ಬೆಂಗಳೂರು, ಏಪ್ರಿಲ್ 2: ನಗರದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಬಕೆಟ್ ನೀರಿನಲ್ಲಿ ಮುಳುಗಿ 11 ತಿಂಗಳ ಮಗು ಸಾವನ್ನಪ್ಪಿದ್ದು, ಮಗುವಿನ ಸಾವಿಗೆ ತಾನೇ ಕಾರಣ ಎಂಬ ಬೇಸರದಿಂದ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ.
ಮೃತರನ್ನು ಸಾಫ್ಟ್‌ವೇರ್ ಉದ್ಯೋಗಿ ಪ್ರತಿಭಾ (29) ಹಾಗೂ ಅವರ ಪುತ್ರ ಅಗಸ್ತ್ಯ ಎಂದು ಗುರುತಿಸಲಾಗಿದೆ. ಪ್ರತಿಭಾ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಗುರುವಾರ ಸಂಜೆ ಟೆರೇಸ್‌ನಲ್ಲಿ ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಮೇಲಕ್ಕೆ ಹೋಗಿದ್ದಾಗ ಈ ದುರಂತ ಸಂಭವಿಸಿದೆ.
ಈ ವೇಳೆ ಮಗು ಆಟವಾಡುತ್ತಾ ಬಚ್ಚಲು ಮನೆಗೆ ಹೋಗಿ, ನೀರಿನಿಂದ ತುಂಬಿದ್ದ ಬಕೆಟ್‌ನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದೆ. ಕೆಳಗೆ ಬಂದ ತಾಯಿಗೆ ಮಗುವಿನ ಸ್ಥಿತಿ ಕಂಡು ಆಘಾತ ಉಂಟಾಗಿದೆ.
ರಾತ್ರಿ ಪತಿ ಮಹಾಂತೇಶ್ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಕೀಲಿಯಿಂದ ಬಾಗಿಲು ತೆರೆಯುತ್ತಿದ್ದಂತೆ ಪ್ರತಿಭಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಗು ಹಾಸಿಗೆಯ ಮೇಲೆ ಇಡಲಾಗಿತ್ತು.
ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್‌ನಲ್ಲಿ ‘ನನ್ನ ಮಗುವಿನ ಸಾವಿಗೆ ನಾನೇ ಕಾರಣ’ ಎಂದು ಬರೆದಿದ್ದು, ಮನೋವ್ಯಥೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.








