ಭಾದ್ರಪದ ಮಾಸದ ಹುಣ್ಣಿಮೆಗೆ ಮೊದಲು ಬರುವ ಪ್ರಮುಖ ಹಬ್ಬ ಅನಂತ ಪದ್ಮನಾಭ ವ್ರತಕೂಡ. ಗೌರೀ ಗಣೇಶ, ಋಷಿ ಪಂಚಮಿ, ಜ್ಯೇಷ್ಠಾದೇವಿಯ ಪೂಜೆಯ ನಂತರ ಭಾದ್ರಪದ ಶುಕ್ಲ ಚತುರ್ದಶಿಯಂದು ಆಚರಿಸುವ ವ್ರತ ಹಬ್ಬ. ಅನಂತ ಚತುರ್ದಶಿ. ಶೇಷನನ್ನು ಹಾಸಿಗೆಯನ್ನಾಗಿ ಮಾಡಿಕೊಂಡು ಲೋಕವನ್ನು ಕಾಪಡುವ ಅನಂತ ಪದ್ಮನಾಭ ದೇವರ ಪೂಜೆಯಾಗಿದೆ.
ಅಂದಿನ ದಿನ ವಿಷ್ಣುವನ್ನು ಯಮುನಾ ನದಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ದರ್ಭೆಯಲ್ಲಿ ಅನಂತ ಪದ್ಮನಾಭನನ್ನು ಮಾಡಿ ಬ್ರಾಹ್ಮಣರನ್ನು ಕರೆದು ಪೂಜಿಸಬೇಕು 14 ಬಗೆಯ ಭಕ್ಷ್ಯಗಳನ್ನು ನಿವೇದಿಸಿ, 14 ಎಳೆಯುಳ್ಳ ರೇಷೆ ಧಾರವನ್ನು ದೇವರಿಗೆ ಅರ್ಪಿಸಿ ಪ್ರಸಾದ ರೂಪದಲ್ಲಿ ಧಾರಣ ಮಾಡಬೇಕು ದಾರಕ್ಕೆ 14 ಗಂಟನ್ನು ಹಾಕಿರಬೇಕು.
ತಯಾರಿಸಿದ ಪೀಠದ ಮೇಲೆ ನದಿ ಅಥವಾ ಸಮುದ್ರದ ಅಥವಾ ತುಳಸಿಯ ಬಳಿ ಇರಿಸಿ ಪೂಜೆ ಮಾಡಿದ ಇನ್ನೊಂದು ದಾರವನ್ನು ಧಾರಣ ಮಾಡಬೇಕು. ಇಂದು ಹಲವರು ಉಪವಾಸವನ್ನು ಕೂಡ ಮಾಡುತ್ತಾರೆ. ಹಿಂದೆ ಪಾಂಡವರು ಜೂಜಿನಲ್ಲಿ ಕಳೆದುಕೊಂಡ ಸಾಮ್ರಾಜ್ಯ ಸಂಪತ್ತನ್ನು ಹಿಂ ಪಡೆಯಲು ಈ ವ್ರತವನ್ನು ಆಚರಿಸಿದ್ದರು ಎಂದು ಪುರಾಣದಲ್ಲಿ ಉಲ್ಲೇಖವಿದೆ. 14 ದಿನಗಳ ನಂತರ ದಾರವನ್ನು ವಿಸರ್ಜಿಸಬೇಕು. ಈ ದಾರವನ್ನು ಮುಂದಿನ ವರ್ಷ ಪೂಜೆಗೆ ಮೊದಲು ಹಿಂದಿನ ವರ್ಷದ ದಾರವನ್ನು ವಿಸರ್ಜನೆ ಮಾಡಿ ಈ ವರ್ಷದ ಹೊಸ ದಾರದ ಸ್ಥಾಪನೆ ಪೂಜೆಯನ್ನು ಮಾಡುತ್ತಾರೆ. ಹಾಗೆ ಏನಾದರೂ ಹಳೆಯ ದಾರ ಕಳೆದಿದ್ದರೆ, ನಷ್ಟವಾಗಿದ್ದರೆ, ಸುಟ್ಟಿದ್ದರೆ ಪ್ರಾಶ್ಚಿತ್ತ ರೂಪವಾಗಿ ಹೋಮ ನೆರವೇರಸಿ ಹೊಸ ದಾರದ ಪ್ರತಿಷ್ಠಾ ಪನೆ ಮಾಡಬೇಕು
ಅನಂತ ಪದ್ಮನಾಭ ವ್ರತವು ಚತುರ್ದಶಿಯಂದು ಆರಂಭಿಸುವ ವ್ರತ ಆದ್ದರಿಂದ ಅನಂತನ ಪೂಜೆಯಲ್ಲಿ 14 ಸಂಖ್ಯೆ ಮಹತ್ವವನ್ನು ಪಡೆಯುತ್ತದೆ. ಅನಂತನ ದಾರವು 14 ಎಳೆಗಳುಳ್ಳದ್ದಾಗಿರುತ್ತದೆ ಅದನ್ನು ಹತ್ತಿ ಅಥವಾ ರೇಷ್ಮೆ ಯಿಂದ ತಯಾರಿಸಿರುತ್ತಾರೆ, ಅದಕ್ಕೆ 14 ಗ್ರಂಥಿ (ಗಂಟು)ಗಳನ್ನು ಹಾಕಿರಬೇಕು ದಾರವು ಕೆಂಪು ಬಣ್ಣದ್ದಾಗಿರಬೇಕು. ಪೂಜೆ ಮಾಡಿ ಧರಿಸಿದ ದಾರವನ್ನು ಅಲ್ಲಿ ಇಲ್ಲಿ ಬಿಸಾಡದೇ ನದಿ ಅಥವಾ ಕೆರೆಗಳಲ್ಲಿ ವಿಸರ್ಜಿಸಬೇಕು. ಒಮ್ಮೆ ಆರಂಭಿಸಿದರೆ ವ್ರತವನ್ನು ಬಿಡದೇ 14 ವರ್ಷಗಳಲ್ಲಿ ತಪ್ಪದೇ ಆಚರಿಸಬೇಕು.
ಪೂಜೆಯ ವಿಧಾನ : – ಒಂದು ಮಣೆಯ ಮೇಲೆ ಬಣ್ಣ ಬಣ್ಣದ ಅಕ್ಕಿ ಕಾಳನ್ನು ಹಾಕಿ ಮಂಡಲವನ್ನು ಬರೆದು ತಾಮ್ರದ ಅಥವಾ ಬೆಳೆಯ ಕಲಶವನ್ನು ಇಟ್ಟು ಸುಂದರವಾದ ಅನಂತ ಪದ್ಮನಾಭನ ಪ್ರತಿಮೆಯನ್ನು ಇಡಬೇಕು, ಅನಂತನ ಪ್ರತಿಮೆಯೊಂದಿಗೆ ದರ್ಭೆಯಿಂದ ಮಾಡಿದ ಏಳು ತಲೆಯ ಶೇಷನನ್ನು ಸಾಲಿಗ್ರಾಮವನ್ನೂ ಇಟ್ಟು ಪೂಜಿಸಬೇಕು ಪುರುಷ ಸೂಕ್ತ ಹಾಗೂ ಶ್ರೀ ಸೂಕ್ತಗಳಿಂದ ಪಠಿಸುತ್ತಾ ಷೋಡಷೋಪಚಾರ ಪೂಜೆಗಳನ್ನು ಮಾಡಬೇಕು, ಪುಷ್ಪಗಳು, ಪತ್ರೆಗಳು ಗೆಜ್ಜೆ ವಸ್ತ್ರ ಅಲಂಕಾರ ಮಾಡಲು ಆಭರಣಗಳನ್ನು ದೇವರಿಗೆ ಅರ್ಪಿಸಿ ನಾವು ಧರಿಸಲು ಇಟ್ಟುಕೊಂಡ ಹದಿನಾಲ್ಕು ಗ್ರಂಥಿಗಳುಳ್ಳ ದಾರವನ್ನು ಕೂಡ ಅರ್ಪಿಸಬೇಕು. ಪೂಜೆಯ ನಂತರ ಬಲಗೈ ಗೇ ದಾರವನ್ನು ಕಟ್ಟಿಕೊಳ್ಳಬೇಕು. ಬ್ರಾಹ್ಮಣರಿಗೆ ಹಾಸಿಗೆ, ಹಸು, ಅನಂತನ ಪ್ರತಿಮೆ ವಾಯನದಾನ, 14 ಬಗೆಯ ಭಕ್ಷ್ಯಗಳನ್ನು ದಾನ ಮಾಡಬೇಕು. ಅನಂತ ಪದ್ಮನಾಭ ವ್ರತದ ಕಥೆಯು ಭವಿಷ್ಯೋತ್ತರ ಪುರಾಣದಲ್ಲಿ ಉಲ್ಲೇಖಿತವಾಗಿದೆ.
ಕಥೆ : – ನೈಮಿಷಾರಣ್ಯದಲ್ಲಿ ಶೌನಕಾದಿ ಮುನಿಗಳಿಗೆ ಸೂತರು ಹೇಳುತ್ತಾರೆ, ಹಿಂದೆ ದ್ವಾಪರಯುಗದಲ್ಲಿ ಪಾಂಡುರಾಜನ ಮಕ್ಕಳಾದ ಪಾಂಡವರು ರಾಜಸೂಯ ಯಾಗವನ್ನು ಮಾಡುವ ಮೊದಲು ಜರಾಸಂಧನನ್ನು ಸಂಹಾರ ಮಾಡುವ ಶ್ರೀ ಕೃಷ್ಣನ ಸಲಹೆಯಂತೆ ಅರ್ಜುನ ಹಾಗೂ ಭೀಮರು ಶ್ರೀ ಕೃಷ್ಣರು ಹೋಗಿ ಜರಾಸಂಧನ ಹತ್ಯೆಯನ್ನು ಮಾಡುತ್ತಾರೆ. ನಂತರ ಇಂದ್ರಪ್ರಸ್ಥದಲ್ಲಿ ರಾಜಸೂಯ ಯಾಗವನ್ನು ವಿಜೃಂಭಣೆಇಂದ ಬಂಧು ಬಾಂಧವರೊಂದಿಗೆ ಆಚರಿಸುತ್ತಾರೆ. ಪಾಂಡವರ ಅರಮನೆಯನ್ನು ತಯಾರಿಸಿದ ದೇವ ಶಿಲ್ಪಿ ವಿಶ್ವಕರ್ಮನು ಬಃಳ ಅದ್ಭುತವಾಗಿ ನಿರ್ಮಿಸಿರುತ್ತಾನೆ. ರಾಜಸೂಯ ಯಾಗಕ್ಕೆ ಋಷಿ ಮುನಿಗಳು ಬಂಧು ಬಾಂಧವರು ಆಪ್ತೇಷ್ಟರು ಎಲ್ಲರೂ ಬಂದಿರುತ್ತಾರೆ. ಆ ಸಭೆಗೆ ಕೌರವರು ಅದರಲ್ಲೂ ಮುಖ್ಯವಾಗಿ ಧೃತರಾಷ್ಟ್ರ, ಗಾಂಧಾರಿ, ದುಶ್ಶಾಸನ ಕರ್ಣರೊಂದಿಗೆ ದುರ್ಯೋಧನನು ಬಂದಿರುತ್ತಾನೆ. ಅರಮನೆಯ ಮಂಟಪದ ವೈಭವವನ್ನು ನೋಡುತ್ತಾ. ಸ್ಪಟಿಕ ಮಣಿಗಳಿಂದ ನಿರ್ಮಿತವಾದ ನೆಲವನ್ನು ನೀರೆಂದು ಭಾವಿಸುತ್ತಾನೆ, ಮತ್ತೂ ಆ ನೀರಿನಿಂದ ತಾನು ಉಟ್ಟ ವಸ್ತ್ರವು ನೆನಯ ಬಾರದೆಂದು ಬಟ್ಟೆಯನ್ನು ಮೇಲೆತ್ತಿ ಹಿಡಿದು ನಿಧಾನವಾಗಿ ನಡೆಯುತ್ತಿರುತ್ತಾನೆ. ಈ ದೃಶ್ಯವನ್ನು ನೋಡಿದ ದ್ರೌಪದಿಯು ಜೊತೆಗೆ ಅಲ್ಲಿ ನೆರೆದಿದ್ದ ಸ್ತ್ರೀಯರೆಲ್ಲರೂ ಜೊತೆಗೆ ಋಷಿಮುನಿಗಳು ರಾಜರು ಸಹಿತವಾಗಿ ಆಗಮಿಸಿದ್ದವರೆಲ್ಲರೂ ದೊಡ್ಡದಾಗಿ ನಗುತ್ತಾರೆ. ಈ ಘಟನೆಯಿಂದ ಅವಮಾನವೆನಿಸಿ ದುರ್ಯೋಧನನು ಸೋದರಮಾವ ಶಕುನಿಯೊಂದಿಗೆ ಹಸ್ತಿನಾಪುರಕ್ಕೆ ಹೊರಟು ಹೋಗುತ್ತಾನೆ. ಮೊದಲೇ ಸಿಟ್ಟಿನಲ್ಲಿದ್ದ ದುರ್ಯೋಧನನಿಗೆ ಮಾವನಾದ ಶಕುನಿಯು ಮತ್ತಷ್ಟು ಪ್ರಚೋದನೆ ನೀಡಿ ನಿನಗೆ ಆದ ಅವಮಾನದ ಪ್ರತೀಕಾರವನ್ನು ತೆಗೆದುಕೊಳ್ಳೋಣ ಅವರಿಗೆ ದ್ಯೂತಕ್ಕೆ ಆಹ್ವಾನಿಸೋಣ ಎನ್ನುತ್ತಾನೆ. ಧರ್ಮರಾಜ ಯುಧಿಷ್ಠಿರನು ದ್ಯೂತವು ಕೆಟ್ಟದ್ದು ಎಂದು ತಿಳಿದಿದ್ದರೂ ದುರ್ಯೋಧನನ ಪಂಥವನ್ನು ಒಪ್ಪಿ ಜೂಜಾಡಲು ಒಪ್ಪಿ ಹಸ್ತಿನಾಪುರಕ್ಕೆ ತಮ್ಮಂದಿರು ಮತ್ತು ಹೆಂಡತಿ ತಾಯಿಯೊಂದಿಗೆ ಹೋದನು. ಮೊದಲಿಗೆ ಹಾಸ್ಯಕ್ಕೆ ಎಂದು ಆರಂಭವಾದ ದ್ಯೂತವು ನಂತರ ರಾಜ್ಯವನ್ನು ಪಣಕ್ಕೆ ಇಟ್ಟನು.
ತಮ್ಮಂದಿರು ಹೆಂಡತಿ ಎಲ್ಲರನ್ನೂ ದ್ಯೂತದಲ್ಲಿ ಕಳೆದುಕೊಂಡು ಕಾಡಿಗೆ ವನವಾಸಕ್ಕೆ ಹೋಗುವ ಸಂದರ್ಭವು ಬಂದಿತು. ಹೀಗೆ ವನ ಸೇರಿಸಿದ ವರ್ಷಗಳ ವನವಾಸ ಮತ್ತು ವರ್ಷದ ಅಜ್ಞಾತವಾಸವನ್ನು ಪಡೆದ ಧರ್ಮರಾಜನು ಪಾಂಡವರನ್ನು ಭೇಟಿ ಮಾಡಲು ಬಂದ ಶ್ರೀ ಕೃಷ್ಣ ಪರಮಾತ್ಮನು ಇಂತಹ ದುಃಖ ಅವಮಾನದಿಂಧ ಪಾರಾಗುವ ಮಾರ್ಗವನ್ನು ಸೂಚಿಸು ಎಂದಾಗ ಅನಂತ ಪದ್ಮನಾಭವನ್ನು ಆಚರಿಸುವ ವಿಧವನ್ನು ಹೇಳಿದನು. ಈ ಅನಂತ ಪದ್ಮನಾಭ ಎಂದರೆ ಯಾರು ? ಅವನನ್ನು ಹೇಗೆ ಪೂಜಿಸಬೇಕೆಂದು ಧರ್ಮರಾಜನು ಕೇಳು ಅನಂತ ಪದ್ಮನಾಭ ನನ್ನದೇ ರೂಪವಾಗಿರುತ್ತದೆ. ಸೂರ್ಯ, ನಕ್ಷತ್ರಗಳು, ಗ್ರಹಗಳಿಗೂ ನಾನೇ ಆತ್ಮನು, ನನಗೇ ಕಾಲ ಎಂದೂ ಕರೆಯುತ್ತಾರೆ, ಘಳಿಗೆ, ಮುಹೂರ್ತ, ದಿನ, ಪಕ್ಷ ತಿಂಗಳು, ಋತು ಎಂದು ಪ್ರಸಿದ್ದವಿರುವ ಕಾಲನಾದ ನನನಗೆ ಅನಂತ ಎಂಬ ಹೆಸರೂ ಉಂಟು ಈಗ ಕೃಷ್ಣನೆಂದು ಭೂ ಭಾರ ಹರಣ ಮಾಡಲು ಉದ್ಭವಿಸಿರುತತೇನೆ ಎನ್ನುತ್ತಾನೆ. ಆಗ ಧರ್ಮರಾಜನು ಹಾಗಾದರೆ ಈ ಅನಂತ ಪದ್ಮನಾಭನನ್ನು ಹೇಗೆ ಪೂಜಿಸಬೇಕು ಅದರ ವಿಧಾನ ಎಲ್ಲವನ್ನೂ ಸವಿಸ್ತಾರವಾಗಿ ಹೇಳೆಂದು ಕೇಳಲು ಪರಮಾತ್ಮನು ಹೇಳುತ್ತಾನೆ ” ಹಿಂದೆ ಕೃತಯುಗದಲ್ಲಿ ಸುಮಂತನೆಂಬ ಬ್ರಾಹ್ಮಣನಿದ್ದನು ಅವನಿಗೆ ದೀಕ್ಷೆಯೆಂಬ ಪತ್ನಿಯಿಂದ ಅನಂತ ಲಕ್ಷಣಗಳುಳ್ಳ ಕನ್ಯಾರತ್ನವು ಜನಿಸಿತು. ಆ ಮಗುವಿಗೆ ಶೀಲಾ ಎಂದು ಹೆಸರನ್ನು ಇಟ್ಟನು. ದೀಕ್ಷಾ ತಾಯಿಯಾದ ನಂತರ ಜ್ವರದಿಂದ ಪೀಡಿತಳಾಗಿ ನರ್ಮದಾ ನದಿ ತೀರಯಲ್ಲಿ ಸತ್ತಳು. ಮಗು ಸಣ್ಣದಿದ್ದ ಕಾರಣ ಕರ್ಕಶಾ ಎಂಬ ಕನ್ಯೆಯೊಂದಿಗೆ ಸುಮಂತನು ಎರಡನೇ ಮದುವೆಯಾದನು. ಅವಳು ತನ್ನ ಹೆಸರಿಗೆ ತಕ್ಕಂತೆ ಕ್ರೂರಳಾಗಿದ್ದಳು. ಮಗುವಾಗಿದ್ದ ಶೀಲಾ ಬೆಳೆದುದೊಡ್ಡವಳಾಗಿ ಕುಮಾರಿಯಿಂದ ಯೌವ್ವನೆಯಾದಳು. ಸುಮಂತನು ಮಗಳು ಶೀಲಳಿಗೆ ಯೋಗ್ಯವರನನ್ನು ಹುಡುಕುತ್ತಿರಲು ಕೌಂಡಿಣ್ಯ ಎಂಬ ಋಷಿಯು ತನಗೆ ಪತ್ನಿಯನ್ನು ಹುಡುಕುತ್ತಾ ಬಂದರು. ಆಗ ಸುಮಂತ ಬ್ರಾಹ್ಮಣನು ಮಗಳನ್ನು ಆ ಋಷಿಯೊಂದಿಗೆ ಶಾಸ್ರ್ತೋಕ್ತವಾಗಿ ವಿವಾಹ ಮಾಡಿಸಿನು. ಆನಂದದಿಂದ ಮದುವೆ ಮಾಡಿ ಮಗಳನ್ನು ಬಿಳ್ಕೊಡುವಾಗ ಮಗಳಿಗೆ ಏನಾದರೂ ಉಡುಗೊರೆಯನ್ನು ಇರುವ ಎಲ್ಲ ಆರಭಣ ಧನ ಕನಕಗಳನ್ನು ಬೀಗ ಹಾಕಿಟ್ಟು ಮನೆಯಲ್ಲಿ ಏನೂ ಇಲ್ಲವೆಂದು ಹೇಳಿ ಮದುವೆಯಲ್ಲಿ ಅಳಿದುಳಿದ ಪದಾರ್ಥಗಳನ್ನು ಕಟ್ಟಿಕೊಟ್ಟಳು. ಕೌಂಡಿಣ್ಯರು ಮಾವನಿಂದ ಅಪ್ಪಣೆ ಪಡೆದು ತಮ್ಮ ಆಶ್ರಮಕ್ಕೆ ಹೋಗುವಾಗ ನದೀ ತೀರದಲ್ಲಿ ಮಹಿಳೆಯರು ಕೆಂಪು ವಸ್ತ್ರ ಧರಿಸಿ ಪೂಜೆಯನ್ನು ಮಾಡುತ್ತಿದ್ದರು ಅವರನ್ನು ನೋಡಿದ ಶೀಲ ಅವರ ಬಳಿ ಹೋಗಿ ನೀವೆಲ್ಲರೂ ಯಾರು? ಏನು ಮಾಡುತ್ತಿರುವಿರಿ ಎಂದು ಕೇಳಲು ಅನಂತ ವ್ರತದ ಬಗೆಗೆ ಹೇಳಿದರು. ಆಗ ಅವರು ವ್ರತ ಮಾಡುವ ವಿಧಾನವನ್ನು ಹೇಳಿ ಸಂಸಾರವೆಂಬ ಸಮುದ್ರದಲ್ಲಿ ಮುಳುಗುತ್ತಿರುವ ನಮ್ಮನ್ನು ಮೇಲೆತ್ತುವನು ಎಂದು ಹೇಳಿದರು. ಶೀಲಳು ಸಂತಸದಿಂಧ ತಾನು ಕೂಡ ವ್ರತವನ್ನು ಮಾಡಿ ಸಕಲ ಸಂಪತ್ತನ್ನು ಪಡೆದಳು ಒಂದು ದಿನ ಕೌಂಡಿಣ್ಯನು ಹೆಂಡತಿಯ ಕೈಯಲ್ಲಿ ದಾರವನ್ನು ನೋಡಿ ನನ್ನನ್ನು ವಶ ಪಡಿಸಲು ಇಂತಹ ದಾರವನ್ನು ಕಟ್ಟಿಕೊಂಡಿರುವೆಯಾ ಎಂಧು ಆ ದಾರವನ್ನು ಕಿತ್ತೊಗೆದು ಬೆಂಕಿಯಲ್ಲಿ ಹಾಕಿದನು ಶೀಲೆಯು ಅದನ್ನು ಬೆಂಕಿಯಿಂದ ತಗೆದು ಹಾಲಿನಲ್ಲಿ ಹಾಕಿದಳು. ಅನಂತ ಪದ್ಮನಾಭನಿಗೆ ಕೌಂಡಿಣ್ಯ ಮಾಡಿದ ಅಪಮಾನದಿಂದ ದಾರಿದ್ರ್ಯ ದುಃಖಗಳು ಬಂದವು ಹೆಂಡತಿಗೆ ತನ್ನ ಪರಿಸ್ಥಿತಿಗೆ ಕಾರಣವೆನಿರಬೇಕೆಂದು ಕೇಳಿದನು ಆಗ ಆಕೆಯು ನೀವು ಅನಂತ ಪದ್ಮನಾಭನಿಗೆ ಮಾಡಿದ ಅಪಮಾನವೇ ಕಾರಣ ಎಂದಳು ಮಡದಿಯ ಮಾತನ್ನು ಕೇಳಿ ಕೌಂಡಿಣ್ಯನು ಅನಂತನನ್ನು ಪೂಜಿಸಲು ಅವನನ್ನು ಹುಡುಕುತ್ತಾ ಉಪವಾಸದಿಂದ ಅಲೆಯ ತೊಡಗಿದನು ಒಮ್ಮೆ ಅನಂತನಿಗೆ ಕರುಣೆ ಬಂದು ಅನಂತನು ದರ್ಶನವನ್ನು ನೀಡಿದಾಗ ಕೌಂಡಿಣ್ಯನು ತನ್ನ ಅಪರಾಧವನ್ನು ಕ್ಷಮಿಸೆಂದು ಬಗೆಗೆಯಾಗಿ ಕೇಳಿಕೊಳ್ಳಲು ಭಗವಂತನು ಕ್ಷಮಿಸಿ ಸಕಲ ಐಶ್ವರ್ಯ ಆರೋಗ್ಯಗಳನ್ನು ಕರುಣಿಸಿದನು. ಹೀಗೆ ನೀನು ಕೂಡ ಅನಂತನ ವ್ರತವನ್ನು ಮಾಡಿದರೆ ಅನಂತ ಪದ್ಮನಾಭನ ಅನುಗ್ರಹದಿಂದ ಕಳೆದುಕೊಂಡದ್ದನ್ನು ಎಲ್ಲವನ್ನೂ ಪಡೆಯುವೆ ಎಂದು ಹೇಳಿ ಶ್ರೀಕೃಷ್ಣ ಪರಮಾತ್ಮನು ಅನುಗ್ರಸಿದನು.” ಇಲ್ಲಿಗೆ ಅನಂತ ವ್ರತ ಕಥೆಯು ಮುಗಿಯುತ್ತದೆ. ಹೀಗೆ ಭಕ್ತಿಯಂದ ವ್ರತವನ್ನು ಮಾಡಿ ಕಥೆಯನ್ನು ಕೇಳಿ ದೋರವನ್ನು ಕಟ್ಟಿಕೊಳ್ಳುವವರಿಗೆ ಅನಂತ ಪದ್ಮನಾಭನು ಸಕಲ ಇಷ್ಟಾರ್ಥ ನೆರವೇರಿಸಿ ಸಕಲ ಐಶ್ವರ್ಯವನ್ನು ನೀಡಿ ಅನುಗ್ರಹಿಸುವನು.

ಮಾಧುರಿ ದೇಶಪಾಂಡೆ, ಬೆಂಗಳೂರು