ಬೆಂಗಳೂರು: ರಾಜ್ಯದ ಎಸ್ಎಸ್ಎಲ್ಸಿ (SSLC) ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ 625 ಅಂಕಗಳ ಬದಲು 525 ಅಂಕಗಳಿಗೆ ಪರೀಕ್ಷೆ ನಡೆಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಈ ವರ್ಷದಿಂದ ರಾಜ್ಯ ಪಠ್ಯಕ್ರಮದಲ್ಲಿ ತೃತೀಯ ಭಾಷೆಯನ್ನು ಕಡ್ಡಾಯವಾಗಿ ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ತೃತೀಯ ಭಾಷೆ ಪರೀಕ್ಷೆಯನ್ನು ಬರೆಯಬಹುದು, ಆದರೆ ಅದರ 100 ಅಂಕಗಳನ್ನು ಒಟ್ಟು ಫಲಿತಾಂಶದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದರು.
ತೃತೀಯ ಭಾಷೆಗೆ ಪಾಸ್ ಅಥವಾ ಫೇಲ್ ಪದ್ಧತಿ ಇರದೇ, ಎ, ಬಿ, ಸಿ, ಡಿ ಎಂಬ ಗ್ರೇಡ್ಗಳನ್ನು ನೀಡಲಾಗುತ್ತದೆ. ಹಿಂದಿ ಭಾಷೆಯೂ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದರು. ಈ ನಿರ್ಧಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆ ದೊರೆತಿದೆ ಎಂದು ಹೇಳಿದರು. ಈ ವರ್ಷದಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ಇಂದು ಸಂಜೆ ಒಳಗಾಗಿ ಅಧಿಕೃತ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಉರ್ದು ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ತೃತೀಯ ಭಾಷೆಯಾಗಿ ಕಲಿಸಲಾಗುತ್ತಿದ್ದು, ಕನ್ನಡ ವಿಷಯಕ್ಕೆ ಯಾವುದೇ ಧಕ್ಕೆ ಆಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಇದೇ ವೇಳೆ, ಸಿಬಿಎಸ್ಇ ಹಾಗೂ ಐಸಿಎಸ್ಇ ಪಠ್ಯಕ್ರಮಗಳು ರಾಜ್ಯ ಪಠ್ಯಕ್ರಮಕ್ಕೆ ಒಳಪಡದೇ ಇರುವುದರಿಂದ, ಆ ಶಾಲೆಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.








