ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 20 ಮತ್ತು 21ರಂದು ಮೈಸೂರಿನಲ್ಲಿ ಎರಡು ದಿನಗಳ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಹಲವು ಸಾರ್ವಜನಿಕ ಕಾರ್ಯಕ್ರಮಗಳು, ಸಭೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ನವೆಂಬರ್ 20ರಂದು ಮಧ್ಯಾಹ್ನ 3.20ಕ್ಕೆ ಅವರು ಮೈಸೂರಿಗೆ ಆಗಮಿಸಲಿದ್ದು, ಆಗಮನದ ನಂತರ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ .
ನವೆಂಬರ್ 21ರಂದು ಬೆಳಿಗ್ಗೆ 10.30ಕ್ಕೆ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ನಡೆಯಲಿರುವ ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ಪ್ರಥಮ ವಾರ್ಷಿಕೋತ್ಸವದಲ್ಲಿ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಇದೇ ವೇದಿಕೆಯಲ್ಲಿ ‘ಡಿ. ದೇವರಾಜ ಅರಸು’ ಹಾಗೂ ‘ಎಲ್.ಜಿ. ಹಾವನೂರು’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ನಡೆಯಲಿದ್ದು, ಸಿಎಂ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲು ಹಾಜರಾಗಲಿದ್ದಾರೆ.
ಅನಂತರ ಮಧ್ಯಾಹ್ನ 3.30ಕ್ಕೆ ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಶ್ರಮದ ಸಾಧನೆಗಳು, ಸೇವಾ ಚಟುವಟಿಕೆಗಳು ಮತ್ತು ಶತಮಾನೋತ್ಸವದ ವಿಶೇಷ ಕಾರ್ಯಕ್ರಮಗಳು ಸಿಎಂ ಅವರ ಸಮ್ಮುಖದಲ್ಲಿ ನಡೆಯಲಿವೆ.
ಸಂಜೆ 6 ಗಂಟೆಗೆ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿರುವ ವಿಜ್ಞಾನ ಭವನದಲ್ಲಿ ಪಿ. ಮಲ್ಲೇಶ್ ಅವರ ಕೃತಿಗಳ ಇಂಗ್ಲಿಷ್ ಅನುವಾದಿತ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಅವರು ಭಾಗವಹಿಸಲಿದ್ದಾರೆ. ನಂತರ ರಾತ್ರಿ ಅವರು ಬೆಂಗಳೂರಿಗೆ ಮರಳಲಿದ್ದಾರೆ.ಇದನ್ನು ಓದಿ –31 ಕೃಷ್ಣಮೃಗಗಳ ಸಾವು: HS ಬ್ಯಾಕ್ಟೀರಿಯಾ ಕಾರಣವೆಂದು ದೃಢ
ಮೈಸೂರು ಜಿಲ್ಲೆಯಲ್ಲಿ ನಡೆಯಲಿರುವ ಈ ಎರಡು ದಿನಗಳ ಪ್ರವಾಸವು ಸರ್ಕಾರದ ಹಲವು ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಮುಖವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








