ಬೆಂಗಳೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬೆಂಗಳೂರು ನಗರ ಜಲಾವೃತಗೊಂಡಿದ್ದು, ಮೂರು ಮಂದಿ ಮೃತಪಟ್ಟಿದ್ದಾರೆ. ಸಾಕಷ್ಟು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನ ಊಟ, ನೀರು, ನಿದ್ದೆ ಬಿಟ್ಟು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಗರದ ಹಲವೆಡೆ ಮಳೆ ನೀರು ರಸ್ತೆಗಳು, ಮನೆಗಳು, ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಬಹುತೇಕ ಪ್ರದೇಶಗಳನ್ನು ಆವೃತ್ತ ಮಾಡಿಕೊಂಡಿದೆ. ಸುಮಾರು 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, 20 ಕೆರೆಗಳು ಉಕ್ಕಿ ಹರಿದ ಪರಿಣಾಮ ಬಡಾವಣೆಗಳು ಜಲಾವೃತವಾಗಿವೆ. ಮಧುವನ ಅಪಾರ್ಟ್‌ಮೆಂಟ್, ಡಾಲರ್ಸ್ ಕಾಲೋನಿ, ಬಿಟಿಎಂ ಲೇಔಟ್ ಸೇರಿದಂತೆ ಹಲವೆಡೆ ನೀರು ತುಂಬಿದ್ದು, ಜನರ ಹಾಳಾಗಿದೆ.
ಮಳೆಯಿಂದಾಗಿ 63 ವರ್ಷದ ಮನಮೋಹನ್ ಕಾಮತ್, 12 ವರ್ಷದ ದಿನೇಶ್ ಸೇರಿದಂತೆ ಮೂವರು ಮೃತರಾಗಿದ್ದಾರೆ. ವೈಟ್‌ಫೀಲ್ಡ್‌ನಲ್ಲಿ ಗೋಡೆ ಕುಸಿದು ಶಶಿಕಲಾ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಈಕೆ ಲ್ಯಾಬ್ ಸ್ಟೋನ್ ಕಂಪನಿಯಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದರಂತೆ. ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್ ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.
ತಗ್ಗು ಪ್ರದೇಶಗಳಲ್ಲಿ ತೀವ್ರ ಅವಾಂತರ:
ಸಾಯಿಲೇಔಟ್, ನಂದಗೋಕುಲ ಲೇಔಟ್, ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ, ದೀಪಿಕಾ ಲೇಔಟ್, ಹೆಣ್ಣೂರು ಮುಂತಾದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಜನ ಜಲದಿಗ್ಭಂಧನದಲ್ಲಿದ್ದಾರೆ. ಟಿವಿ, ಫ್ರಿಡ್ಜ್, ಸೋಫಾ ಸೇರಿದಂತೆ ಅನೇಕ ಮನೆ ಉಪಕರಣಗಳು ನೀರಿನಲ್ಲಿ ಮುಳುಗಿವೆ. ಕೆಲ ಭಾರವಾದ ವಸ್ತುಗಳು ಕೂಡ ತೇಲಿ ಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ.
ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಮೂರು ಜನರೇಟರ್, ಎರಡು ಬೈಕ್‌ಗಳು ಮತ್ತು ಕೆಲವು ದಾಖಲೆಗಳು ನೀರುಪಾಲಾಗಿವೆ. ಅನಾಥಾಶ್ರಮಗಳು ಕೂಡ ಜಲಾವೃತಗೊಂಡು ವೃದ್ಧರು ಮಳೆ ನೀರಿನಲ್ಲಿ ಕಾಲ ಕಳೆಯುತ್ತಿರುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ.
ರಕ್ಷಣೆ ಮತ್ತು ನೆರವು ಕಾರ್ಯಚಟುವಟಿಕೆ:
ಬಿಬಿಎಂಪಿ ಸಿಬ್ಬಂದಿ ಬೋಟ್‌ಗಳಲ್ಲಿ ಮನೆಗೆ ನೀರು ನುಗ್ಗಿದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಅವಶ್ಯಕ ವಸ್ತುಗಳ ಪೂರೈಕೆಯೂ ನಡೆಯುತ್ತಿದೆ. ಅಲ್ಲದೆ ಕೆಲವು ಸ್ಥಳಗಳಲ್ಲಿ ಶ್ವಾನಗಳು, ಹಸುಗಳು ಸೇರಿದಂತೆ ಪ್ರಾಣಿಗಳನ್ನೂ ರಕ್ಷಿಸಲಾಗಿದೆ.ಇದನ್ನು ಓದಿ –ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಸಚಿವ ಕೆ.ಎನ್. ರಾಜಣ್ಣ
ಜನರ ಆಕ್ರೋಶ:
ಏಕದಿನದ ಮಳೆಗೆ ಬೆಂಗಳೂರು ತತ್ತರಿಸಿದ್ದು, ಸರ್ಕಾರ ಮತ್ತು ಬಿಬಿಎಂಪಿ ಈ ಕುರಿತು ಮುಂಚಿತವಾಗಿ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನುಮುಂದಾದರೂ ಸರಕಾರ ಎಚ್ಚೆತ್ತುಕೊಂಡು ಮಳೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕೆಂಬುದು ಜನರ ಬೇಡಿಕೆ.