- ಸಿಎಂ ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: “ಕನ್ನಡ ಹೋರಾಟಗಾರರ ಮೇಲಿನ ಎಲ್ಲ ಕೇಸುಗಳನ್ನು ವಾಪಸ್ ಪಡೆಯಲಾಗುತ್ತದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಮೈಸೂರು ಬ್ಯಾಂಕ್ ವೃತ್ತದ ನೃಪತುಂಗ ಮಂಟಪದಲ್ಲಿ ಭುವನೇಶ್ವರಿ ಮತ್ತು ಅಣ್ಣಮ್ಮ ದೇವಿಯ ವೈಭವ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, “ವಾಟಾಳ್ ನಾಗರಾಜ್ ಅವರು ಕನ್ನಡಕ್ಕಾಗಿ ಹೋರಾಟದಲ್ಲಿ ರಾಜಿ ಮಾಡಿಕೊಳ್ಳದ ನಿಜವಾದ ಹೋರಾಟಗಾರರು. ದೇವರಾಜ ಅರಸು ಅವರು ಮಂತ್ರಿ ಸ್ಥಾನ ಕೊಡಲು ಕರೆದರೂ ಕನ್ನಡ ಹೋರಾಟ ಬಿಟ್ಟಿಲ್ಲ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ನಮ್ಮ ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ಪ್ರೀತಿ ಮತ್ತು ಅಭಿಮಾನ ಬೆಳೆಸಿಕೊಳ್ಳಬೇಕು. ಯಾರೇ ಯಾವುದೇ ಭಾಷೆಯಲ್ಲಿ ಮಾತನಾಡಿದರೂ, ನಾವು ಕನ್ನಡದಲ್ಲೇ ಉತ್ತರ ಕೊಡಬೇಕು. ಕನ್ನಡ ನೆಲದಲ್ಲಿ ಬದುಕುವ ಪ್ರತಿಯೊಬ್ಬರೂ ಕನ್ನಡದ ಗೌರವ ಕಾಪಾಡಬೇಕು,” ಎಂದು ಕರೆ ನೀಡಿದರು.
ಅವರು ಮುಂದುವರಿದು, “ಮೈಸೂರು ವಿಶ್ವವಿದ್ಯಾಲಯದಿಂದ ದೇವರಾಜ ಅರಸು ಅವರಿಗೆ ಮರಣೋತ್ತರ ಡಾಕ್ಟರೇಟ್ ನೀಡಬೇಕು ಎಂಬ ವಾಟಾಳ್ ನಾಗರಾಜ್ ಮತ್ತು ಸಾ.ರಾ.ಗೋವಿಂದು ಅವರ ಬೇಡಿಕೆಗೆ ಸ್ಪಂದಿಸುತ್ತೇನೆ. ಈ ಬಗ್ಗೆ ಸಿಂಡಿಕೇಟ್ ಸದಸ್ಯರೊಂದಿಗೆ ಚರ್ಚಿಸುತ್ತೇನೆ,” ಎಂದರು.
ದ್ವಿಭಾಷಾ ನೀತಿಗೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ, “ನಾನು ವೈಯುಕ್ತಿಕವಾಗಿ ದ್ವಿಭಾಷಾ ಪರನು. ಆದರೆ ಕಾನೂನಾತ್ಮಕವಾಗಿ ಜಾರಿಗೆ ತರಬೇಕಾದರೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಬೇಕಾಗಿದೆ,” ಎಂದು ಸ್ಪಷ್ಟಪಡಿಸಿದರು.
ಬೆಳಗಾವಿ ವಿಚಾರವಾಗಿ ಅವರು, “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಭಾಗ. ಮಹಾಜನ್ ವರದಿಯೇ ಅಂತಿಮ. ಇದರಲ್ಲಿ ರಾಜಿ ಸಾಧ್ಯವಿಲ್ಲ,” ಎಂದು ಸ್ಪಷ್ಟವಾಗಿ ಹೇಳಿದರು.ಇದನ್ನು ಓದಿ –ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತ ದುರಂತ – 9 ಭಕ್ತರ ದುರ್ಮರಣ
ಸಿಎಂ ಮುಂದುವರಿದು, “ಎಂಇಎಸ್ ನವರೂ ಕನ್ನಡಿಗರೇ. ಆದರೆ ಅವರಲ್ಲಿ ಯಾರಾದರೂ ಪುಂಡಾಟಿಕೆ ಮಾಡಿದರೆ ಸರ್ಕಾರ ಕ್ರಮಕೈಗೊಳ್ಳುತ್ತದೆ. ಗಡಿ ಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ,” ಎಂದು ತಿಳಿಸಿದರು.








