ರಾಜ್ಯದಲ್ಲಿ ಹೃದಯಘಾತದಿಂದ ಸಾಯುತ್ತಿರುವವರ ಸಂಖ್ಯೆ ಮತ್ತು ಹೃದಯಾಘಾತದ ಬಗೆಗಿನ ಸುದ್ದಿಗಳು ಸುದ್ದಿ ವಾಹಿನಿಗಳಲ್ಲಿ ಮತ್ತು ಪೇಪರ್ ಗಳಲ್ಲಿ ಬರುತ್ತಿರುವುದು, ಬಹಳಷ್ಟು ಜನ ಅದರ ಕಡೆ ಅತೀ ಹೆಚ್ಚು ಗಮನ ಕೊಡುವ ಹಾಗೆ ಮಾಡಿ ಇಟ್ಟಿದೆ…
ಯಾವುದೋ ಒಂದು ವಿಷಯದ ಬಗ್ಗೆ ನಾವು ಅತಿಯಾಗಿ ಯೋಚಿಸಿದಾಗ, ಅದರ ಕುರಿತಾಗಿನ ಭಯ ನಮ್ಮಲ್ಲಿ ಆವರಿಸಿದಾಗ, ಅದನ್ನು ಫೋಬಿಯ ಅಂತ ಕರೆಯಬಹುದು.ಈ ಹೃದಯಘಾತದ ಸುದ್ದಿಗಳು.. ಬಹಳಷ್ಟು ಸಾಮಾನ್ಯರಲ್ಲಿ ಕಾರ್ಡಿಯೋ ಫೋಬಿಯಾನ ಹುಟ್ಟು ಹಾಕುತ್ತಿವೆ.
ನನಗೂ ಹೃದಯಘಾತ ಆದರೆ ಹೇಗೆ…? ನಾನು ಸತ್ತು ಹೋದರೆ ಹೇಗೆ..? ಅನ್ನುವ ಭಯ…ನನಗೇನಾದ್ರೂ ಆದರೆ ನನ್ನ ಹೆಂಡತಿ ಮತ್ತು ಪುಟ್ಟ ಮಕ್ಕಳ ಅಥವಾ ನನ್ನನ್ನು ಅವಲಂಬಿಸಿರುವ ವೃದ್ಧ ತಂದೆ ತಾಯಿಗಳ ಗತಿ ಏನು ಅಂತ ಮನಸ್ಸಿನ ಮೂಲೆಯಲ್ಲಿ ಒಂದು ಚಿಂತೆ ಶುರುವಾದರೆ ಅವರು ಕಾರ್ಡಿಯೋ ಫೋಬಿಯಾಗೆ ತುತ್ತಾಗುತ್ತಿರುವ ಲಕ್ಷಣ.
ಹೀಗೆ ಯೋಚಿಸುತ್ತಾ ಯೋಚಿಸುತ್ತಾ ಒಂದೆರಡು ರಾತ್ರಿಗಳು ನಿದ್ದೆ ಇಲ್ಲದೆ ಕಳೆದರೆ ಅದೊಂಥರಾ ಆಂಗ್ಸೈಟಿಯಾಗಿ ಹೃದಯದ ಬಡಿತವನ್ನು ಹೆಚ್ಚು ಮಾಡಿ, ನಿದ್ರೆ ಗೇಡು ಮಾಡಿ ನಿಜವಾಗಲೂ ನನ್ನ ಹೃದಯದಲ್ಲಿ ಏನು ಸಮಸ್ಯೆ ಇದೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ನಾನು ಪ್ರಾಣ ಕಳ್ಕೋತೀನಿ, ಅನ್ನುವ ಭಯ ಮನಸ್ಸು ಮತ್ತು ದೇಹವನ್ನು ಆವರಿಸಿಕೊಂಡು ಮನುಷ್ಯ ವಿಚಿತ್ರವಾಗಿ ಬಿಹೇವ್ ಮಾಡುವ ಹಾಗೆ ಮಾಡಿಬಿಡುತ್ತದೆ…
ನಮ್ಮಲ್ಲಿ ಇಲ್ಲದ ಸಮಸ್ಯೆಯ ಬಗ್ಗೆ, ನಾವು ಆರೋಗ್ಯವಾಗಿದ್ದರೂ ಸಹ ಚಿಂತೆಗೆ ಈಡಾದಾಗ ನಾವು ಈ ಫೋಬಿಯಾದ ಕಪಿಮುಷ್ಟಿಗೆ ಸಿಕ್ಕು ಹಾಕೊತ್ತಿವಿ…
ಇದು ಹೃದಯಕ್ಕೆ ಸಂಬಂಧಿಸಿದ ವಿಷಯವಾದ್ದರಿಂದ ಮನೆಯವರು ಅಥವಾ ಗೆಳೆಯರು ಸಮಾಧಾನ ಹೇಳಿದರೆ ನಿನ್ನಲ್ಲಿ ಏನು ಸಮಸ್ಯೆ ಇಲ್ಲ ಆರಾಮಾಗಿರು ಅಂದರು ನಂಬದಂತಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ…
ಹೃದಯಕ್ಕೆ ಸಂಬಂಧಿಸಿದ ಎಲ್ಲ ಟೆಸ್ಟ್ ಗಳನ್ನ ಮಾಡಿಸುವುದು ಮತ್ತು ನುರಿತ ವೈದ್ಯರ ತಪಾಸಣೆಯ ಬಳಿಕ ಅವರ ಸಲಹೆಯನ್ನು ಪಡೆಯುವುದು ಅನಿವಾರ್ಯವಾಗುತ್ತದೆ.. ಸುಮ್ಮನೆ ಮನಸ್ಸಿನ ಮೂಲೆಯಲ್ಲಿ ಆವರಿಸಿದ ಒಂದು ಭಯ ಸಾವಿರಾರು ರೂಪಾಯಿಗಳ ಖರ್ಚನ್ನು ಮಾಡಿಸುವುದು.. ಹಲವಾರು ದಿನಗಳ ಮಟ್ಟಿಗೆ ನಮ್ಮ ಮತ್ತು ಮನೆಯವರ ದುಗುಡವನ್ನು ಹೆಚ್ಚು ಮಾಡಬಹುದು…
ಈ ರೀತಿ ಏನಾದರೂ ಅನ್ನಿಸಿದರೆ ಆಪ್ತರೊಂದಿಗೆ ಗೆಳೆಯರೊಂದಿಗೆ ಹಂಚಿಕೊಳ್ಳುವುದು ಒಳ್ಳೆಯ ಕೆಲಸ..
ಮೊದಮೊದಲು ಫ್ಯಾಮಿಲಿ ಡಾಕ್ಟರ್ ಸಲಹೆಯನ್ನು ಪಡೆಯುವುದು ಉತ್ತಮ.. ಅನಂತರ ಹೃದಯ ತಜ್ಞರು ಮತ್ತು ಮಾನಸಿಕ ತಜ್ಞರ ಭೇಟಿ ಮತ್ತು ಮಾರ್ಗದರ್ಶನ ಅಗತ್ಯ..
ಎಲ್ಲಕ್ಕಿಂತ ಹೃದಯದ ಆರೋಗ್ಯಕ್ಕೆ ಬೇಕಾದ ಆಹಾರ ಮತ್ತು ವ್ಯಾಯಾಮ ಅತ್ಯಗತ್ಯ..
ದಿನಕ್ಕೆ ಆರರಿಂದ ಹತ್ತು ಸಾವಿರ ಹೆಜ್ಜೆಗಳ ವಾಕಿಂಗು…
ಕೊಬ್ಬು /ಸಕ್ಕರೆ ಇರುವ ಆಹಾರದ ಮಿತವಾದ ಸೇವನೆ…
ಸಿಗರೇಟ್ ಮತ್ತು ಮಧ್ಯದಿಂದ ದೂರ ಇರುವುದು..
ವಿಶೇಷವಾಗಿ ಬೆಂಗಳೂರಿನಂತಹ ಸಿಟಿಯಲ್ಲಿ ಟ್ರಾಫಿಕ್ ನಲ್ಲಿ ಟೆನ್ಶನ್ ಮಾಡಿಕೊಳ್ಳದೆ ಸಮಾಧಾನದಿಂದ ಗಾಡಿಯನ್ನು ಓಡಿಸುವ ಅಭ್ಯಾಸ ಮಾಡಿಕೊಳ್ಳುವುದು…
ಯಾರೋ ಗೊತ್ತಿಲ್ಲದ ಹಿಂದೆ ಮುಂದೆ ಬರುವ ಅಷ್ಟಾಗಿ ಡ್ರೈವಿಂಗ್ ಬರೆದ ವಿವೇಚನೆ ಇಲ್ಲದ, ಮತ್ತೊಬ್ಬ ಚಾಲಕನ ಬಗ್ಗೆ ನಾವು ಟೆನ್ಶನ್ ಮಾಡಿಕೊಂಡು, ನಮ್ಮ ಹೃದಯಕ್ಕೆ ಒತ್ತಡವನ್ನು ಕೊಡುವುದನ್ನು ನಾವೇ ತಪ್ಪಿಸಿಕೊಳ್ಳಬೇಕು..
ಯಾಕಂದ್ರೆ ಇರುವುದು ಒಂದೇ ಹೃದಯ
ತಾಯಿ ಹೊಟ್ಟೆಯಲ್ಲಿ ಇರುವಾಗ ಶುರುವಾಗೊ ಹೃದಯದ ಬಡಿತ ನಿಲ್ಲೋದು ನಮ್ಮ ಜೀವನದ ಯಾತ್ರೆ ಮುಗಿದಾಗ.. ರೆಸ್ಟೆ ಇಲ್ಲದೆ ನಮಗೋಸ್ಕರ ಜೀವನ ಪೂರ್ತಿ ದುಡಿಯುವ ಒಂದು ಮುಷ್ಟಿ ಗಾತ್ರದ ಬಲೂನ್ ನಂತಹ ಹೃದಯದ ಬಗ್ಗೆ ನಾವು ತಾನೆ ಕಾಳಜಿ ತೋರಿಸಬೇಕು….
ನಮಗಾಗಿ ನಮ್ಮವರಿಗಾಗಿ ಆರೋಗ್ಯವಾಗಿ ನಾವು ಬದುಕುವುದು ಅನಿವಾರ್ಯ ಯಾಕಂದ್ರೆ ಇದು ಹೃದಯಗಳ ವಿಷಯ.

ಹಯವದನ