ಬೆಂಗಳೂರು: ರಾಜ್ಯದಲ್ಲಿ ಕ್ಯಾನ್ಸರ್ ಪೀಡಿತರಿಗೆ ಸುಲಭ ಮತ್ತು ಸಮರ್ಪಕ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ, 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳು ಆರಂಭವಾಗಲಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಘೋಷಿಸಿದ್ದಾರೆ.
ವಿಕಾಸ ಸೌಧದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರತಿಯ ವರ್ಷದಂತೆ ಸುಮಾರು 70,000 ಕ್ಯಾನ್ಸರ್ ಪ್ರಕರಣಗಳು ರಾಜ್ಯದಲ್ಲಿ ದೃಢಪಟ್ಟಿವೆ. ಹೆಚ್ಚಿನ ರೋಗಿಗಳು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಅಥವಾ ಇತರ ಹೆಚ್ಚಿನ ಮಟ್ಟದ ಆಸ್ಪತ್ರೆಗಳಿಗೆ ಪ್ರಯಾಣ ಮಾಡಬೇಕಾಗುತ್ತದೆ. ಇದು ಬಡವರಿಗೆ ಹೆಚ್ಚು ಹೊರೆ ತಂದಿದೆ. ಆದ್ದರಿಂದ, ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಕೀಮೋಥೆರಪಿ ಕೇಂದ್ರಗಳು ಪ್ರಾರಂಭವಾಗುತ್ತವೆ,” ಎಂದು ತಿಳಿಸಿದರು.
ಇವು ಡೇ ಕೇರ್ ಕೇಂದ್ರಗಳು ಆಗಿದ್ದು, ರೋಗಿಗಳು ದಿನಚಿಕಿತ್ಸೆ ಪಡೆದು ಮನೆಗೆ ಮರಳಬಹುದು. ಪ್ರತಿ ಆಸ್ಪತ್ರೆಯಲ್ಲಿ 10 ಹಾಸಿಗೆಗಳು ಮೀಸಲಾಗಿದ್ದು, ನರ್ಸ್‌ಗಳಿಗೆ ಮತ್ತು ವೈದ್ಯರಿಗೆ ಅಗತ್ಯ ತರಬೇತಿ ನೀಡಲಾಗಿದೆ. ಬಿಪಿಎಲ್ ಕುಟುಂಬಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ.
ಮೆಡಿಕಲ್ ಅಂಕಾಲಜಿಸ್ಟ್‌ಗಳ ನೇಮಕ, ನರ್ಸಿಂಗ್ ಸಿಬ್ಬಂದಿಗೆ ವಿಶೇಷ ತರಬೇತಿ, ಮತ್ತು ಹಾಸಿಗೆ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. “ಪ್ರಯಾಣ ವೆಚ್ಚ, ಸಮಯ ಮತ್ತು ಆಯಾಸ ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ,” ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಮೈಸೂರಿನಲ್ಲಿ ನಾಳೆ ಈ ಯೋಜನೆಯ ಉದ್ಘಾಟನೆ ಮಾಡುವರು.
ಡೇ ಕೇರ್ ಕೀಮೋಥೆರಪಿ ಕೇಂದ್ರಗಳು ಕಾರ್ಯನಿರ್ವಹಿಸಲಿರುವ ಆಸ್ಪತ್ರೆಗಳು:
- ಇನ್-ಹೌಸ್, ವಿಜಯಪುರ
- ಇನ್-ಹೌಸ್, ಉಡುಪಿ
- ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಳ್ಳಾರಿ
- ಹೆಚ್‌ಸಿಜಿ ಆಸ್ಪತ್ರೆ, ಧಾರವಾಡ
- ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಚಿತ್ರದುರ್ಗ
- ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿಜಯನಗರ
- ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹಾವೇರಿ
- ಸಂಜೀವಿನಿ ಆಸ್ಪತ್ರೆ, ಬೆಂಗಳೂರು ಗ್ರಾಮಾಂತರ
- ಸಂಜೀವಿನಿ ಆಸ್ಪತ್ರೆ, ರಾಮನಗರ
- ಸಿ.ವಿ.ರಾಮನ್ ಆಸ್ಪತ್ರೆ, ಬೆಂಗಳೂರು ನಗರ
- ಕೆಎಂಸಿ, ಮಂಗಳೂರು (ದಕ್ಷಿಣ ಕನ್ನಡ)
- ಕಿದ್ವಾಯಿ ಆಸ್ಪತ್ರೆ, ಮೈಸೂರು
- ಸಿದ್ಧಾರ್ಥ ಮೆಡಿಕಲ್ ಕಾಲೇಜು, ತುಮಕೂರು
- ಆರ್.ಎಲ್.ಜಾಲಪ್ಪ ಮೆಡಿಕಲ್ ಕಾಲೇಜು ಆಸ್ಪತ್ರೆ, ಕೋಲಾರ
- ನಿಜಲಿಂಗಪ್ಪ ಮೆಡಿಕಲ್ ಕಾಲೇಜು ಆಸ್ಪತ್ರೆ, ಬಾಗಲಕೋಟೆ
ಇದನ್ನು ಓದಿ –ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ: ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ
ಕೋವಿಡ್ ಬಗ್ಗೆ ಸ್ಪಷ್ಟನೆ: “ರಾಜ್ಯದಲ್ಲಿ ಕೇವಲ 16 ಆಕ್ಟಿವ್ ಪ್ರಕರಣಗಳಿವೆ. ಯಾವುದೇ ಗಾಬರಿಯ ಅಗತ್ಯವಿಲ್ಲ. ಕೇಂದ್ರದಿಂದ ಮಾರ್ಗಸೂಚಿ ಬಂದಿಲ್ಲ. ನಿರಂತರ ಮಾನಿಟರಿಂಗ್ ಮಾಡಲಾಗುತ್ತಿದೆ,” ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.