- ಫೆಬ್ರವರಿ 1ರಿಂದ ಹೊಸ ತೆರಿಗೆ–ಸೆಸ್ ಜಾರಿ
ನವದೆಹಲಿ: ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳು ಮತ್ತು ಪಾನ್ ಮಸಾಲಾ ಮೇಲೆ ಹೊಸ ತೆರಿಗೆ ವ್ಯವಸ್ಥೆ ಜಾರಿಯಾಗಲಿದೆ. ಇದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಸಿಗರೇಟ್, ಬೀಡಿ, ತಂಬಾಕು, ಪಾನ್ ಮಸಾಲಾ ಸೇರಿದಂತೆ ಹಲವು ಉತ್ಪನ್ನಗಳು ಮತ್ತಷ್ಟು ದುಬಾರಿಯಾಗಲಿವೆ.
ಅಧಿಸೂಚನೆ ಪ್ರಕಾರ, ತಂಬಾಕು ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಹೊಸ ಸೆಸ್ ವಿಧಿಸಲಾಗುತ್ತದೆ. ಈ ಹೊಸ ತೆರಿಗೆಗಳು ಈಗಿರುವ ಪರಿಹಾರ ಸೆಸ್‌ಗೆ ಬದಲಾಗಿ ಜಾರಿಯಾಗಲಿದ್ದು, ಜಿಎಸ್‌ಟಿ ದರಕ್ಕಿಂತ ಹೆಚ್ಚಿನ ಭಾರವನ್ನು ಗ್ರಾಹಕರ ಮೇಲೆ ಬೀರುತ್ತವೆ.
ಫೆಬ್ರವರಿ 1ರಿಂದ ಪಾನ್ ಮಸಾಲಾ, ಸಿಗರೇಟ್, ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳಿಗೆ ಶೇ.40ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಬೀಡಿಗಳಿಗೆ ಶೇ.18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಪಾನ್ ಮಸಾಲಾ ಉತ್ಪನ್ನಗಳ ಮೇಲೆ ‘ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್’ ವಿಧಿಸಲಾಗುವುದು. ತಂಬಾಕು ಮತ್ತು ಅದರ ಉಪ ಉತ್ಪನ್ನಗಳಿಗೆ ಹೆಚ್ಚುವರಿ ಅಬಕಾರಿ ಸುಂಕ ಜಾರಿಯಾಗಲಿದೆ.
ಈ ಹಿನ್ನೆಲೆಯಲ್ಲಿ ಬುಧವಾರ ಹಣಕಾಸು ಸಚಿವಾಲಯವು ‘ಚೂಯಿಂಗ್ ತಂಬಾಕು, ಜರ್ದಾ, ಸುಗಂಧಿತ ತಂಬಾಕು ಹಾಗೂ ಗುಟ್ಕಾ ಪ್ಯಾಕಿಂಗ್ ಯಂತ್ರಗಳ (ಸಾಮರ್ಥ್ಯ ನಿರ್ಧಾರ ಮತ್ತು ಸುಂಕ ಸಂಗ್ರಹ) ನಿಯಮಗಳು–2026’ ಕುರಿತ ಅಧಿಸೂಚನೆಯನ್ನು ಪ್ರಕಟಿಸಿದೆ.ಇದನ್ನು ಓದಿ -68 ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ–ಮುಂಬಡ್ತಿ
ಡಿಸೆಂಬರ್‌ನಲ್ಲಿ ಸಂಸತ್ತು ಪಾನ್ ಮಸಾಲಾ ಉತ್ಪಾದನೆಯ ಮೇಲೆ ಹೊಸ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸುವುದಕ್ಕೂ, ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಜಾರಿಗೆ ಅವಕಾಶ ನೀಡುವ ಎರಡು ಮಸೂದೆಗಳನ್ನು ಅಂಗೀಕರಿಸಿತ್ತು. ಈ ಹಿನ್ನೆಲೆ ಇದೀಗ ಹೊಸ ತೆರಿಗೆ ವ್ಯವಸ್ಥೆ ಫೆಬ್ರವರಿ 1ರಿಂದ ಜಾರಿಗೆ ಬರಲಿದೆ.








