- ಅನಾಮಿಕ ಚಿನ್ನಯ್ಯನಿಂದ ಸ್ಫೋಟಕ ಹೇಳಿಕೆ
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆಂದು ಹೇಳಿ ರಾಜ್ಯದ ಪೊಲೀಸ್ ಇಲಾಖೆಯನ್ನು ದಿಕ್ಕುತಪ್ಪಿಸಿದ್ದ ಅನಾಮಿಕ ಸಿ.ಎನ್. ಚಿನ್ನಯ್ಯನನ್ನು ವಿಶೇಷ ತನಿಖಾ ತಂಡ (SIT) ಬಂಧಿಸಿದ್ದು, ವಿಚಾರಣೆ ವೇಳೆ ಆತ ನೀಡಿದ ಸ್ಫೋಟಕ ಹೇಳಿಕೆ ಇದೀಗ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ವಿಚಾರಣೆಯ ಸಂದರ್ಭದಲ್ಲಿ ಚಿನ್ನಯ್ಯ, “ನಾನು ಪಾತ್ರಧಾರಿ ಮಾತ್ರ, ನನ್ನ ಹಿಂದೆ ನಿಜವಾದ ಸೂತ್ರಧಾರಿಗಳು ಇದ್ದಾರೆ. ನನ್ನನ್ನು ಒತ್ತಾಯಪೂರ್ವಕವಾಗಿ ಈ ರೀತಿ ಹೇಳುವಂತೆ ಮಾಡಿದ್ದಾರೆ” ಎಂದು ಬಾಯ್ಬಿಟ್ಟಿದ್ದಾನೆ. ಕೆಲವು ಜನರು ಬುರುಡೆ ನೀಡಿ ಕೋರ್ಟ್‌ಗೆ ಒಪ್ಪಿಸು ಮತ್ತು ಹೀಗೆ ಹೇಳು ಎಂದು ಒತ್ತಾಯಿಸಿದ್ದರಿಂದ ನಾನು ಹೇಳಿದ್ದೇನೆ ಎಂದು ಆತ ಒಪ್ಪಿಕೊಂಡಿದ್ದಾನೆ.
ಸುಮಾರು 19 ಗಂಟೆಗಳ ಕಾಲ ನಡೆದ ವಿಚಾರಣೆಯ ಬಳಿಕ ಎಸ್‌ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಬಂಧಿಸಿದ್ದು, ಇವತ್ತು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಬಳಿಕ ನ್ಯಾಯಾಂಗ ಬಂಧನ ಕೋರಿ ಮತ್ತೆ ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿವೆ.
ಹಣಕ್ಕಾಗಿ ಸುಳ್ಳು ದೂರು ನೀಡಿದ್ದಾಗಿ ಆತ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂಬ ಮಾಹಿತಿಯೂ ಹೊರಬಂದಿದೆ. ಧರ್ಮಸ್ಥಳದಲ್ಲಿ ನೂರಾರು ಹೆಣ್ಣು ಮಕ್ಕಳ ಶವಗಳನ್ನು ಹೂತಿದ್ದೇನೆಂದು ಆತ ಪೊಲೀಸ್ ಠಾಣೆಗೆ ಶರಣಾಗಿದ್ದ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಎಸ್‌ಐಟಿ ರಚಿಸಿ, ಮೊಹಾಂತಿ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿತ್ತು.
ದೂರುದಾರನು ತೋರಿಸಿದ 17 ಸ್ಥಳಗಳಲ್ಲಿ ಬುಲ್ಡೋಜರ್ ಮೂಲಕ ಉತ್ಖನನ ನಡೆಸಲಾಗಿತ್ತು. ಆದರೆ ಒಂದು ಸ್ಥಳದಲ್ಲಿ ಮಾತ್ರ ಕೆಲವು ಮೂಳೆಗಳು ಸಿಕ್ಕಿದ್ದು, ಅವನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆತ ನೀಡಿದ ಹೇಳಿಕೆಗಳಲ್ಲಿ ವೈರುಧ್ಯ ಕಂಡುಬಂದ ಕಾರಣ ವಿಚಾರಣೆ ತೀವ್ರಗೊಳಿಸಲಾಯಿತು.
ಇದೇ ವೇಳೆ, ಚಿನ್ನಯ್ಯನ ಪತ್ನಿ ಹಾಗೂ ಸೋದರರು ಅವನ ವಿರುದ್ಧವೇ ತೀವ್ರ ಆರೋಪಗಳನ್ನು ಮಾಡಿದ್ದರು. ಆತ ಹಣಕ್ಕಾಗಿ ಯಾವುದೇ ಮಟ್ಟದ ಕೆಲಸಕ್ಕೂ ಕೈಹಾಕುವ ವ್ಯಕ್ತಿ ಎಂದು ಹೇಳಿದ್ದಾರೆ. ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಉದ್ದೇಶದಿಂದಲೇ ಈ ಪಿತೂರಿ ನಡೆಸಿದ್ದಾನೆಂದು ಆರೋಪಿಸಿದರು. ತನಿಖೆಯಲ್ಲಿ ಆತನ ಬ್ಯಾಂಕ್ ಖಾತೆಗಳನ್ನೂ ಪರಿಶೀಲಿಸಲಾಗುತ್ತಿದೆ.ಇದನ್ನು ಓದಿ –ಧರ್ಮಸ್ಥಳ ಪ್ರಕರಣ: ದೂರುದಾರ ಅನಾಮಿಕನ ಹೆಸರು ಬಯಲು & ಬಂಧನ
ಚಿನ್ನಯ್ಯನಿಗೆ ಹಣಕಾಸು ಸಹಾಯ ನೀಡಿದ ಹಾಗೂ ನಿಕಟ ಸಂಪರ್ಕ ಹೊಂದಿದ್ದ ಕೆಲವರಿಗೂ ಈಗ ಬಂಧನದ ಬಲೆ ಬೀಳುವ ಸಾಧ್ಯತೆ ಇದೆ. ಇದೇ ವೇಳೆ ಸುಜಾತಾ ಭಟ್ ಎಂಬ ವಯೋವೃದ್ಧೆ ತಮ್ಮ ಮಗಳ ನಾಪತ್ತೆ ಕಥೆ ಸುಳ್ಳು ಎಂದು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದರು. ಆದರೆ ನಂತರ ಹೇಳಿಕೆಯನ್ನು ಬದಲಿಸಿ “ನನ್ನ ಮಗಳು ಇದ್ದುದೂ ನಿಜ, ಆಕೆ ಸತ್ತಿದ್ದೂ ನಿಜ” ಎಂದು ಹೇಳಿದ್ದು ಮತ್ತಷ್ಟು ಗೊಂದಲ ಉಂಟುಮಾಡಿದೆ.