ಕುಟುಂಬ ವ್ಯವಸ್ಥೆ
ನಾವು ನಮ್ಮ ಹಿರಿಯರೊಟ್ಟಿಗೆ ಯಾವಾಗ ಮಾತಾಡಿದರೂ ಬರುವ ಒಂದು ಮಾತು ‘ನಮ್ ಕಾಲ್ದಲ್ಲಿ ಹೀಗಿರ್ಲಿಲ್ಲಪ್ಪ….’ ಅಂತ. ನಿಜ ಅಲ್ವಾ ಜನರ ಜೀವನ ಶೈಲಿ, ದಿನದಿಂದ ದಿನಕ್ಕೆ ಬದಲಾಗುತ್ತಲೇ ಇರುತ್ತದೆ. ಕಾಲಕ್ಕೆ ತಕ್ಕಂತೆ ನಾವು ಬದಲಾಗಲೇ ಬೇಕಲ್ವಾ?
ನಮ್ಮ ನಾಲ್ಕು ತಲೆಮಾರು ಅಂದರೆ ನಮ್ಮ ಅಜ್ಜ~ಅಜ್ಜಿ, ಅಪ್ಪ~ಅಮ್ಮ, ನಮ್ಮ ಕಾಲ ಮತ್ತು ನಮ್ಮ ಮಕ್ಕಳ ಕಾಲದಲ್ಲಾದ ಅನೇಕ ರೀತಿಯ ಚಿಕ್ಕ~ದೊಡ್ಡ ಬದಲಾವಣೆಗಳನ್ನು ಒಂದೊಂದಾಗಿ ಈ “ಚಿಂತನ ಮಂಥನ” ದಲ್ಲಿ ಮಥಿಸೋಣ.
ಜೀವನ ಶೈಲಿಯಲ್ಲಿ ಎಷ್ಟೆಲ್ಲ ಬದಲಾವಣೆಗಳಾದ್ರೂ ಮನುಷ್ಯನ ಮನಸ್ಥಿತಿಯಲ್ಲಿ ಮಾತ್ರ ಅಷ್ಟೇನೂ ಬದಲಾವಣೆಯಿಲ್ಲ ಅನಿಸುತ್ತೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯವೆಂಬ ಆ ಅರಿಷಡ್ವರ್ಗಗಳೇ ಹಿಂದೆಯೂ ಮನುಷ್ಯನನ್ನು ಆಳುತ್ತಿದ್ದದ್ದು, ಇಂದಿಗೂ, ಮುಂದಿಗೂ, ಎಂದೆಂದಿಗೂ ಮಾನವನ ಮೇಲೆ ಸಾರ್ವಭೌಮತ್ವವನ್ನು ಸಾಧಿಸುವಲ್ಲಿ ಯಶಸ್ಸು ಸಾಧಿಸುತ್ತಲೇ ಹೋಗುತ್ತವೇನೋ.
ಇರಲಿ ಈಗ ಮೊದಲು ಹಿಂದಿನ ಇಂದಿನ ಕೌಟುಂಬಿಕ ವ್ಯವಸ್ಥೆಯಲ್ಲಾದ ಬದಲಾವಣೆಯನ್ನು ನೋಡುವ. ಮೊದಲಿನ, ಒಂದೇ ಮನೆಯಲ್ಲಿ ಸಾಧಾರಣವಾಗಿ ೨೦~೩೦ ಜನರಿರುವ ಅವಿಭಕ್ತ ಕುಟುಂಬದಿಂದ, ವಿಭಕ್ತ ಕುಟುಂಬವಾಗಿ, ಈಗಿನ ೨~೪ ಜನರಿರುವ ನ್ಯೂಕ್ಲಿಯರ್ ಫ್ಯಾಮಿಲಿಗೆ ನಾವೆಲ್ಲ ಬಂದು ನಿಂತಾಗಿದೆ. ಇನ್ನೂ ಹೇಳಬೇಕೆಂದರೆ ಅನೇಕರದ್ದು ವೀಕೆಂಡ್ ಫ್ಯಾಮಿಲಿ ಎನ್ನುವಂತಾಗಿದೆ. ಅಪ್ಪ ಒಂದೂರಲ್ಲಿ, ಅಮ್ಮ ಇನ್ನೊಂದೂರಲ್ಲಿ ಕೆಲಸ ಮಾಡ್ತಿರುವಾಗ, ಶನಿವಾರ~ಭಾನುವಾರವಷ್ಟೇ ಇಡೀ ಸಂಸಾರ ಒಂದಾಗುತ್ತದಷ್ಟೆ. ಈ ವೇಗದ, ಇಷ್ಟೊಂದು ಸ್ವಾರ್ಥದ, ಸೆಲ್ಫೀ ಯುಗದಲ್ಲಿ, ಕಾಲ ಕಳೆದಂತೆ “DINKS” (Double income, no kids) ಫ್ಯಾಮಿಲಿಗಳೇ ಜಾಸ್ತಿಯಾಗುತ್ತವೇನೋ. ಏಕೆಂದರೆ ಯಾರಿಗೂ ಯಾವ ಜವಾಬ್ದಾರಿಯೂ ಬೇಡವಷ್ಟೆ….
ಇನ್ನು ಈ ಎರೆಡರ ಸಾಧಕ~ಬಾಧಕಗಳನ್ನು ಗಮನಿಸಿದರೆ, ಎರೆಡರಲ್ಲೂ ಅದರದ್ದೇ ಆದ ಒಳಿತು~ಕೆಡಕುಗಳಿವೆ.
ಹಿಂದಿನ ಕೂಡು ಕುಟುಂಬದಲ್ಲಿ ಹೆಚ್ಚಾಗಿ ಮನೆಯ ಹಿರಿಯ, ಅಥವಾ ಯಜಮಾನನದ್ದೇ ಸರ್ವಾಡಳಿತ. ಬೇರಾರಿಗೂ ಸ್ವಾತಂತ್ರವಿಲ್ಲ. ಆ ಹೆಗ್ಗಂಬ ಸರಿ ಇದ್ದರೆ, ಆ ಮನೆ ನಂದನವನವೇ. ಆಗ ಸಂಸಾರದ ಮಂದಿ ಎಲ್ಲ ಸೇರಿ “ಜೇನಿನ ಗೂಡು ನಾವೆಲ್ಲಾ…. ಬೇರೆಯಾದರೆ ಜೇನಿಲ್ಲಾ….” ಅನ್ನುವ ಹಾಡಿನ ಆಶಯದಂತೆ ಬದುಕುತ್ತಿದ್ದರು. ಮಕ್ಕಳು ತಮ್ಮ ಬಾಲ್ಯವನ್ನು ಅಜ್ಜ~ಅಜ್ಜಿಯ ಮಡಿಲಲ್ಲಿ ಹಾಯಾಗಿ ಬೆಳೆಯುತ್ತ, ಚಿಕ್ಕಮ್ಮ, ಚಿಕ್ಕಪ್ಪ, ಅತ್ತೆ, ಮಾವ, ಅಕ್ಕ~ತಂಗಿ, ಅಣ್ತಮ್ಮ, ಹೀಗೇ ಇನ್ನೂ ಅನೇಕ ಸುಂದರ ಸಂಬಂಧಗಳಲ್ಲಿ ಆಹ್ಲಾದತೆ ಕಾಣುತ್ತಿದ್ದರು. ಎಲ್ಲರೊಡನೆ ಸಮರಸದಿ ಬಾಳುವ, ಸ್ವಲ್ಪವಾದರೂ ನಿಸ್ವಾರ್ಥ ಮನೋಭಾವನೆಯನ್ನು, ಸೌಹಾರ್ದತೆಯನ್ನು, ಇರುವುದರಲ್ಲೇ ಹಂಚಿಕೊಂಡು ಬಾಳುವ ಭಾವನೆಯನ್ನೂ ಬೆಳೆಸಿಕೊಳ್ಳುತ್ತಿದ್ದರು.
ಜೀವನದ ಅನೇಕ ಉತ್ತಮ ಮೌಲ್ಯಗಳನ್ನು ಮನೆಯ ಹಿರಿಯರ ನಡತೆಗಳಿಂದಲೇ ಕಲಿಯುತ್ತಿದ್ದರು. ಕೆಲಸ ಕಾರ್ಯಗಳಲ್ಲಿ ಒಬ್ಬರಿಗೊಬ್ಬರು ಅವಲಂಬಿತರಾಗಿರುವುದರಿಂದ ಬಾಂಧವ್ಯದ ಬೆಸುಗೆ ತುಂಬಾ ಗಟ್ಟಿಯಾಗಿ ಬೆಸೆದಿರುತ್ತಿತ್ತು. ಕುಟುಂಬದಲ್ಲಿ ಯಾರೊಬ್ಬರಿಗೆ ತೊಂದರೆಯಾದರೂ, ಅವರಿಗೆ ಪ್ರತಿಯೊಬ್ಬರ ಸಹಕಾರವಿರುತ್ತಿತ್ತು, ಅವರ ಏಳ್ಗೆಗೆ ಶ್ರಮಿಸುವ ಅಂತಃಕರಣ ಪೂರಿತ ಮನಸುಗಳಿರುತ್ತಿದ್ದವು.
(ಅವಿಭಕ್ತ ಕುಟುಂಬವಾಗಿದ್ದ ನನ್ನ ಅಜ್ಜನ ಮನೆಯಲ್ಲಿ ಕಳೆದ ನನ್ನ ಸಮಯ, ನನಗೆ ಅತ್ಯಂತ ಖುಷಿ ನೀಡುವ ಕಾಲ. ನನ್ನ ಮುತ್ತಜ್ಜಿಯೂ ಇದ್ದರಾಗ. ಹೆಚ್ಚು ಕಡಿಮೆ ಒಂದೇ ವಯೋಮಾನದ ಹತ್ತರಿಂದ ಹದಿನೈದು ಮಕ್ಕಳು ಬೆಳಗಿನಿಂದ ರಾತ್ರಿಯ ವರೆಗೂ ಅದೆಷ್ಟು ಆಟವಾಡುತ್ತಿದ್ದೆವೋ…. ಆಟ, ಊಟ, ಪಾಠ ಎಲ್ಲ ಜೊತೆಜೊತೆಯಲ್ಲಿಯೇ ಚೆಂದವಾಗಿ ನಡೆಯುತ್ತಿತ್ತು. ಹಿರಿಯರಲ್ಲೂ ಇವರು ನಮ್ಮ ಮಕ್ಕಳು, ಅವರು ಬೇರೆಯವರ ಮಕ್ಕಳು ಎನ್ನುವ ಬೇಧ~ಭಾವವಿರಲಿಲ್ಲ, ಎಲ್ಲ ಹಿರಿಯರೂ ಯಾವ ಮಕ್ಕಳಿಗೆ ಬೇಕಾದರೂ ಅವರ ಕೆಲಸ ಮಾಡಿಕೊಡುತ್ತಿದ್ದರು, ಕೆಲಸ ಹೇಳುತ್ತಿದ್ದರು. ಬಯ್ಯೋದು, ಪೆಟ್ಟು ಕೊಡೋದಂತೂ ಸಾರ್ವತ್ರಿಕವೇ…..ನಮ್ಮಲ್ಲಂತೂ ಸರಿಯೇ ಸರಿ ಅದರ ಯೋಚನೆ ಬರಲೂ ಸಾಧ್ಯವಿರಲಿಲ್ಲ. ಊಟ~ತಿಂಡಿಯೂ ಅಷ್ಟೆ. ಎಲ್ಲರೂ ಸಾಲಾಗಿ ಕುಳಿತು ಒಟ್ಟಿಗೇ ಊಟ ಮಾಡೋದು. ಸಂಜೆಯಾದರೆ ಒಟ್ಟಿಗೆ ಬಾಯಿಪಾಠ, ಭಜನೆ. ರಾತ್ರಿಯಾರೆ ಸೊಗಸಾದ ಕಥೆಯೊಂದಿಗೆ ಅಜ್ಜಿಯ ಕೈತುತ್ತಿನ ಊಟ. ವಾವ್ ಎಂಥ ಸೊಗಸಾದ, ಚೆಂದದ ಕಾಲವದು. ಬಾಲ್ಯವೇ ಮತ್ತೆ ಮರಳಿ ಬಾ…. ಎಂದು ಕೂಗುವಂತಾಗುತ್ತೆ. ವರ್ಷಕ್ಕೊಮ್ಮೆ ಎಲ್ಲ ಮಕ್ಕಳಿಗೂ ಒಂದೇ ಥರದ ಬಟ್ಟೆಯಲ್ಲಿ ಉಡುಪು ಹೊಲಿಸಿಬಿಟ್ಟರಾಯ್ತು. ಎಲ್ಲರೂ ಖುಷಿಯಾಗಿಯೇ ತೊಟ್ಟು ಸಂಭ್ರಮ ಪಡುತ್ತಿದ್ದೆವು. ಶಾಲೆಯ ಥರ ಮನೆಯ ಕಾರ್ಯಕ್ರಮಗಳಲ್ಲೂ ಎಲ್ಲರದೂ ಯೂನಿಫಾರಮ್. ಈಗ ಆ ರೀತಿಯ ಕಲ್ಪನೆಯಾದರೂ ಸಾಧ್ಯವೆ?)
ಅದಲ್ಲದೇ ಮನೆಯ ಹಿರಿಯನೇ ಸಂಕುಚಿತ ಮನೋಭಾವ, ಅಥವಾ ಹಿತ್ತಾಳೆ ಕಿವಿಯದ್ದಾದರೆ, ಮಾತ್ರ ಆ ಮನೆ ನರಕವೇ ಸರಿ. ‘ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ’. ಸ್ತ್ರೀಯರಿಗಂತೂ ಆರ್ಥಿಕ ಸ್ವಾತಂತ್ರ್ಯವೂ ಇರದೇ, ಅವಳ ಯಾವ ಭಾವನೆಗಳಿಗೂ ಬೆಲೆ ಇರದೇ ಬರೀ ದುಡಿಯುವ ಯಂತ್ರವಾಗಿ ಮಾತ್ರ ಇದ್ದ ಕಾಲವದು. ಕುಟುಂಬದ ಪರಿಸ್ಥಿತಿ ಹೇಗಿದ್ದರೂ ಹೆಣ್ಣಿರುವುದೇ ಹೊಂದಿಕೊಂಡು ಹೋಗಲು ಎನ್ನುವಂಥ ಕಾಲವದು. ಹೊಂದಿಕೊಂಡು ಹೋಗುತ್ತಿದ್ದರೂ ಕೂಡ.
ಹಾಗಾಗಿಯೇ ಕಾಲ ಬದಲಾದಂತೆ ಅವಿಭಕ್ತ ಕುಟುಂಬದಲ್ಲಿ ಕೂಡಿ ಬಾಳುವ ಸಹನೆ ಯಾರಲ್ಲೂ ಇರದೇ ಎಲ್ಲರೂ ತಮ್ಮ ತಮ್ಮ ದಾರಿ ನೋಡಿಕೊಂಡು ಸ್ವತಂತ್ರರಾಗುವ ಮನ ಮಾಡಿದ್ದು. ಒಂದಾಗಿದ್ದು ದಿನವೂ ಜಗಳಾಡುತ್ತ ಇರುವ ಬದಲು, ದೂರದಲ್ಲಿದ್ದು ಅಪರೂಪಕ್ಕೊಮ್ಮೆ ಹಬ್ಬ~ ಹರಿದಿನಗಳಲ್ಲಿ ಭೇಟಿಯಾಗಿ ಸಂತಸವಾಗಿದ್ದರಾಯ್ತು ಎಂಬುವ ಮನೋಭಾವವನ್ನು ಬೆಳೆಸಿಕೊಂಡಿದ್ದು.
ಹೀಗಿದ್ದರೂ ಈಗೊಂದು ದಶಕದ ಹಿಂದಿನ ತನಕವೂ, ಕುಟುಂಬದಲ್ಲಿ ಕಾರ್ಯಕ್ರಮಗಳಾದರೆ, ದೊಡ್ಡ ಹಬ್ಬವಾದರೆ ಎಲ್ಲ ಸದಸ್ಯರೂ ಸೇರಿ ಒಂದಾಗಿ ಇರುವ ಕೆಲಸಗಳನ್ನು ಹಂಚಿಕೊಂಡು ಸಂತಸದಿಂದ ಜೀವನ ನೆರವೇರಿಸುತ್ತಿದ್ದರು. ಹಾಗಾಗಿ ಕೊನೇ ಪಕ್ಷ ಕಿರಿಯರಿಗೆ ತಮ್ಮ ರಕ್ತ ಸಂಬಂಧಿಗಳ ಪರಿಚಯವಂತೂ ಚೆನ್ನಾಗಿರೋದು. ಅಪರೂಪಕ್ಕೊಮ್ಮೆಯಾದರೂ ಕುಟುಂಬ ಸಮೇತ ನೆಂಟರಿಷ್ಟರ ಮನೆಗೆ ಹೋಗಿ ನಾಲ್ಕಾರು ದಿನ ಅಲ್ಲೇ ಉಳಿದುಕೊಂಡು ಸಂಭ್ರಮಿಸಿ ಬರುವ ಸಂಪ್ರದಾಯವಾದರೂ ಇತ್ತು. ಯಾರ ಮನೆಗೂ ಅತಿಥಿಗಳು ಮುಂಚೆಯೇ ಹೇಳಿ ಹೋಗಬೇಕೆಂಬ ಪದ್ಧತಿ ಏನೂ ಇರಲಿಲ್ಲ ಆಗ. (ಪ್ರಸ್ತುತದಲ್ಲಿ ಮಾತ್ರ ಮೊದಲು ಹೇಳಿಯೇ ಪರರ ಮನೆಗೆ ಹೋಗುವುದು ಕಡ್ಡಾಯ. ಹೆಚ್ಚಿನ ಮನೆಗಳಲ್ಲಿ ದಂಪತಿಗಳಿಬ್ಬರೂ ಉದ್ಯೋಗಸ್ಥರೇ ಆಗಿರುವುದರಿಂದ ಅದು ಅನಿವಾರ್ಯವೂ ಕೂಡ. ಇಲ್ಲದಿದ್ದರೆ ನಮ್ಮ ಆಗಮನ ಅನಪೇಕ್ಷಿತವೇ.)
ಅದೇ ಈಗಿನ ಕಾಲದ ಚಿಕ್ಕ~ಚೊಕ್ಕ ಕುಟುಂಬಗಳಾದರೆ, ಮನೆಯ ಎಲ್ಲ ಸದಸ್ಯರಿಗೂ ಸಮನಾದ ಸ್ವಾತಂತ್ರ್ಯ. ಮನೆಯ ಎಲ್ಲ ಆಗು ಹೋಗುಗಳ ಬಗ್ಗೆ ಎಲ್ಲರೂ ಒಟ್ಟಿಗೇ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವರು. ಅದರಲ್ಲಿ ಹಿರಿಯ~ಕಿರಿಯರೆಂಬ ಬೇಧ ಭಾವಗಳಿಲ್ಲ. ಪುರುಷನಿಗೆ ಸಮನಾಗಿ ದುಡಿಯುವ ಸ್ತ್ರೀಗೆ ಆರ್ಥಿಕ ಸ್ವಾತಂತ್ರ್ಯವೂ ದೊರಕಿದೆ. ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಸಮನಾದ ಹಕ್ಕು ಮತ್ತು ಕರ್ತವ್ಯಗಳಿವೆ. ಆದರೆ ಒಬ್ಬರಿಗೊಬ್ಬರು ಹೆಚ್ಚಿನ ಅವಲಂಬನೆ ಇರದ ಕಾರಣ, ಹತ್ತಿರದ ಸಂಬಂಧಿಕರಲ್ಲಿಯೂ ಬಾಂಧವ್ಯದ ಬೆಸುಗೆ ತೀರ ಕಡಿಮೆಯೆ. ಎಲ್ಲರಲ್ಲೂ ಅವರವರ ಜೀವನ ಅವರವರದ್ದು ಎನ್ನುವ ಭಾವ. ಯಾರಿಗೂ ಯಾವ ಜವಾಬ್ದಾರಿಯೂ ಬೇಡ. ಹೆಚ್ಚಿನ ಎಲ್ಲರೂ ತಮ್ಮ ಪಾಡಿಗೆ ತಾವಿದ್ದು ಬಿಡುವಷ್ಟು ಸಂಕುಚಿತ ಮನೋಭಾವದವರಾಗಿದ್ದಾರೆ. ಹೆಚ್ಚಿನ ಎಲ್ಲ ಕಾರ್ಯಕ್ರಮಗಳಿಗೂ ‘ಪ್ಯಾಕೇಜ್ ಸಿಸ್ಟಮ್’ ಎನ್ನುವ ವ್ಯವಸ್ಥೆ ಬಂದು, ಯಾರೂ ಯಾರಿಗೂ ಅವಲಂಬಿತರಾಗೋದೇ ಬೇಡ ಎನ್ನುವಂತಾಗಿದೆ. ಕೆಲವರು ಮದುವೆಯಂತಹ ಕಾರ್ಯಕ್ರಮಗಳಲ್ಲಿ ಅತಿಥಿಗಳನ್ನು ಸ್ವಾಗತಿಸಲೂ, ಹೆಂಗೆಳೆಯರಿಗೆ ಅರಿಶಿನ~ಕುಂಕುಮ ಕೊಡಲೂ ದುಡ್ಡು ಕೊಟ್ಟು ಜನರನ್ನು ಕರಿಸುತ್ತಾರೆಂದರೆ ಎಂಥ ವಿಪರ್ಯಾಸ. ಈಗ ಹಣವೊಂದಿದ್ದರೆ ಎಲ್ಲವೂ ಸಾಧ್ಯ ಎನ್ನುವಲ್ಲಿಗೆ ಬಂದು ನಿಂತಿದ್ದೇವೆ. ಸ್ನೇಹ~ಬಾಂಧವ್ಯದ ಭಾವ ಅದೆಷ್ಟು ಕುಸಿದಿದೆ ಎಂದು ಅಂದಾಜಿಸಬಹುದು.
ಹೀಗೆ “ವಸುಧೈವ ಕುಟುಂಬಕಂ” ಎಂಬ ವಿಶಾಲ ಭಾವನೆಯನ್ನೊಳಗೊಂಡ, ನಮ್ಮ ಭಾರತೀಯ ಮೂಲಭೂತ ಕಲ್ಪನೆಯಾದ ಅವಿಭಕ್ತ ಕುಟುಂಬ ಕಣ್ಮರೆಯಾಗಿ, ನ್ಯೂಕ್ಲಿಯರ್ ಫ್ಯಾಮಿಲಿಗಳ ಆಗಮನವಾಗಿ,
ಚಿಕ್ಕ~ಪುಟ್ಟ ವೈಮನಸ್ಯಗಳಿಗೂ ವೈವಾಹಿಕ ಬಂಧನ ವಿಚ್ಛೇದನದವರೆವಿಗೂ ಹೋಗಿ, ಕೋರ್ಟಿನ ಮೆಟ್ಟಿಲು ಹತ್ತುವಂತಾಗಿದೆ. ವೃದ್ಧಾಶ್ರಮ, ಬೇಬಿ ಕೇರ್ ಸೆಂಟರ್ ಅಂತಹವುಗಳು ಅನಿವಾರ್ಯವಾಗಿದೆ. ಅಜ್ಜಿಮನೆ, ಬೇಸಿಗೆ ಶಿಬಿರಗಳಂಥ ಕಲ್ಪನೆಗಳು ಸಾಕಾರಗೊಂಡು ಯಶಸ್ಸು ಗಳಿಸುತ್ತಿವೆ. ಹಿಂದಿನ ಕೂಡು ಕುಟುಂಬದಲ್ಲಾದರೆ, ಕಿರಿಯರನ್ನು ಜೋಪಾನ ಮಾಡಲು, ಅವರಿಗೆ ಪಠ್ಯೇತರ ವಿಷಯಗಳನ್ನೂ, ನೀತಿಕಥೆಗಳನ್ನೂ, ಇನ್ನಿತರ ಚಟುವಟಿಕೆಗಳನ್ನೂ ಕಲಿಸಲು ಹಿರಿಯರಿರುತ್ತಿದ್ದರು. ಹಾಗೆಯೇ ಹಿರಿಯರ ಆರೈಕೆ ಮಾಡಲು, ಅವರ ಒಂಟಿತನ, ವೃದ್ಧಾಪ್ಯದ ಆಸರೆಯಾಗಿ ಕಿರಿಯರಿರುತ್ತಿದ್ದರು. ಈಗ ಅದಾವುದೂ ಇಲ್ಲದೇ ಎಲ್ಲರಿಗೂ ಒಂದು ರೀತಿಯ ಅನಾಥಭಾವ ಮೂಡಿರುವುದಂತೂ ನಿಜ. ತೀರ ಅಪರೂಪಕ್ಕೆ ಎಲ್ಲೋ ಒಂದೊಂದು ಕುಟುಂಬ ಹೀಗೆ ಸಾಮರಸ್ಯದಿಂದ ಬಾಳುವುದನ್ನು ಕಾಣಬಹುದಷ್ಟೆ.
ಇದು ನಾನು ಕಂಡಂತೆ ಕೌಟುಂಬಿಕ ಜೀವನ ಶೈಲಿಯಲ್ಲಿ ಹಿಂದಿನಿಂದ ಇಂದಿನವರೆಗಾದ ಬದಲಾವಣೆ.
ನೀವೂ ಇಂಥಹ ಅನೇಕ ಬದಲಾವಣೆಯನ್ನು ನಿಮ್ಮ ಜೀವನದಲ್ಲಿ ನೋಡಿರಬೇಕಲ್ಲ.

ಜ್ಯೋತಿ ರಾಜೇಶ್