ಮೈಸೂರು: ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ದುರ್ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ನಾಗಮಂಗಲ ಗ್ರಾಮದ ನಿವಾಸಿ ಜೀವನ್ ಅವರ ಪತ್ನಿ ಅಶ್ವಿನಿ (36) ಮೃತಪಟ್ಟ ದುರ್ದೈವಿ. ಅಶ್ವಿನಿ ಬೈಕ್‌ನ ಹಿಂಬದಿ ಸವಾರರಾಗಿದ್ದರು. ಅಪಘಾತದ ತೀವ್ರತೆಗೆ ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆಯಲ್ಲಿ ಅಶ್ವಿನಿಯ ಪತಿ ಜೀವನ್ ಹಾಗೂ ಅವರ ಮಗು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಣಸೂರು ತಾಲೂಕಿನ ಯಶೋಧರಪುರ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ಜೀವನ್ ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ಬೈಕ್‌ನಲ್ಲಿ ಹುಣಸೂರು ಕಡೆಗೆ ತೆರಳುತ್ತಿದ್ದ ವೇಳೆ, ಪಿರಿಯಾಪಟ್ಟಣ ದಿಕ್ಕಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








