ಮಂಡ್ಯ: ರಾಜ್ಯದ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆಯಾದ ಮೈಸೂರು ಷುಗರ್ ಕಂಪನಿ (ಮೈಷುಗರ್)ಯಲ್ಲಿ ಅವ್ಯವಹಾರ ಹಾಗೂ ಅಕ್ರಮ ನೇಮಕಾತಿ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರ ತನಿಖಾ ಸಮಿತಿಯನ್ನು ರಚಿಸಿದೆ.
ಮಹಾರಾಷ್ಟ್ರದ ನಿವೃತ್ತ ಸಕ್ಕರೆ ಆಯುಕ್ತ ಶೇಖರ್ ಗಾಯಕವಾಡ ಅವರ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚನೆಯಾಗಿದ್ದು, ಪುಣೆಯ ಶುಗರ್ಸ್ ಎಂಜಿನಿಯರಿಂಗ್ ಮತ್ತು ರಿನೀವಬಲ್ ಎನರ್ಜಿ ವಿಭಾಗದ ಮುಖ್ಯಸ್ಥ ರಾಜೇಂದ್ರ ಚಾಂದಗುಡೆ, ರೈತಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಬಿ.ಎಸ್. ರಾಜಗೋಪಾಲ್, ತಾಂತ್ರಿಕ ಸಲಹೆಗಾರ ಸಿ.ಬಿ. ಪಾಟೀಲ್ ಹಾಗೂ ಮುಜಾವರ ಬಹದ್ದೂರ್ ಅಲಿ ಇಬ್ರಾಹಿಂ ಲಾತೂರು ಸಮಿತಿಯ ಸದಸ್ಯರಾಗಿದ್ದಾರೆ.
2021–22ನೇ ಸಾಲಿನಿಂದ ಇದುವರೆಗೆ ನಡೆದಿದೆ ಎನ್ನಲಾದ ಅವ್ಯವಹಾರಗಳಿಂದ ಕಂಪನಿಗೆ ಉಂಟಾಗಿರುವ ಆರ್ಥಿಕ ನಷ್ಟದ ಕುರಿತು ಸಂಪೂರ್ಣ ತನಿಖೆ ನಡೆಸಿ, 15 ದಿನಗಳೊಳಗೆ ವರದಿ ಸಲ್ಲಿಸುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಸಕ್ಕರೆ) ಸೂಚಿಸಿದೆ.
ಆರೋಪಗಳ ವಿವರ:
ಕಬ್ಬು ಕಟಾವು ಮುಂಗಡ ಪಾವತಿ, ಕಟಾವು ಹಾಗೂ ಸಾಗಣೆ, ಕಬ್ಬಿನ ತೂಕ ಮತ್ತು ಹಣ ಪಾವತಿಯಲ್ಲಿ ಅಕ್ರಮ ನಡೆದು ಕಾರ್ಖಾನೆಗೆ ಆರ್ಥಿಕ ನಷ್ಟ ಉಂಟಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಅಕ್ರಮ ಹಾಗೂ ಮೀಸಲಾತಿ ನಿಯಮ ಉಲ್ಲಂಘನೆಯಾಗಿದೆ ಎಂಬ ದೂರುಗಳೂ ದಾಖಲಾಗಿವೆ. 2023–24ನೇ ಸಾಲಿನಲ್ಲಿ ಕಡಿಮೆ ಬೆಲೆಗೆ ಸಕ್ಕರೆ ಮಾರಾಟ ಮಾಡಲಾಗಿದೆ ಎಂಬ ಆರೋಪವೂ ಇದೆ.
ಇದಲ್ಲದೆ, ಕೋಣನಹಳ್ಳಿ ಕೆರೆಯಿಂದ ನೀರು ಪೂರೈಸಲು ಪೈಪ್‌ಲೈನ್ ಅಳವಡಿಕೆಯಲ್ಲಿ ಅಕ್ರಮ ನಡೆದಿದ್ದು, ಕಂಪನಿಯ ಜಾಗವನ್ನು ಅಕ್ರಮವಾಗಿ ಗುತ್ತಿಗೆ ನೀಡುವ ಮೂಲಕ ನಷ್ಟ ಉಂಟು ಮಾಡಲಾಗಿದೆ ಎಂದು ದೂರಲಾಗಿದೆ. ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿ ನಿವೃತ್ತ ನೌಕರರನ್ನು ಪುನರ್ ನೇಮಕ ಮಾಡಲಾಗಿದೆ ಎಂಬ ಆರೋಪಗಳೂ ಸಲ್ಲಿಕೆಯಾಗಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ರೈತ ಮುಖಂಡ ಕೆ. ಬೋರಯ್ಯ, ತನಿಖೆಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಸಮಿತಿಯಲ್ಲಿ ಕಾರ್ಖಾನೆ ವ್ಯಾಪ್ತಿಯ ಸ್ಥಳೀಯ ರೈತ ಪ್ರತಿನಿಧಿಯೊಬ್ಬರು ಇದ್ದಿದ್ದರೆ ತನಿಖೆ ಇನ್ನಷ್ಟು ಪಾರದರ್ಶಕವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ, ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರು, 2008ರಿಂದ 2012ರವರೆಗೆ ನಾಗರಾಜಪ್ಪ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರದಿಂದ ಕಾರ್ಖಾನೆಗೆ ₹127 ಕೋಟಿ ನಷ್ಟ ಉಂಟಾಗಿತ್ತು. ಈ ನಷ್ಟ ವಸೂಲಾತಿಗೆ ಉಪ ಲೋಕಾಯುಕ್ತರಾಗಿದ್ದ ಬಿ.ಎಸ್. ಪಾಟೀಲ್ ಆದೇಶ ಹೊರಡಿಸಿದ್ದರು. ಆ ಆದೇಶವನ್ನು ಹೈಕೋರ್ಟ್ ಇತ್ತೀಚೆಗೆ ಎತ್ತಿ ಹಿಡಿದಿದೆ. ಹೀಗಾಗಿ ಆಸ್ತಿ ಜಪ್ತಿಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.








