ಇಂಫಾಲ: ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದ ಭೀಕರ ಬಾಂಬ್ ದಾಳಿಯಲ್ಲಿ ಇಬ್ಬರು ಪುಟ್ಟ ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೋಯಿರಾಂಗ್ ಟ್ರೊಂಗ್ಲಾವೊಬಿ ಪ್ರದೇಶದ ಮನೆಯೊಂದರ ಮೇಲೆ ಶಂಕಿತ ಉಗ್ರರು ರಾತ್ರಿ 1 ಗಂಟೆ ಸುಮಾರಿಗೆ ಬಾಂಬ್ ಎಸೆದಿದ್ದಾರೆ. ಈ ದಾಳಿಯಲ್ಲಿ 5 ವರ್ಷದ ಬಾಲಕ ಹಾಗೂ ಆರು ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ್ದು, ತಾಯಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯನ್ನು ಖಂಡಿಸಿ ಸ್ಥಳೀಯರು ಭಾರೀ ಪ್ರತಿಭಟನೆ ನಡೆಸಿದರು. ಆಕ್ರೋಶಗೊಂಡ ಪ್ರತಿಭಟನಾಕಾರರು ಪೆಟ್ರೋಲ್ ಬಂಕ್ ಸಮೀಪ ನಿಲ್ಲಿಸಿದ್ದ ಒಂದು ಟ್ರಕ್ ಹಾಗೂ ಎರಡು ತೈಲ ಟ್ಯಾಂಕರ್‌ಗಳಿಗೆ ಬೆಂಕಿ ಹಚ್ಚಿದರು. ಮೋಯಿರಾಂಗ್ ಪೊಲೀಸ್ ಠಾಣೆ ಮುಂದೆ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿ, ಪೊಲೀಸ್ ಚೌಕಿಯನ್ನು ಧ್ವಂಸಗೊಳಿಸಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಮೋಯಿರಾಂಗ್ ಟ್ರೊಂಗ್ಲಾವೊಬಿ ಪ್ರದೇಶವು ಚುರಾಚಂದ್‌ಪುರದ ಗುಡ್ಡಗಾಡು ಪ್ರದೇಶದ ಸಮೀಪದಲ್ಲಿದ್ದು, 2023 ಮತ್ತು 2024ರಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆದ ಜನಾಂಗೀಯ ಸಂಘರ್ಷದ ವೇಳೆ ಈ ಭಾಗದಲ್ಲಿ ಹಲವು ಬಾರಿ ಹಿಂಸಾಚಾರ ನಡೆದಿದೆ. ಮಂಗಳವಾರವೂ ಇದೇ ಪ್ರದೇಶದ ಸಮೀಪ ಮತ್ತೊಂದು ಸ್ಫೋಟಕ ಸಾಧನವನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.
ಸ್ಥಳೀಯ ಎನ್‌ಪಿಪಿ ಶಾಸಕ ಥಾ. ಶಾಂತಿ ಸಿಂಗ್ ಅವರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, “ಇದು ಭಯೋತ್ಪಾದಕರ ಕ್ರೂರ ಕೃತ್ಯ. ಇಂತಹ ಅಮಾನವೀಯ ಘಟನೆಗಳಿಗೆ ಸಮಾಜದಲ್ಲಿ ಯಾವುದೇ ಜಾಗವಿಲ್ಲ” ಎಂದು ಕಿಡಿಕಾರಿದ್ದಾರೆ.ಇದನ್ನು ಓದಿ –ಮಾಜಿ ಅಕೌಂಟೆಂಟ್ ಮನೆ ಮೇಲೆ ಲೋಕಾಯುಕ್ತ ದಾಳಿ
ಮೇ 2023ರಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ ಇದುವರೆಗೆ 260ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.








