‘ಕಾಮಿಡಿ ಕಿಲಾಡಿ’ ಸೀಸನ್ 3ರ ವಿಜೇತ ಹಾಗೂ ಕನ್ನಡ ಕಿರುತೆರೆಯಲ್ಲಿ ತನ್ನದೇ ಛಾಪು ಮೂಡಿಸಿದ್ದ ಜನಪ್ರಿಯ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಅಕಾಲಿಕವಾಗಿ ನಿಧನರಾಗಿದ್ದಾರೆ.
ಉಡುಪಿ ಮೂಲದ 34 ವರ್ಷದ ರಾಕೇಶ್ ಪೂಜಾರಿ, ಸೋಮವಾರ ಬೆಳಿಗ್ಗೆ 3:30ರ ಸುಮಾರಿಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಿನ್ನೆ ರಾತ್ರಿ ಅವರು ಕಾರ್ಕಳದ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ್ದರು. ಅದಕ್ಕೂ ಮುನ್ನ ‘ಕಾಂತಾರ ಪ್ರೀಕ್ವೆಲ್’ ಶೂಟಿಂಗ್‌ನಲ್ಲಿಯೂ ಭಾಗವಹಿಸಿದ್ದರು.
ಕಾರ್ಯಕ್ರಮದ ವೇಳೆ ಸ್ನೇಹಿತರೊಂದಿಗೆ ಇದ್ದಾಗ ರಾಕೇಶ್ ಹೃದಯಾಘಾತಕ್ಕೆ ಒಳಗಾದರು. ಅಲ್ಲದೆ ಅವರಿಗೆ ಲೋ ಬಿಪಿಯ ಸಮಸ್ಯೆಯೂ ಕಾಣಿಸಿಕೊಂಡಿತ್ತು ಎಂದು ಮೂಲಗಳು ತಿಳಿಸುತ್ತವೆ. “ಸುಸ್ತಾಗುತ್ತಿದೆ” ಎಂದು ಅವರು ಸ್ನೇಹಿತರಿಗೆ ತಿಳಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ರಾಕೇಶ್ ಪೂಜಾರಿ ಇತ್ತೀಚೆಗೆ ‘ದಸ್ತಕ್’ ಸಿನಿಮಾ ಪ್ರೀಮಿಯರ್ ಶೋದಲ್ಲಿಯೂ ಭಾಗಿಯಾಗಿದ್ದರು. ಕೆಲ ದಿನಗಳ ಹಿಂದೆ ವಾಹನ ಅಪಘಾತವೊಂದು ಸಂಭವಿಸಿದ್ದರೂ, ಅವರಿಗೆ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಗಳಿರಲಿಲ್ಲ ಎಂದು ಮೂಲಗಳು ತಿಳಿಸುತ್ತವೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಕೇಶ್, ಕಾರ್ಕಳದ ಹೂಡೆ ನಿವಾಸಿಗಳಾದ ದಿನಕರ್ ಪೂಜಾರಿ ಮತ್ತು ಶಾಂಭವಿ ದಂಪತಿಗಳ ಪುತ್ರ. ಅವರು ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಕೆಮ್ಮಣ್ಣು ಕಾರ್ಮೆಲ್ ಹೈಸ್ಕೂಲ್ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಪಡೆದಿದ್ದರು.
ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲದೆ, ಪೈಲ್ವಾನ್, ಇದು ಎಂತ ಲೋಕವಯ್ಯ, ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೊಕ್ಕೆಲ್ ತುವಳು ನಾಟಕಗಳಲ್ಲಿಯೂ ಅವರು ಅಭಿನಯಿಸಿ ಗಮನ ಸೆಳೆದಿದ್ದರು.ಇದನ್ನು ಓದಿ –ಆಪರೇಷನ್ ಸಿಂಧೂರ ಮುಂದುವರಿಯಲಿದೆ
ಅಭಿನಯ ಮತ್ತು ಹಾಸ್ಯದಲ್ಲಿನ ತಮ್ಮ ವಿಶಿಷ್ಟ ಶೈಲಿಯಿಂದ ಜನಮನ ಗೆದ್ದಿದ್ದ ರಾಕೇಶ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ನಟಿ ರಕ್ಷಿತಾ ಪ್ರೇಮ್ ತಮ್ಮ ಇನ್‌ಸ್ಟಾಗ್ರಾಂದ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.