- ಬಿಗ್‌ಬಾಸ್ ನಡೆಯುವ ಜಾಲಿವುಡ್ ಸ್ಟುಡಿಯೋಗೆ ಬೀಗ
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್‌ಬಾಸ್ ಕನ್ನಡ ಸೀಸನ್-12ಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಇಂದು ಬಿಗ್‌ಬಾಸ್ ನಡೆಯುತ್ತಿರುವ ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋಗೆ ತಹಶೀಲ್ದಾರ್, ಪೊಲೀಸರ ಸಮ್ಮುಖದಲ್ಲಿ ಬೀಗ ಬಿದ್ದಿದೆ. ನಿಯಮ ಉಲ್ಲಂಘಿಸಿರುವ ಆರೋಪದ ಮೇರೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಗ್‌ಬಾಸ್ ಕಾರ್ಯಕ್ರಮದ ಆಯೋಜಕರಿಗೆ ನೋಟಿಸ್ ನೀಡಿತ್ತು.
ಜಾಲಿವುಡ್ ಸ್ಟುಡಿಯೋ ಮ್ಯಾನೇಜ್‌ಮೆಂಟ್‌ಗೆ ತಹಶೀಲ್ದಾರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂದು 7.30ರವರೆಗೆ ಅವರಿಗೆ ಕಾಲಾವಕಾಶ ನೀಡಲಾಗಿದ್ದು, ಅಷ್ಟರೊಳಗೆ ಸ್ಟುಡಿಯೋದಲ್ಲಿರುವ ಎಲ್ಲರನ್ನೂ ಹೊರಗೆ ಕಳುಹಿಸುವಂತೆ ಖಡಕ್ ಸೂಚನೆ ನೀಡಲಾಗಿದೆ.
ಸದ್ಯ ಒಳಗೆ ಬಿಗ್‌ಬಾಸ್ ಕಾರ್ಯಕ್ರಮ ನಡೆಯುತ್ತಿದ್ದು, ಸ್ಪರ್ಧಿಗಳು ಕೂಡ ಅಲ್ಲೇ ಇದ್ದಾರೆ. ಈಗ ಜಾಲಿವುಡ್ ಸ್ಟುಡಿಯೋ ಬಂದ್‌ಗೆ ಸೂಚನೆ ನೀಡಿರುವುದರಿಂದ ಬಿಗ್‌ಬಾಸ್ ಕಾರ್ಯಕ್ರಮ ಕೂಡ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಕೂಡಲೇ ಬಿಗ್ ಬಾಸ್ ಮನೆಯನ್ನು ಬಂದ್ ಮಾಡುವಂತೆ ನೋಟಿಸ್‌ನಲ್ಲಿ ಖಡಕ್ ಆಗಿ ತಿಳಿಸಿದ್ದರ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಡದಿ ಬಳಿ ಬಿಗ್‌ಬಾಸ್ ಕಾರ್ಯಕ್ರಮ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್‌ನವರು ಜಲ ಕಾಯ್ದೆ, ವಾಯು ಕಾಯ್ದೆಯಡಿ ಅನುಮತಿ ಪಡೆಯದೆ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಎರಡು ನೋಟಿಸ್ ಹೋಗಿದೆ
ಬಿಗ್ ಬಾಸ್-12 ಕಾರ್ಯಕ್ರಮ ನಡೆಯುತ್ತಿರುವ ಆ ಸ್ಟುಡಿಯೋಗೆ ನೋಟಿಸ್ ನೀಡಿರುವ ವಿಚಾರ ನನಗೆ ತಿಳಿಯಿತು. ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ರಾಮನಗರದ ಪ್ರಾದೇಶಿಕ ಕಚೇರಿಯಿಂದ 2024ರಲ್ಲೇ ಈ ಸಂಬಂಧ ಎರಡು ಬಾರಿ ನೋಟಿಸ್ ನೀಡಲಾಗಿದೆ. ಆದರೂ ಅವರು ನಿಯಮ ಪಾಲಿಸದ ಕಾರಣ ಈಗ ನೋಟಿಸ್ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದಿದ್ದಾರೆ.ಇದನ್ನು ಓದಿ –ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಆಸ್ಪತ್ರೆಗೆ ದಾಖಲು
ಬಿಗ್ ಬಾಸ್‌ನಿಂದ ಆಚೆ ಬರ್ತಾರಾ ಸ್ಪರ್ಧಿಗಳು?
ಸೀಲ್‌ಡೌನ್ ಆದಮೇಲೆ ಒಳಗೆ ಯಾವುದೇ ಆಕ್ಟಿವಿಟಿ ನಡೆಯುವಂತಿಲ್ಲ. ಯಾವುದೇ ವ್ಯಕ್ತಿಗಳೂ ಇರುವಂತಿಲ್ಲ. ಹಾಗಾಗಿ, ಬಿಗ್ ಬಾಸ್ ಮನೆಯಿಂದ ಸ್ಪರ್ಧಿಗಳನ್ನ ಆಚೆ ಕಳುಹಿಸುವ ಸಾಧ್ಯತೆ ಇದೆ.








