ಬೆಂಗಳೂರು: ಬಿಗ್ ಬಾಸ್ ಸೀಸನ್ 11ರ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ವಿರುದ್ಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ನಟ ವಿನಯ್ ಗೌಡ ಮತ್ತು ರಜತ್ ಕಿಶನ್ ಒಟ್ಟಾಗಿ ಒಂದು ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್‌ನಲ್ಲಿ ವಿನಯ್ ಗೌಡ ಲಾಂಗು ಹಿಡಿದು, ಕೂಲಿಂಗ್ ಗ್ಲಾಸ್ ಧರಿಸಿ ದರ್ಶನ್ ಅವರ ‘ಕರಿಯ’ ಚಿತ್ರದ ಶೈಲಿಯಲ್ಲಿ ಸ್ಲೋ ಮೋಷನ್‌ನಲ್ಲಿ ನಡೆದುಕೊಂಡು ಬರುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇದರಿಂದ ಸಾರ್ವಜನಿಕವಾಗಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಆರೋಪಿಸಿ, ಬಸವೇಶ್ವರ ನಗರ ಠಾಣೆಯ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಈ ರೀಲ್ಸ್ ʻಬುಜ್ಜಿʼ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಲಾಗಿದೆ. ಪೊಲೀಸರು ಈ ವಿಡಿಯೋವನ್ನು ಗಮನಿಸಿ, ಇಬ್ಬರ ವಿರುದ್ಧ ಆರ್ಮ್ಸ್ ಆಕ್ಟ್ ಅಡಿ ಕೇಸ್ ದಾಖಲಿಸಿದ್ದಾರೆ.
ಸಾರ್ವಜನಿಕವಾಗಿ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡುವುದು, ಭಯದ ವಾತಾವರಣ ನಿರ್ಮಿಸುವುದು ಕಾನೂನುಬಾಹಿರವೆಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.