ಹುಬ್ಬಳ್ಳಿಯಲ್ಲಿ ಪಿಯುಸಿ ವಿದ್ಯಾರ್ಥಿಯೊಬ್ಬನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣ ನಗರದಲ್ಲಿ ಆತಂಕ ಮೂಡಿಸಿದೆ.
ನಗರದ ಭೈರಿದೇವರಕೊಪ್ಪ ಪ್ರದೇಶದಲ್ಲಿರುವ ಸಾನಾ ಕಾಲೇಜಿನ ಹಾಸ್ಟೆಲ್‌ನಲ್ಲಿ ಅಯಾನ್ ಸುಂಕದ ಎಂಬ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಹಾಸ್ಟೆಲ್‌ನ ಮೂರನೇ ಮಹಡಿಯ ಕೆಳಭಾಗದಲ್ಲಿ ಅಯಾನ್ ಶವ ಕಂಡುಬಂದಿದ್ದು, ಸಾವಿನ ಕಾರಣದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.
ಮೃತ ಅಯಾನ್ ಸುಂಕದ ಸೈನ್ಸ್ ವಿಭಾಗದಲ್ಲಿ ಪಿಯುಸಿ ಶಿಕ್ಷಣ ಪಡೆಯುತ್ತಿದ್ದನು ಎಂದು ತಿಳಿದುಬಂದಿದೆ. ಆತ ಕೊಪ್ಪಳ ಜಿಲ್ಲೆಯ ಕಮಲೂರು ಮೂಲದವನು ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಯಾನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ವಿದ್ಯಾರ್ಥಿಯ ಸಾವಿನ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.








