ನವದೆಹಲಿ, ಏಪ್ರಿಲ್ 1: ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮವಾಗಿ ಜಾಗತಿಕ ತೈಲ ಬೆಲೆ ಏರಿಕೆಯಾಗಿರುವ ಹಿನ್ನೆಲೆ, ವಾಣಿಜ್ಯ ಬಳಕೆಯ LPG ಸಿಲಿಂಡರ್ ದರದಲ್ಲಿ ಇಂದಿನಿಂದ ₹195.50 ಹೆಚ್ಚಳ ಮಾಡಲಾಗಿದೆ.
ಇದರಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮಿಗಳಿಗೆ ಮತ್ತೊಂದು ಹೊರೆ ಎದುರಾಗಿದೆ.
ಮಾರ್ಚ್ 1ರಂದು 19 ಕೆ.ಜಿ. ಸಿಲಿಂಡರ್ ದರವನ್ನು ₹114.5 ಹೆಚ್ಚಿಸಲಾಗಿತ್ತು. ಇದೀಗ ಮತ್ತೊಮ್ಮೆ ದರ ಏರಿಕೆಯಾಗಿರುವುದು ಉದ್ಯಮಿಗಳಿಗೆ ಸಂಕಷ್ಟವನ್ನು ಹೆಚ್ಚಿಸಿದೆ. ಯುದ್ಧದ ಪರಿಣಾಮವಾಗಿ ಭಾರತಕ್ಕೆ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, LPG ಸರಬರಾಜು ಕೂಡ ಅಸ್ತವ್ಯಸ್ತವಾಗಿದೆ.
ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಾಗತಿಕ ತೈಲ ಬೆಲೆ ಸುಮಾರು 50%ವರೆಗೆ ಏರಿಕೆಯಾಗಿದೆ. ಹೋರ್ಮುಜ್ ಸಮುದ್ರ ಮಾರ್ಗದ ಮೂಲಕ ಸಾಗುವ ತೈಲ ಸಾಗಾಟಕ್ಕೂ ಅಡ್ಡಿಯಾಗಿದೆ. ಈ ಮಾರ್ಗದಿಂದ ವಿಶ್ವದ ಸುಮಾರು ಐದನೇ ಭಾಗದ ತೈಲ ಸಾಗಾಟವಾಗುವುದರಿಂದ ಜಾಗತಿಕ ಮಾರುಕಟ್ಟೆ ಮೇಲೆ ದೊಡ್ಡ ಪರಿಣಾಮ ಬೀರಿದೆ.
ಪ್ರತಿ ತಿಂಗಳ ಮೊದಲ ದಿನದಂದು ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ವಿನಿಮಯ ದರ ಆಧರಿಸಿ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು LPG ದರಗಳನ್ನು ಪರಿಷ್ಕರಿಸುತ್ತವೆ. ಅದೇ ರೀತಿ ಇಂದಿನಿಂದ ಹೊಸ ದರ ಜಾರಿಗೆ ಬಂದಿದೆ.ಇದನ್ನು ಓದಿ –ಗ್ಯಾಸ್ ಸಮಸ್ಯೆ ಪರಿಣಾಮ: ಹಾಲಿನ ದರ ಹೆಚ್ಚಳ ಸಾಧ್ಯತೆ
ನಗರವಾರು ಹೊಸ ದರಗಳು:
ದೆಹಲಿ – ₹2078.50
ಕೊಲ್ಕತ್ತಾ – ₹2208.00
ಮುಂಬೈ – ₹2031.00
ಚೆನ್ನೈ – ₹2246.50
ಗೃಹ ಬಳಕೆಯ 14.2 ಕೆ.ಜಿ. LPG ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.








