗಿ ಬಂದು ಆತ್ಮೀಯವಾಗಿ ಸೇರಿಕೊಳ್ಳುತ್ತಾರೋ, ದೀರ್ಘಕಾಲ ನೆಲೆನಿಲ್ಲದೇ , ಬಿಟ್ಟುಹೋಗುವ ಬಗೆಗಿನ ಒಂದು ಸಣ್ಣ ಸುಳಿವೂ ಸಹ ಕೊಡದೇ ಅಷ್ಟೇ ವೇಗವಾಗಿ ಸದ್ದಿಲ್ಲದೇ ಗಾಯಬ್ ಆಗಿಬಿಟ್ಟಿರುತ್ತಾರೆ. ಅವರೇಕೆ ನನ್ನತ್ತ ಅಂತಹಾ ಆಳವಾದ ಆತ್ಮೀಯತೆ ತೋರಿ ಬಂದರು, ಇಲ್ಲಿಯವರೆಗೂ ಅಷ್ಟೇಕೆ ಕ್ಲೋಸಾಗಿದ್ದರು, ಹಾಗಿದ್ದವರು ಯಾವ ಸಕಾರಣವೂ ಇಲ್ಲದೇ ಹೀಗೇಕೆ ಒಮ್ಮೆಲೇ ಬದುಕಿನ ಪುಟಗಳಿಂದ ತಮ್ಮ ಹೆಜ್ಜೆಗುರುತುಗಳನ್ನು ಅಳಿಸಿ ಹೋದರು…..ಎಂಬಿತ್ಯಾದಿ ಹುಳುಗಳನ್ನು ಮೊದಮೊದಲು ತಲೆಯೊಳಗೆ ಸಾಕಷ್ಟು ಬಿಟ್ಟುಕೊಂಡಿದ್ದರೂ ದೇಹ ಹಾಗೂ ಮನಸ್ಸು ಮಾಗಿದಂತೆಲ್ಲಾ ಅಂತಹ ಘಟನೆಗಳನ್ನು ಸಹಜವೆಂಬಂತೆ ಸ್ವೀಕರಿಸಿ ಅವರ ಉದ್ದೇಶಗಳೂ ನಿಧಾನಕ್ಕೆ ಅರ್ಥವಾದ ಮೇಲೆ ಪ್ರಾಕ್ಟಿಕಲ್ ಆಗಿ ಬದುಕುವುದನ್ನು ಅನುಭವ ಎಂದೋ ಕಲಿಸಿತ್ತು. !
ಆದರೆ ಈ ಬಂದು ಹೋಗುವ ಪ್ರಕ್ರಿಯೆಯಲ್ಲಿ ಬಹುತೇಕರು ನನ್ನಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಂಡು ಆನಂತರ ಧಿಡೀರ್ ಎಂದು ದೂರ ಸರಿದರೂ ಅವರೆಲ್ಲಾ ನನಗೆ ಕಲಿಸಿ ಹೋದ ಜೀವನದ ಕಹಿಸತ್ಯದ ಪಾಠಗಳ ಸಿಲಬಸ್ ಮಾತ್ರ ಸಕತ್ತು ದೊಡ್ಡದೇ ಇದೆ. ! ಹೀಗಾಗಿ ನಾನು ಕಳೆದುಕೊಂಡ ಸಮಯ, ಹಣ, ಶ್ರಮ, ನಂಬಿಕೆ ಇತ್ಯಾದಿಗಳಿಗಿಂತ ಪಡೆದ ಅನುಭವಗಳ ಪಾಠಗಳ ಸಾರವೇ ಹೆಚ್ಚು !
ಇಷ್ಟಾದರೂ…ರಿಯಲೀ ನೋ ರಿಗ್ರೆಟ್ಸ್ ! ಏಕೆ ಗೊತ್ತಾ…. ನನ್ನಿಂದ ಯಾವುದೋ ಒಂದು ಹಂತದಲ್ಲಿ ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡುವ ಅವಕಾಶ ಆ ದೇವರು ಕೊಟ್ಟನಲ್ಲ ಎಂಬ ಮೌಲಿಕ ತೃಪ್ತಿಯಿದೆಯಲ್ಲಾ….ಅದನ್ನು ಯಾರೂ ಕಸಿಯಲಾರರು.
ಆದರೆ ಅಂತಹ ಅನುಭವ ಪಾಠಗಳ ಆಧಾರದಲ್ಲಿ ಹೇಳುವುದಾದರೆ, ನಮ್ಮೊಂದಿಗೆ ಸದಾ ನೆರಳಂತೆ ನಿಲ್ಲುವವರು , ನಮ್ಮನ್ನು ಅರ್ಥ ಮಾಡಿಕೊಂಡಿರುವವರು, ನಮ್ಮ ಕಷ್ಟದ, ನೋವಿನ ಸಂಧರ್ಭಗಳಲ್ಲಿ ಭಾಗಿಯಾಗುವವರು, ಸಮಯ ಬಂದಾಗ ನಮ್ಮ ಸಂಕಟಗಳಿಗೆ ಸಾಂತ್ವನ ಹೇಳುವವರು, ಸಂದಿಗ್ಧದ ಸಮಯದಲ್ಲಿ ನಮ್ಮ ಹೆಗಲಿಗೆ ಹೆಗಲು ಕೊಟ್ಟು ಜೊತೆಯಾಗಿ ಹೆಜ್ಜೆ ಹಾಕುವವರು, ಎಲ್ಲಕ್ಕಿಂತ ಮುಖ್ಯವಾಗಿ ಎಂತಹದೇ ಸನ್ನಿವೇಶದಲ್ಲೂ ನಮ್ಮ ಅಂತರಂಗವನ್ನು ಪ್ರಾಮಾಣಿಕವಾಗಿ ಅರಿತವರು ಪೂರ್ತಿಯಾಗಿ ಇರೋದಕ್ಕೆ ಛಾನ್ಸೇ ಇಲ್ಲ. ಒಂದೊಮ್ಮೆ ಈ ವಿಚಾರದಲ್ಲಿ ಕೆಲ ಅದೃಷ್ಟವಂತರಿದ್ದರೂ ಅಂಥವರ ಸಂಖ್ಯೆ ಜಸ್ಟ್ ಬೆರಳೆಣಿಕೆಯಷ್ಟು ಮಾತ್ರ.
ಹೀಗಾಗಿ ನಮ್ಮ ಬದುಕಿನ ಹೆಜ್ಜೆಗಳಲ್ಲಿ ಕೇವಲ ಯಾವುದೋ ಒಂದು ಪ್ರಯೋಜನದ ಉದ್ದೇಶವನ್ನಿಟ್ಟುಕೊಂಡೇ ಬರುವ ಸಾಲು ಸಾಲು ಜೊಳ್ಳು ಪೊಳ್ಳುಗಳು ನಿಂತಲ್ಲಿ ನಿಲ್ಲಲಾರದೇ ತರಗಲೆಗಳಂತೆ ಹೇಳದೇ ಕೇಳದೇ ಉದುರಿ ಚದುರಿ ಬಿಡುತ್ತವೆ. ಆದರೆ ನಮ್ಮ ಒಟ್ಟಾರೆ ವ್ಯಕ್ತಿತ್ವವನ್ನು ಸಿರ್ಫ಼್ ಅಂತರಂಗದ ಕಣ್ಣುಗಳಿಂದ ಅರ್ಥೈಸಿಕೊಳ್ಳಬಲ್ಲವಂಥವು ಮಾತ್ರವೇ ದೀರ್ಘಕಾಲ ಗಟ್ಟಿಯಾಗಿರಬಲ್ಲವು , ನಮ್ಮ ಕೊನೆಯ ಉಸಿರಿನವರೆಗೂ ನಮ್ಮನ್ನು ಅರ್ಥಮಾಡಿಕೊಂಡೇ ನಮ್ಮೊಂದಿಗೆ ಹೆಜ್ಜೆ ಹಾಕಬಲ್ಲವು.
ಹಾಗೆ ಬಂದು ಹೀಗೆ ಹೋಗುವ ಸ್ನೇಹವೆಂಬ ಹೆಸರಿನ ಸಾವಿರ ಸಾವಿರ ತರಗಲೆಗಳಿಗೆ ಅವು ಬಂದರೂ ಹೋದರೂ ತಲೆಕೆಡಿಸಿಕೊಳ್ಳದೇ ಸ್ಥಿತಪ್ರಜ್ಞರಾಗಿ ನಮ್ಮ ನಮ್ಮ ವ್ಯಕ್ತಿತ್ವದ ಕೆಮಿಸ್ಟ್ರಿಗಳಿಗೆ ಮ್ಯಾಚ್ ಆಗುವ ಕೆಲವರ ಸ್ನೇಹಬಂಧನವನ್ನಷ್ಟೇ ಆಪ್ಯಾಯತೆಯಿಂದ ಅಪ್ಪಿಕೊಂಡು ಮಿಕ್ಕಿದ್ದನ್ನು ಮೈಗೂ ಮನಸ್ಸಿಗೂ ಅಂಟಿಸಿಕೊಳ್ಳದೇ ಜೀವನಪಯಣದಲ್ಲಿ ಖುಷಿಯಿಂದ ಮುಂದೆ ಸಾಗುವುದರಲ್ಲಿ ನಮ್ಮ ಮಿನಿಮಮ್ ಪ್ರಬುದ್ದತೆ ಇರಬಹುದು.
ಬಹುಶಃ ಇಂತಹ ಪ್ರಬುದ್ಧತೆಯೆಂಬುದು ನಮಗಾದ ಕೆಟ್ಟ ಅನುಭವಗಳಿಂದ ಪಾಠ ಕಲಿತನಂತರವಷ್ಟೇ ಬರಬಹುದೇನೋ… !
ದಿಸ್ ಈಸ್ ಸೋ….ಕಾಸ್ಟ್ಲೀ ಯಾ…..!!
ಒಂದಷ್ಟು ದಿನ ನಮ್ಮ ಜೊತೆಗೆ ಬಿಗಿಯಾಗಿ ಅಂಟಿಕೊಂಡು ನಮ್ಮೊಡನೆಯೇ ಹೆಜ್ಜೆ ಹಾಕುತ್ತಿದ್ದ ಸ್ನೇಹಿತರು , ಪರಿಚಿತರು , ಸಹೋದ್ಯೋಗಿಗಳು , ಬಂಧುಗಳು…..ಈಗ ನಮ್ಮೊಂದಿಗೆ ಮೊದಲಿನಂತೆ ಬರುತ್ತಿಲ್ಲ ಅಂದ್ರೆ ಅರ್ಥ, ಅವರಿಗೆ ನಮ್ಮ ಅವಶ್ಯಕತೆ ಮುಗಿದಿರಬೇಕು, ಅವರು ನಮ್ಮೊಡನೆ ಹೆಜ್ಜೆ ಹಾಕುತ್ತಿದ್ದ ಉದ್ದೇಶ ಈಡೇರಿರಬೇಕು ಅಥವಾ ಅವರ ಮಹತ್ವಾಕಾಂಕ್ಷೆಯನ್ನು ತಲುಪಬಲ್ಲ ಮತ್ತಾವುದೋ ಸಂಪನ್ಮೂಲದ ಬೇರು ಅವರ ಕೈಗೆ ತಾಕಿರಬೇಕು. !
ಲೈಫ಼್ ಈಸ್ ಸೋ……ಇಂಟರೆಸ್ಟಿಂಗ್ ಅಲ್ವಾ..?

ಹಿರಿಯೂರು ಪ್ರಕಾಶ್.



