ನವದೆಹಲಿ : ಎನ್‌ಡಿಎ ಅಭ್ಯರ್ಥಿ ಹಾಗೂ ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಇಂದು (ಸೆಪ್ಟೆಂಬರ್ 12) ಭಾರತದ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಸೆಪ್ಟೆಂಬರ್ 9ರಂದು ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ 452 ಮತಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಅವರು ಗೆಲುವು ಸಾಧಿಸಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಿದರು. ಬೆಳಗ್ಗೆ 10 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ, ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಪಂಜಾಬ್ ರಾಜ್ಯಪಾಲ ಮತ್ತು ಚಂಡೀಗಢ ಆಡಳಿತಾಧಿಕಾರಿ ಗುಲಾಬ್ ಚಂದ್ ಕಟಾರಿಯಾ, ಜಾರ್ಖಂಡ್ ರಾಜ್ಯಪಾಲ ಸಂತೋಷ್ ಗಂಗ್ವಾರ್ ಹಾಗೂ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ಜಗದೀಪ್ ಧನ್ಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆದ ಈ ಚುನಾವಣೆಯಲ್ಲಿ ರಾಧಾಕೃಷ್ಣನ್ ಸ್ಪರ್ಧಿ ಸುದರ್ಶನ್ ರೆಡ್ಡಿ ವಿರುದ್ಧ ಬಹುಮತ ಪಡೆದರು. ರಾಧಾಕೃಷ್ಣನ್ 452 ಪ್ರಾಥಮಿಕ ಮತಗಳನ್ನು ಗಳಿಸಿದರೆ, ರೆಡ್ಡಿ 300 ಮತಗಳಷ್ಟೇ ಪಡೆದು ಸೋಲು ಕಂಡರು.
ಒಟ್ಟು 788 ಸಂಸದರಲ್ಲಿನ 7 ಸ್ಥಾನಗಳು ಖಾಲಿ ಇರುವುದರಿಂದ 781 ಸಂಸದರು ಮತ ಚಲಾಯಿಸಬೇಕಾಗಿತ್ತು. ಆದರೆ ಬಿಆರ್‌ಎಸ್‌ನ 4, ಬಿಜೆಡಿಯ 7, ಅಕಾಲಿ ದಳದ 3 ಹಾಗೂ ಒಬ್ಬ ಸ್ವತಂತ್ರ ಸಂಸದರು ಮತದಾನದಲ್ಲಿ ಭಾಗವಹಿಸಲಿಲ್ಲ. ಹೀಗಾಗಿ 767 ಸಂಸದರು ಮಾತ್ರ ಮತ ಚಲಾಯಿಸಿದರು. ಇದರಲ್ಲಿ 15 ಮತಗಳು ಅಮಾನ್ಯವಾಗಿದ್ದು, 752 ಮತಗಳನ್ನು ಮಾತ್ರ ಮಾನ್ಯವಾಗಿ ಪರಿಗಣಿಸಲಾಯಿತು.ಇದನ್ನು ಓದಿ –ಶ್ರೀರಂಗಪಟ್ಟಣ-ಕುಶಾಲನಗರ ಹೆದ್ದಾರಿಗೆ ಸರ್ವೀಸ್ ರಸ್ತೆಯ ಭರವಸೆ
ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಿದ ಸಿ.ಪಿ. ರಾಧಾಕೃಷ್ಣನ್ ಇದೀಗ ಭಾರತದ 15ನೇ ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.