” ಹುಟ್ಟಿಸಿದವರು, ಈ ಬದುಕನ್ನು ಕೊಟ್ಟವರು ನೀವಾದರೂ ಪಪ್ಪಾ… ಬದುಕುವ ಆಯ್ಕೆ ನಮ್ಮದಲ್ಲವೇ?”… ಮಗಳ ಪ್ರಶ್ನೆಗೆ ಉತ್ತರಿಸಲಾಗದೆ ತಡಬಡಿಸಿದನಾತ.ಎದೆಯ ಗೂಡಲ್ಲಿರುವ ಪ್ರೀತಿಯ ಹಕ್ಕಿಯೊಂದು ಹಾರಿಹೋಗು ತ್ತಿರುವಂತೆ…ಚಡಪಡಿಕೆ, ಕಸಿವಿಸಿ. ಅವ್ಯಕ್ತ ಭಯ, ನೋವು,ಸಂಕಟ, ಸಂಶಯ… ಇದು ವಯಸ್ಸಿಗೆ ಬಂದ ಹೆಣ್ಣುಮಕ್ಕಳ ಅಪ್ಪಂದಿರಿಗೆ ಇರುವಂತಹದ್ದೇ.ಅದುರು ತ್ತಿರುವ ತುಟಿಗಳಿಂದ ಆಕೆ ಯನ್ನು ಪ್ರಶ್ನಿಸಿದ.’ಆಯ್ಕೆಯ ಮಾತೇಕೆ ಈಗ? ‘
ಸ್ನಾತಕೋತ್ತರ ಪದವೀಧರೆ ಮಗಳು,ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕಲಿಕೆಗೆ ಆಕೆ ಆರಿಸಿಕೊಂಡ ವಸ್ತು ವಿಷಯ ಮತ್ತು ಆ ವಿಭಾಗಕ್ಕೆ ಪ್ರಥಮತಃಳಾಗಿ ಉತ್ತೀರ್ಣ ಳಾಗಿ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿನಿ.
ಪ್ರಸ್ತುತ ನಗರದ ಸರಕಾರಿ ಮಹಾವಿದ್ಯಾಲಯದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿಯನಿರಿಗೆ ಬೋಧನೆ ಮಾಡುತ್ತಿರುವ ಸರಕಾರಿ ಆದೇಶ ಪಡೆದ ಉಪನ್ಯಾಸಕಿ ಯಾಗಿ ಕೆಲಸ ನಿರ್ವಹಿಸು ತ್ತಿದ್ದಾಳೆ…
“ಮದುವೆಯಾಗಬೇಕೆಂದಿ ದ್ದೇನೆ”ಮಗಳ ಮಾತಿಗೆ ತಲೆ ಎತ್ತಿ ನೋಡಿದನಾತ. ‘ಸಂತೋಷ’ ಎಂದನಾತ…
ಈ ಮೊದಲು ಆತ ಮಗಳಲ್ಲಿ ಆಕೆಯ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾಗ, ಅವಳು ಗಟ್ಟಿ ಸ್ವರದಲ್ಲಿ ಖಡಾ ಖಂಡಿತವಾಗಿ ಕಟುವಾಗಿ ಅಂದಿದ್ದಳು.”ಪಪ್ಪಾ.. ಜನ್ಮ ನೀಡಿ ಬೆಳೆಸಿದಿರಿ, ಸಾಕಿ ಸಲಹಿದಿರಿ,ಬುದ್ಧಿ ಹೇಳಿದ್ದೀರಿ, ವಿದ್ಯಾಭ್ಯಾಸ ಕೊಟ್ಟು ನನ್ನನ್ನು ಈ ಹಂತಕ್ಕೆ ತಂದಿದ್ದೀರಿ, ನಿಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ದ್ದೀರಿ.ಈಗ ನಾನು ನನ್ನ ಕಾಲ ಮೇಲೆ ನಾನೇ ನಿಂತುಕೊಳ್ಳು ವವಳಾಗಿದ್ದೇನೆ.ಮದುವೆ ನನ್ನ ವೈಯುಕ್ತಿಕ ವಿಚಾರ. ನನ್ನ ಆಯ್ಕೆ ನನ್ನ ಸ್ವತಂತ್ರ ನಿಲುವು ನಿರ್ಧಾರಗಳಿಗೆ ಬಿಟ್ಟದ್ದು ಎಂಬುದು ನನ್ನ ಭಾವನೆ’
‘ನಿನ್ನ ಭಾವನೆಗಳನ್ನು ಗೌರವಿಸುವೆ ಮಗಳೇ…’
‘ಗೌರವಿಸಲೇಬೇಕಲ್ಲವೇ ಪಪ್ಪಾ… ಅಪ್ಪನಾಗಿ ನಿಮ್ಮ ಕರ್ತವ್ಯ ಪಾಲಿಸಿ ನನ್ನ ನ್ನೊಂದು ಸ್ಥಾನಕ್ಕೆ ತಂದಿರಿ.ಈ ಮಟ್ಟಕ್ಕೆ ಏರಿಸಿದಿರಿ. ಏರಿಸಲೆ ಬೇಕಾದವರಾಗಿದ್ದೀರಿ ನೀವು. ನನ್ನ ಕಾಪಾಡಿದಿರಿ, ಕಾಪಾಡ ಬೇಕಿತ್ತು ಕೂಡಾ… ಇನ್ನು ನಮ್ಮ ದಾರಿ ನಮಗೆ… ಈ ಬಾಳು ನಾವು ಬಯಸಿದಂತೆ… ಪಪ್ಪಾ ನಿಮ್ಮಲ್ಲಿ ನಾನು ಅಂದೇ ಹೇಳಿದ್ದೆ… ನನ್ನ ಬಾಳ ಸಂಗಾತಿ ನನ್ನ ಆಯ್ಕೆ, ನನ್ನ ಸ್ವಾತಂತ್ರ್ಯ… ಅಲ್ಲಿ ಯಾರೂ ಮೂಗು ತೂರಿಸು ವಂತಿಲ್ಲ.ನಾನು ಇಷ್ಟಪಟ್ಟ ವನನ್ನು, ನನ್ನ ಮನಸ್ಸು ಆರಿಸಿಕೊಂಡವನನ್ನು ಮದುವೆಯಾಗುವವಳು ನಾನು. ಆತ ಉದ್ಯಮಿಯಾಗಿ ರಲಿ,ಭಿಕ್ಷುಕನಾಗಿರಲಿ, ಕುಂಟನಾಗಿರಲಿ, ಕುರುಡನಾ ಗಿರಲಿ,ಕಿವುಡನಾಗಿರಲಿ, ಮೂಗನಾಗಿರಲಿ… ಬಡವನಾಗಿರಲಿ, ಶ್ರೀಮಂತನಾಗಿರಲಿ… ನಾನವನನ್ನೇ ಮದುವೆಯಾಗೋಳು…’
‘ನೀನೂ ನಿನ್ನ ಅಮ್ಮನ ಹಾದಿ ಹಿಡಿಯುವವಳೇ… ನೂಲಿನಂತೆ ಸೀರೆ, ತಾಯಿಯಂತೆ ಮಗಳು…’
‘ತಪ್ಪೇನು? ನಾನೂ ಓಡಿಹೋಗುವವಳೇ…’ ಅವಳ ಪ್ರಶ್ನೆಗೆ, ಅದರೊಂದಿಗಿನ ಅವಳ ಉತ್ತರಕ್ಕೆ ಕಕ್ಕಾವಿಕ್ಕಿ ಯಾಗಿದ್ದಾನಾತ. ತಳಮಳ ಕಳವಳಕ್ಕೆ ಈಡಾಗಿದ್ದ.ಆತ ತನ್ನ ಕೆಲಸದಿಂದ ನಿವೃತ್ತಿಯಾದ ದಿನವೇ ಅವನ ಹೆಂಡತಿ, ಇವಳ ಅಮ್ಮ ಆ ಮನೆಗೆ ಕಾರು ಚಾಲನೆಯನ್ನು ಕಲಿಸಲು ಬರುತಿದ್ದವ ನೊಂದಿಗೆ, ಅವರ ಕಾರಿಗೆ ಚಾಲಕನಾದವನೊಂದಿಗೆ ಓಡಿಹೋಗಿದ್ದಳು… ಆತನನ್ನೂ, ಆತನ ಮಗಳನ್ನೂ ನಡುನೀರಿನಲ್ಲಿ ಕೈಬಿಟ್ಟು…
‘ಪಪ್ಪಾ.. ನನ್ನ ಪ್ರಕಾರ ನಮ್ಮ ಅಮ್ಮ ಮಾಡಿದ್ದು ಸಮಾಜದ ರೀತಿ ರಿವಾಜುಗಳಿಗೆ ಸಂಬಂಧಿಸಿದಂತೆ ಸರಿಯಲ್ಲದೆ ಇರಬಹುದು.ಆದರೆ ಅದು ತಪ್ಪು ಅಲ್ಲ…’
ಮಗಳ ಮಾತು ಅಪ್ಪನನ್ನು ಪಾತಾಳಕ್ಕೆ ತಳ್ಳಿದಂತಿತ್ತು.
“ಪಪ್ಪಾ ನಾನು ಮದುವೆ ಯಾಗುವಾತ ಕೂಡ ಬಸ್ಸು ಚಾಲಕನೇ… ನಾನು ವಿಶ್ವವಿದ್ಯಾನಿಲಯಕ್ಕೆ ಹೋಗುವಾಗ ಬಸ್ಸಿನಲ್ಲೇ ಪರಿಚಯವಾದಾತ… ಜಾತಿ ಬೇರೆ… ವಿದ್ಯಾಭ್ಯಾಸ ಕಡಿಮೆ.. ವಯಸ್ಸು ಸ್ವಲ್ಪ ಹೆಚ್ಛೇ…
ದಿನಗೂಲಿಯಾತ,ತಂದೆಯಿ ಲ್ಲ,ತಾಯಿ ಜೊತೆಯಿರುವಾತ, ನನ್ನನ್ನು ಪ್ರೀತಿಯಿಂದ ನೋಡಿ ಕೊಳ್ಳಬಲ್ಲ.. ಅವನನ್ನೇ ಮದುವೆಯಾಗುತ್ತೇನೆ. ಅವನೊಂದಿಗೆ ದಾಂಪತ್ಯ, ಸಂಸಾರ ಮಾಡುತ್ತೇನೆ. ನನ್ನಕ್ಕಿಂತ ಹತ್ತು ವರುಷ ದೊಡ್ಡವನು.. ಆದರೆ ನನ್ನನ್ನು ಅರ್ಥಮಾಡಿಕೊಂಡಿರುವವನು. ನನ್ನನ್ನು ಸಂತೋಷದಿಂದ ಬಾಳಿಸಬಲ್ಲ ಎಂಬ ನಂಬಿಕೆ ಯನ್ನು ಹುಟ್ಟುಹಾಕಿದವನು.”
ಮಗಳ ಮಾತಿಗೆ ಅಪ್ಪನ ಕಣ್ಣಿಂದ ಕಣ್ಣೀರು ಧಾರೆಯಾಗುರುಳಿತು.
“ಮಗಳೇ… ಈ ಮದುವೆ ಬೇಕೇ? ಕೇಳಲಾರೆ ನಿನ್ನಲ್ಲಿ.
ಮಗಳೇ… ಈ ಮದುವೆ ಬೇಡ ಎಂದು ಹೇಳಲಾರೆ ನಿನ್ನಲ್ಲಿ. ಯಾಕೆಂದರೆ ನೀನು ಯಾವುದು ಸರಿ? ಯಾವುದು ತಪ್ಪು? ಏನನ್ನು ಮಾಡಬೇಕು? ಏನನ್ನು ಮಾಡಬಾರದು? ಎಂಬ ಅರಿವು ತಿಳುವಳಿಕೆ ಬುದ್ಧಿ ಇರುವವಳು… ಮಗಳೇ ಈ ಗಂಡು, ಈ ಮದುವೆ ನನಗಿಷ್ಟವಿಲ್ಲವಾದರೂ ನಾನು ನಿನ್ನ ಭಾವನೆಗಳನ್ನು, ಮತ್ತು ನಿಮ್ಮ ನಡುವಿನ ಪ್ರೀತಿಯನ್ನು ಗೌರವಿಸುತ್ತೇನೆ. ಉಳಿದಂತೆ ನಿಮ್ಮ ಹಣೆಬರಹ ದಲ್ಲೇನಿದೆ ಯೋ ಅದೇ ನಡೆಯುತ್ತೆ… ಅಪ್ಪನಾಗಿ ನಾನು ನನ್ನ ಜವಾಬ್ದಾರಿಯನ್ನು ನೆರವೇರಿ ಸಿದ್ದಾಗಿದೆ. ಆದರೆ ಈ ಮದುವೆಯ ವಿಷಯದಲ್ಲಿ ನಾನು ಒಪ್ಪಿದರೂ, ಒಪ್ಪದಿ ದ್ದರೂ ನಿನ್ನ ನಿಲುವೇ ಅಂತಿಮ. ಮಗಳೇ… ನಿನ್ನ ಮದುವೆಯ ವಿಷಯದಲ್ಲಿ ನನಗೆ ನೀನು ಯಾವುದೇ ಜವಾಬ್ದಾರಿ ಅಧಿಕಾರ ನೀಡಿಲ್ಲ.. ಎಂಬುದನ್ನು ಮನಗಂಡಿದ್ದೇನೆ.”
ಮಗಳೇ… ನಿನ್ನ ಬದುಕು ನಿನ್ನದು. ನೀನೇ ಅದರ ರೂವಾರಿ. ಈ ಕಾಲಘಟ್ಟದಲ್ಲಿ ನಾನದನ್ನು ಒಪ್ಪಿಕೊಳ್ಳದೆ ವಿಧಿಯಿಲ್ಲ.ನಿನ್ನ ಭಾವನೆಗಳನ್ನು ಗೌರವಿಸಿದ್ದೇನೆ. ನಿಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಪ್ರೀತಿಗಿಂತ ಬದುಕು ಮುಖ್ಯ ಅನಿಸುತ್ತಿದೆ ಮಗಳೇ… ಪ್ರೀತಿ ಎರಡು ಹೃದಯ, ಎರಡು ಜೀವ, ಎರಡು ಮನಸುಗಳಿಗೆ ಸಂಬಂಧಿಸಿದ್ದು. ಆದರೆ ನಮ್ಮ ಬದುಕು ಎಷ್ಟು ಮಂದಿಗೆ ಸಂಬಂಧಿಸಿಲ್ಲ… ಸಮಾಜಕ್ಕೆ ಏನೆಂದು ಉತ್ತರಿಸೋಣ?ಆದರೂ ಒಪ್ಪಿಕೊಳ್ಳುತ್ತೇನೆ…ಈ ಪ್ರೀತಿ, ಈ ಬಡಿಕು ನಿನ್ನ ಆಯ್ಕೆ, ನಿನ್ನ ಸ್ವಾತಂತ್ರ್ಯ, ನಿನ್ನ ನಿರ್ಧಾರ… “
ಆತ ತಲೆ ತಗ್ಗಿಸಿ ಮಾತಾಡು ತಿದ್ದವ “ಮಗಳೇ… ನನ್ನವಳು, ನಿನ್ನಮ್ಮ ಕಾರು ಚಾಲಕ ನೊಂದಿಗೆ ಓಡಿಹೋದಳು. ಮಗಳು ಜಾತಿ ಮತ ಅಂತಸ್ತು ಪ್ರತಿಷ್ಠೆಗಳೆಲ್ಲವ ಬಿಟ್ಟು ಬಸ್ಸು ಚಾಲಕನೊಂದಿಗೆ ಓಡಿ ಹೋಗಲು ತುದಿಗಾಲಲ್ಲಿ ನಿಂತಿರುವವಳು.”
“ಅವನಿಲ್ಲದೆ ನಾನಿಲ್ಲ ಪಪ್ಪಾ”
” ನೀನಿಲ್ಲದೆ ನಾನು ಹೇಗಿರಲಿ ಮಗಳೇ ಈ ನೋವು, ಅವಮಾನ ಸಹಿಸಿಕೊಂಡು…? ನಿನ್ನಮ್ಮನ ಬಗ್ಗೆ, ನಿನ್ನ ಬಗ್ಗೆ ಪ್ರಶ್ನಿಸುವವರಿಗೆ ನಾನೇನು ಉತ್ತರ ಕೊಡಲಿ ಮಗಳೇ? “
ಒಂದು ವಿಷಯ ತಿಳಿದುಕೋ ನಮ್ಮಿಬ್ಬರ ನಡುವೆ ಬಂದ ಆತ್ಮಹತ್ಯೆಯ ಬಗೆಗಿನ ಆಲೋಚನೆಗಳಿಗೆ ಯಾವುದೇ ಮಹತ್ವ, ಕಾವು ಇಲ್ಲ..ಅದು ಜೀವನ್ಮುಖಿ ಧೋರಣೆಯಲ್ಲ. ಮತ್ತದು ಪರಿಹಾರವೂಅಲ್ಲ… ಇಬ್ಬರ ನಡುವಿನ ಪ್ರೀತಿಗಿಂತ ಸಮಾಜದಲ್ಲಿ ಬಾಳುವ ಆ ಇಬ್ಬರ ಬದುಕೇ ದೊಡ್ಡದು. ಕಾಲ ಹೀಗಿದೆ.
ಜೀವನ ಸಾಂಸಾರಿಕ ಬದುಕೇನೋ ನಡೆಯುತ್ತಿದೆ…ಎಲ್ಲರ ಅಸಮಾಧಾನ ಅಸಹನೆ ತಿರಸ್ಕಾರಗಳ ನಡುವೆ. ಆದರೆ ಅವನು… ಅವನು ಮಾತ್ರ ವೃದ್ಧಾಶ್ರಮ ಸೇರಿಕೊಂಡಿದ್ದಾನೆ… ತನ್ನ ಸಾವಿನ ದಿನಕ್ಷಣಕ್ಕಾಗಿ ಕಾಯುತ್ತಿದ್ದಾನೆ… ಆತ ತನ್ನ ಬಾಳ ಸಂಜೆಯಲ್ಲಿ ಹೆಂಡತಿ ಮಗಳು ಹೀಗೆ ಬಣ್ಣ ಬದಲಿಸಿಕೊಳ್ಳುತ್ತಾರೆ ಎಂದುಕೊಂಡಿರಲೇ ಇಲ್ಲ.

ಶ್ರೀಜಿತ್








