- :ಕೆನರಾ ಬ್ಯಾಂಕ್ ಎದುರು ಗಿರವಿದಾರರ ಪ್ರತಿಭಟನೆ
ಮೈಸೂರು: ಚಿನ್ನದ ಮೇಲೆ ಸಾಲ ನೀಡುವ ವೇಳೆ ಗಿರವಿ ಇಟ್ಟುಕೊಂಡ ಚಿನ್ನಾಭರಣದ ತೂಕದಲ್ಲಿ ವ್ಯತ್ಯಾಸವಿದೆ ಎಂದು ಆರೋಪಿಸಿ ಹಿನಕಲ್‌ನ ಕೆನರಾ ಬ್ಯಾಂಕ್ ಶಾಖೆಗೆ ಗಿರವಿದಾರರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬ್ಯಾಂಕ್ ಸಿಬ್ಬಂದಿ ವಂಚನೆ ನಡೆಸಿದ್ದಾರೆ ಎಂದು ಆರೋಪಿಸಿದ ಗ್ರಾಹಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಹಕರಿಂದ ಚಿನ್ನ ಗಿರವಿ ಪಡೆದು ಸಾಲ ಮಂಜೂರು ಮಾಡುವಾಗ ಇದ್ದ ತೂಕಕ್ಕೂ, ನಂತರ ಅದನ್ನು ಬಿಡಿಸಿಕೊಳ್ಳುವ ವೇಳೆ ನೀಡುವ ತೂಕಕ್ಕೂ ವ್ಯತ್ಯಾಸ ಕಂಡುಬರುತ್ತಿದೆ. ಸಾಲದ ರಸೀದಿಯಲ್ಲಿ 1 ರಿಂದ 2 ಗ್ರಾಂ ಕಡಿಮೆ ತೂಕವನ್ನು ದಾಖಲಿಸಲಾಗುತ್ತಿದ್ದು, ಚಿನ್ನ ಬಿಡಿಸಿಕೊಳ್ಳುವಾಗ ರಸೀದಿಯಲ್ಲಿ ನಮೂದಿಸಿದಷ್ಟೇ ತೂಕವನ್ನು ವಾಪಸ್ ನೀಡಿ, ಗಿರವಿ ಇಟ್ಟ ಸಮಯದ ನಿಜವಾದ ತೂಕವನ್ನು ಮರೆಮಾಚಿ ವಂಚನೆ ಮಾಡಲಾಗುತ್ತಿದೆ ಎಂದು ಗಿರವಿದಾರರು ದೂರಿದರು.
ಪ್ರತಿಭಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ವಿಜಯನಗರ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಗಿರವಿದಾರರಿಂದ ದೂರುಗಳನ್ನು ಸ್ವೀಕರಿಸಿ ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದರು. ಈ ವೇಳೆ ಬ್ಯಾಂಕ್ ಆವರಣದಲ್ಲಿ ಮಾತಿನ ಚಕಮಕಿ ನಡೆಯಿತು.ಇದನ್ನು ಓದಿ –ರಾಜ್ಯದ ಖಜಾನೆ ದೋಚಿ ಕಾಂಗ್ರೆಸ್ ಹೈಕಮಾಂಡ್ ತೃಪ್ತಿಪಡಿಸುತ್ತಿದೆ: ವಿಜಯೇಂದ್ರ
‘ಸಿಸಿಟಿವಿ ಪರಿಶೀಲಿಸಿ ಕ್ರಮ’
ಚಿನ್ನದ ಮೇಲೆ ಸಾಲ ನೀಡುವ ಸಂದರ್ಭದಲ್ಲಿ ಅಡಮಾನ ಇಟ್ಟ ಚಿನ್ನದಲ್ಲಿ ಮೋಸ ನಡೆದಿದೆ ಎಂಬ ಆರೋಪಗಳ ಕುರಿತು ಗ್ರಾಹಕರಿಂದ ದೂರುಗಳು ಬಂದಿವೆ. ಈಗಾಗಲೇ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಸೂಕ್ತ ತನಿಖೆ ನಡೆಸಿ ಬ್ಯಾಂಕ್‌ನಿಂದ ಗ್ರಾಹಕರಿಗೆ ಯಾವುದೇ ನಷ್ಟವಾಗಿದೆಯೇ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಲಾಗುವುದು. ಎಲ್ಲಾ ಪ್ರಕ್ರಿಯೆಗಳು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿರುವುದರಿಂದ ಅವುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬ್ಯಾಂಕ್ ಎಜಿಎಂ ರಾಜಶೇಖರ್ ತಿಳಿಸಿದ್ದಾರೆ.








