- ಇರಾನ್ ನಡೆಗೆ ಜಾಗತಿಕ ಆತಂಕ
ಟೆಹರಾನ್: ಹೊರ್ಮುಜ್ ಜಲಸಂಧಿಯ ಮೇಲಿನ ಹಿಡಿತದ ಬಳಿಕ ಇರಾನ್ ಇದೀಗ ಮತ್ತೊಂದು ಪ್ರಮುಖ ಜಲಮಾರ್ಗವಾದ ‘ಬಬ್–ಎಲ್–ಮಂಡೇಬ್’ ಜಲಸಂಧಿಯನ್ನು ಸ್ಥಗಿತಗೊಳಿಸುವ ಬೆದರಿಕೆ ಹಾಕಿದೆ. ಈ ಮೂಲಕ ಜಾಗತಿಕ ಹಡಗು ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.
ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘೇರ್ ಖಾಲಿಬಫ್, ‘ಬಬ್–ಎಲ್–ಮಂಡೇಬ್ ಜಲಸಂಧಿಯ ಮೂಲಕ ಸಾಗುವ ಸರಕು ಸಾಗಣೆಗೆ ತಡೆಯೊಡ್ಡಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ‘ಜಾಗತಿಕ ತೈಲ, ಎಲ್‌ಎನ್‌ಜಿ, ಗೋಧಿ, ಅಕ್ಕಿ ಮತ್ತು ರಸಗೊಬ್ಬರಗಳಲ್ಲಿ ಎಷ್ಟು ಪಾಲು ಈ ಜಲಸಂಧಿಯ ಮೂಲಕ ಸಾಗುತ್ತದೆ? ಯಾವ ದೇಶಗಳ ಯಾವ ಕಂಪನಿಗಳ ಸರಕುಗಳು ಇಲ್ಲಿ ಹಾದುಹೋಗುತ್ತವೆ?’ ಎಂದು ಪ್ರಶ್ನಿಸಿದ್ದಾರೆ.
ಹೊರ್ಮುಜ್ ಜಲಸಂಧಿಯಲ್ಲಿ ಈಗಾಗಲೇ ಉಂಟಾಗಿರುವ ಅಡೆತಡೆಗಳ ನಡುವೆಯೇ ಇರಾನ್ ತನ್ನ ಗಮನವನ್ನು ಬಬ್–ಎಲ್–ಮಂಡೇಬ್ ಜಲಸಂಧಿಯತ್ತ ಹರಿಸಿದ್ದು, ಇದು ಜಾಗತಿಕ ಇಂಧನ ಸರಬರಾಜು ಹಾಗೂ ಪೂರೈಕೆ ಸರಪಳಿಗಳ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವನ್ನು ಹೆಚ್ಚಿಸಿದೆ.








