ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ಬಣವು ಆರ್‌ಜೆಡಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಿದೆ.
ಗುರುವಾರ ಪಟ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹಲೋತ್ ಅವರು ಮಾತನಾಡಿ, “ಈ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪೂರ್ಣ ಬೆಂಬಲ ನೀಡಿದ್ದಾರೆ,” ಎಂದು ತಿಳಿಸಿದ್ದಾರೆ.
ಅದೇ ವೇಳೆ, ‘ಇಂಡಿಯಾ’ ಬಣವು ಸರ್ಕಾರ ರಚಿಸಿದರೆ ವಿಕಾಸಶೀಲ ಇನ್ಸಾನ್ ಪಕ್ಷ (ವಿಐಪಿ) ನಾಯಕ ಮುಖೇಶ್ ಸಾಹ್ನಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗುವುದು ಎಂದು ಘೋಷಿಸಲಾಯಿತು. ಹಿಂದುಳಿದ ವರ್ಗದ ಮತ್ತೊಬ್ಬ ನಾಯಕರಿಗೂ ಉಪಮುಖ್ಯಮಂತ್ರಿ ಸ್ಥಾನ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.
ಚುನಾವಣಾ ವೇಳಾಪಟ್ಟಿಯ ಪ್ರಕಾರ, ಬಿಹಾರದಲ್ಲಿ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತ ಎಣಿಕೆ ನವೆಂಬರ್ 14ರಂದು ನಡೆಯಲಿದೆ.
ಈ ಘೋಷಣೆಯೊಂದಿಗೆ ಬಿಹಾರದ ರಾಜಕೀಯ ಹೋರಾಟ ಮತ್ತಷ್ಟು ಚುರುಕುಗೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಬಣದ ವಿರುದ್ಧ ತೇಜಸ್ವಿ ಯಾದವ್ ನೇತೃತ್ವದ ಇಂಡಿಯಾ ಬಣವು ನೇರ ಸ್ಪರ್ಧೆಗೆ ಸಿದ್ಧತೆ ಆರಂಭಿಸಿದೆ.ಇದನ್ನು ಓದಿ –ಹಾಸನಾಂಬ ಜಾತ್ರೋತ್ಸವ ಸಂಪನ್ನ: ದಾಖಲೆ ಭಕ್ತರ ನೆರೆ ದರ್ಶನ
ತೇಜಸ್ವಿ ಯಾದವ್ ಅವರು ಹಿಂದಿನ ಚುನಾವಣೆಯಲ್ಲಿ ಯುವ ಮತದಾರರ ಬೆಂಬಲದಿಂದ ಪ್ರಮುಖ ನಾಯಕನಾಗಿ ಹೊರಹೊಮ್ಮಿದ್ದರೆ, ಈ ಬಾರಿ ಸಂಪೂರ್ಣ ವಿರೋಧ ಪಕ್ಷಗಳ ಒಕ್ಕೂಟದ ಮುಖಂಡರಾಗಿ ಸ್ಪರ್ಧಿಸುವ ಮೂಲಕ ಬಿಹಾರ ರಾಜಕೀಯದಲ್ಲಿ ಹೊಸ ಶಕ್ತಿ ಕೇಂದ್ರವಾಗಿ ಹೊರಹೊಮ್ಮುವ ನಿರೀಕ್ಷೆ ವ್ಯಕ್ತವಾಗಿದೆ.








