- – ಪರಿಸರ ಸ್ನೇಹಿ ಹಬ್ಬಕ್ಕೆ ಸಾರ್ವಜನಿಕರಲ್ಲಿ ಮನವಿ
ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬದ ಸಂದರ್ಭದಲ್ಲಿ, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತು ಬಣ್ಣ ಲೇಪಿತ ಗಣೇಶ ಮೂರ್ತಿಗಳ ವಿಸರ್ಜನೆ ನಿಷೇಧಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಚೇರಿಯ ಪರಿಸರ ಅಧಿಕಾರಿಗಳು ಪ್ರಕಟಿಸಿದ್ದಾರೆ.
ಪ್ರತಿ ವರ್ಷ ಹಬ್ಬದ ಬಳಿಕ ಮೂರ್ತಿಗಳನ್ನು ಕೆರೆ, ಬಾವಿ ಹಾಗೂ ಇತರ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜಿಸುವುದರಿಂದ ಜಲಮೂಲಗಳು ಕಲುಷಿತಗೊಳ್ಳುತ್ತವೆ. ಇದರ ಪರಿಣಾಮವಾಗಿ ಜಲದ ಭೌತಿಕ ಹಾಗೂ ರಾಸಾಯನಿಕ ಗುಣಗಳು ಹಾನಿಗೊಳಗಾಗಿ, ಪ್ರಾಣಿ, ಪಕ್ಷಿ ಮತ್ತು ಜಲಚರ ಜೀವಿಗಳ ಬದುಕಿಗೆ ಅಪಾಯ ಉಂಟಾಗುತ್ತದೆ. ಸಾರ್ವಜನಿಕ ಆರೋಗ್ಯಕ್ಕೂ ಹಾನಿ ಸಂಭವಿಸುತ್ತದೆ.
ಈ ಹಿನ್ನೆಲೆಯಲ್ಲಿ, 2016ರ ಜುಲೈ 20ರಂದು ಹೊರಡಿಸಿದ ಅಧಿಸೂಚನೆಯ ಪ್ರಕಾರ, ರಾಜ್ಯದ ಯಾವುದೇ ಜಲಮೂಲಗಳಲ್ಲಿ ಪಿಒಪಿ ಹಾಗೂ ಬಣ್ಣ ಲೇಪಿತ ಮೂರ್ತಿಗಳ ವಿಸರ್ಜನೆ ಸಂಪೂರ್ಣ ನಿಷೇಧಿಸಲಾಗಿದೆ. ಈ ಆದೇಶ ಉಲ್ಲಂಘಿಸಿದರೆ, 1974ರ ಜಲಮಾಲಿನ್ಯ ನಿಯಂತ್ರಣ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 1860ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರಿಗೆ ಸೂಚನೆಗಳು:
- ಬಣ್ಣರಹಿತ ಮಣ್ಣಿನ ಅಥವಾ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ಬಳಸಬೇಕು.
- ವಿಸರ್ಜನೆಗಾಗಿ ನಗರಸಭೆ ಅಥವಾ ಪುರಸಭೆ ನಿಗದಿಪಡಿಸಿದ ಸ್ಥಳಗಳು ಅಥವಾ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಚಾರಿ ವಾಹನಗಳನ್ನು ಬಳಸಬೇಕು.
- ಹೂವು, ಹಣ್ಣು, ಬಾಳೆ ಕಂಬ, ಮಾವಿನ ತೋರಣ ಮುಂತಾದ ಹಸಿ ಕಸವನ್ನು ಪ್ರತ್ಯೇಕಿಸಿ ನೀಡಬೇಕು.
- ತೈಲ ಬಣ್ಣಗಳನ್ನು ತೊರೆದು, ನೈಸರ್ಗಿಕ ಬಣ್ಣಗಳಿಂದ ಅಲಂಕರಿಸಿದ ಮೂರ್ತಿಗಳನ್ನು ಪೂಜಿಸಬೇಕು.
- ಸಾರ್ವಜನಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ, ಶಬ್ದ ಉತ್ಪಾದಕ ಉಪಕರಣ ಬಳಕೆಗಾಗಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು.
- ಪೆಂಡಲ್ ಅಲಂಕಾರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನು ಮಾತ್ರ ಬಳಸಿ, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳಿಂದ ದೂರವಿರಬೇಕು.
ಪರಿಸರ ಸ್ನೇಹಿ ಹಬ್ಬ ಆಚರಿಸುವ ಮೂಲಕ ನೈಸರ್ಗಿಕ ಜಲಮೂಲಗಳನ್ನು ಸಂರಕ್ಷಿಸಲು ಎಲ್ಲರೂ ಸಹಕರಿಸಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಮನವಿ ಮಾಡಿದೆ.